ತಾಲೂಕ ಕಚೇರಿಗಳ ಸ್ಥಾಪನೆಗೆ ಆಗ್ರಹ
ಕಚೇರಿ
ಪಾಟೀಲ


ವಿಜಯಪುರ, 19 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನಿಂದ ಪ್ರತ್ಯೇಕವಾಗಿ ರಚನೆಗೊಂಡಿರುವ ನಿಡಗುಂದಿ ತಾಲೂಕ ಕೇಂದ್ರದಲ್ಲಿ ಈವರೆಗೂ ತಾಲೂಕ ಕಚೇರಿಗಳನ್ನು ತೆರೆದಿಲ್ಲ. ಆಡಳಿತದ ಹಿತದೃಷ್ಟಿಯಿಂದ ಶೀಘ್ರವೇ ತಾಲೂಕ ಕಚೇರಿಗಳನ್ನು ಆರಂಭಿಸುವಂತೆ ಆಗ್ರಹಿಸಿ ನಿಡಗುಂದಿ ತಾಲೂಕ ಅಭಿವೃದ್ಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಬಸವನಬಾಗೇವಾಡಿ ವಿಧಾನ ಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಅವರಿಗೆ ಮನವಿ ಸಲ್ಲಿಸಿತು.

ಭಾನುವಾರ ವಿಜಯಪುರ ನಗರದಲ್ಲಿ ನಿಡಗುಂದಿ ತಾಲೂಕ ಅಭಿವೃದ್ಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಸಚಿವರಾದ ಶಿವಾನಂದ ಪಾಟೀಲ ಅವರನ್ನು ಭೇಟಿಯಾದ ನಿಡಗುಂದಿ ಪಟ್ಟಣ ಪಂಚಾಯತ್ ಸದಸ್ಯರು, ತಾಲೂಕಿನ ಪ್ರಮುಖರು, ಆಡಳಿತ ಹಿತದೃಷ್ಟಿಯಿಂದ ಬಸವನಬಾಗೇವಾಡಿ ತಾಲೂಕಿನಿಂದ ಪ್ರತ್ಯೇಕಗೊಂಡು ನಿಡಗುಂದಿ ತಾಲೂಕು ರಚನೆಯಾಗಿದೆ. ಆದರೆ ಆಡಳಿತನ ನಿರ್ವಹಣೆಗೆ ತಹಶಿಲ್ದಾರರ ಕಚೇರಿ ಹೊರತಾಗಿ ಇತರೆ ಇಲಾಖೆಗಳ ಕಚೇರಿ ಇಲ್ಲದ ಕಾರಣ ತಾಲೂಕಿನ ಜನರು ಸಂಕಷ್ಟ ಎದುರಿಸುವಂತಾಗಿದೆ ಎಂದು ಸಚಿವರಿಗೆ ಸಮಸ್ಯೆ ನಿವೇದಿಸಿಕೊಂಡರು.

ನಿಡಗುಂದಿ ತಾಲೂಕಿನ ಆಡಳಿತಕ್ಕೆ ವೇಗನೀಡಲು ಮಿನಿ ವಿಧಾನಸೌಧ, ಸಬ್ ರಿಜಿಸ್ಟರ್ ಕಚೇರಿ, ಎಪಿಎಂಸಿ, ಬಸ್ ಡೀಪೋ, ಬಿಇಓ ಕಛೇರಿ, ತಾಲೂಕ ಆರೋಗ್ಯಾಧಿಕಾರಿ ಕಚೇರಿ ಸೇರಿದಂತೆ ಬಹುತೇಕ ಕಚೇರಿಗಳು ತಾಲೂಕ ಕೇಂದ್ರದಲ್ಲಿ ಇಲ್ಲ ಎಂದು ತಾವು ಸಲ್ಲಿಸಿದ ಮನವಿ ಪತ್ರದಲ್ಲಿ ವಿವರಿಸಿದ್ದಾರೆ.

ತಾಲೂಕಿನ ಅಭಿವೃದ್ಧಿ ಹಿತದೃಷ್ಟಿಯಿಂದ ನಿಡಗುಂದಿ ತಾಲೂಕ ಕೇಂದ್ರದಲ್ಲಿ ತುರ್ತಾಗಿ ತಾಲೂಕ‌ ಕಛೇರಿಗಳನ್ನು ಪ್ರಾರಂಭಿಸುವುದು ಅಗತ್ಯವಾಗಿದೆ. ಈ ಕುರಿತು ನಿಡಗುಂದಿ ಪಟ್ಟಣ ಪಂಚಾಯತ್ ಸರ್ವ ಸದಸ್ಯರು ಹಾಗೂ ಪಕ್ಷಾತೀತವಾಗಿ ಎಲ್ಲ ಮುಖಂಡರು ಪಟ್ಟಣದ ರುದ್ರೇಶ್ವರ ಮಠದಲ್ಲಿ ಸಭೆ ಸೇರಿ ತಾಲೂಕ ಮಟ್ಟದ ಕಛೇರಿಗಳನ್ನು ತೆರೆಯುವಂತೆ ಆಗ್ರಹಿಸಿ ಮನವಿ ಮಾಡಿಕೊಳ್ಳಲು ನಿರ್ಧರಿಸಿದ್ದಾಗಿ ಹೇಳಿದರು.

ನಿಡಗುಂದಿ ತಾಲೂಕಿನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರೇ ಹೆಚ್ಚಿನ ಸಂಖ್ಯೆಯಲ್ಲಿ, ತಾಲೂಕ ಕೇಂದ್ರದ ಸುತ್ತಲೂ ಹತ್ತಾರು ಪುನರ್ವಸತಿ ಗ್ರಾಮಗಳಿವೆ. ತಾಲೂಕ ಕೇಂದ್ರದ ಕಛೇರಿಗಳು ಇಲ್ಲದ ಕಾರಣ ಸಂತ್ರಸ್ತರು ಹಲವು ರೀತಿಯಲ್ಲಿ ಸಮಸ್ಯೆ ಎದುರಿಸುವಂತಾಗಿದೆ ಎಂದು ಸಮಸ್ಯೆಗಳನ್ನು ಸಚಿವರ ಎದುರು ಬಿಚ್ಚಿಟ್ಟರು.

ಹೀಗಾಗಿ ಬರುವ ಒಂದು ತಿಂಗಳೊಳಗೆ ನಿಡಗುಂದಿ ತಾಲೂಕ ಮಟ್ಟದ ಕಚೇರಿಗಳನ್ನು ತೆರೆಯುವ ಕುರಿತು ಕಂದಾಯ ಗ್ರಾಮದಲ್ಲಿ ವ್ಯಾಪ್ತಿಯಲ್ಲಿ ಸ್ಥಳಗಳನ್ನು ಗುರುತಿಸುವಂತೆ ಮನವಿ ಮಾಡಿದರು.

ನಿಡಗುಂದಿ ನಾಗರಿಕರ ಬೇಡಿಕೆಗಳನ್ನು ಸಮಚಿತ್ತದಿಂದ ಆಲಿಸಿದ ಸಚಿವ ಶಿವಾನಂದ ಪಾಟೀಲ ಅವರು, ನಮ್ಮ ಸರ್ಕಾರ ಬಜೆಜನಲ್ಲಿ ನಿಡಗುಂದಿ ತಾಲೂಕಿನ ಪ್ರಜಾಸೌಧ ನಿರ್ಮಾಣಕ್ಕೆ 8.60 ಕೋಟಿ ಅನುದಾನ ಒದಗಿಸಿದೆ. ಈಗಾಗಲೇ ಅನುಮೋದನೆಗಾಗಿ ಸಮಗ್ರ ಯೋಜನಾ ವರದಿ ಸಲ್ಲಿಸಲಾಗಿದ್ದು, ಶೀಘ್ರವೇ ಯೋಜನೆಗೆ ಚಾಲನೆ ನೀಡುವುದಾಗಿ ಭರವಸೆ ನೀಡಿದರು.

ತಾಲೂಕ ಪ್ರಜಾಸೌಧ ನಿರ್ಮಾಣದ ಬಳಿಕ ತಾಲೂಕ ಆಡಳಿತಕ್ಕೆ ಅಗತ್ಯ ಇರುವ ಕಚೇರಿಗಳು ಕಾರ್ಯಾರಾಂಭ ಮಾಡಲಿವೆ ಎಂದು

4.85 ಕೋಟಿ ರೂ. ವೆಚ್ಚದಲ್ಲಿ ನಿಡಗುಂದಿ ಪಟ್ಟಣದಲ್ಲಿ ಎಸ್.ಎಫ್.ಸಿ. ವಿಶೇಷ ಅನುದಾನದಲ್ಲಿ ಮೆಗಾ ಮಾರುಕಟ್ಟೆ ಕಾಮಗಾರಿ ಪ್ರಗತಿಯಲ್ಲಿದೆ. ತಾಲೂಕ ಪಂಚಾಯತ್ ಹಾಗೂ ಪಶು ಆಸ್ಪತ್ರೆ, ಸರ್ಕಾರಿ ಐಐಟಿ ಕಾಲೇಜು ಕಾರ್ಯಾರಂಭ ಮಾಡಿವೆ. ಅಗ್ನಿಶಾಮಕ ಠಾಣೆ ಮಂಜೂರಾಗಿದ್ದು, ಅಮೃತ 2.0 ಯೋಜನೆ ಅಡಿಯಲ್ಲಿ ಪಟ್ಟಣದ ಕುಡಿಯುವ ನೀರಿನ ಆಂತರಿಕ ಕೊಳವೆ ಮಾರ್ಗ ನಿರ್ಮಾಣಕ್ಕೆ 34.20 ಕೋಟಿ ರೂ. ಅನುದಾನದಲ್ಲಿ ಕಾಮಗಾರಿಗೆ ಟಂಡರ್ ಕರೆದು, ಕಾರ್ಯಾದೇಶ ನೀಡಲಾಗಿದೆ ಎಂದು ವಿವರಿಸಿದರು.

ಉಳಿದಂತೆ ತಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ತ್ವರಿತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಿಡಗುಂದಿ ಪ್ರಮುಖರಾದ ಸಂಗಣ್ಣ ಕೋತಿನ, ಶಿವಾನಂದ ಮುಚ್ಚಂಡಿ, ಎಸ್.ಜಿ. ನಾಗಠಾಣ, ಶಂಕ್ರಪ್ಪ ರೇವಡಿ, ತಮ್ಮಣ್ಣ ಬಂಡಿವಡ್ಡರ, ಶೇಖರ ದೊಡಮನಿ, ಬಸವರಾಜ ಕುಂಬಾರ, ಶಿವಾನಂದ ಅವಟಿ, ಸಂಗಮೇಶ ಗೂಗ್ಯಾಳ, ಬಸಯ್ಯ ಪತ್ರಿಮಠ, ಬಸವರಾಜ ವಂದಾಲ, ಸುರೇಶ ಬಾಗೇವಾಡಿ, ಹನುಮಂತ ಬೇವಿನಕಟ್ಟಿ, ಈರಪ್ಪ ಗೋನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande