ಕೊಪ್ಪಳ, 18 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ದೀಪಾವಳಿ ಹಬ್ಬ ಆಚರಣೆಯನ್ನು ಯಾವುದೇ ರೀತಿಯ ಅನಾಹುತಗಳಾಗದಂತೆ ಮುಂಜಾಗ್ರತಾ ಕ್ರಮ ವಹಿಸಿ ಸಂತಸದಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ಕೊಪ್ಪಳ ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ದೇಶ ಹಾಗೂ ನಮ್ಮ ನಾಡಿನಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಸಂತಸ, ಸಂಭ್ರಮ, ಸಡಗರದಿಂದ ಪ್ರತಿವರ್ಷವೂ ಆಚರಣೆ ಮಾಡಲಾಗುತ್ತದೆ. ಅದರಂತೆ ಈ ವರ್ಷದ ದೀಪಾವಳಿ ಸಂದರ್ಭದಲ್ಲಿ ಎಲ್ಲರ ಮನೆಗಳಲ್ಲಿ ದೀಪಗಳನ್ನು ಬೆಳಗಿಸುವುದರ ಮೂಲಕ ಕತ್ತಲೆಯನ್ನು ಹೋಗಲಾಡಿಸಿ, ಬೆಳಕಿನ ಸಂಭ್ರಮವನ್ನು ಸಂತೋಷದ ಭರವಸೆಯೊಂದಿಗೆ, ಪಟಾಕಿಗಳನ್ನು ಸಿಡಿಸುವ ಮೂಲಕ ಹಬ್ಬವನ್ನು ಆಚರಿಸಲಾಗುವುದು.
ಆದರೆ ಪಟಾಕಿಗಳನ್ನು ಸಿಡಿಸುವ ಸಮಯದಲ್ಲಿ ಸಂಭವಿಸುವ ದುರಂತಗಳಿಂದ ಹಬ್ಬದ ಸಂತಸವು ಮಾಸಿಹೋಗಬಾರದು. ಹಾಗಾಗಿ ಬೆಳಗಿನ ಹಬ್ಬವನ್ನು ಆಚರಿಸುವಾಗ ಹಾಗೂ ಪಟಾಕಿಗಳನ್ನು ಸಿಡಿಸುವ ಸಂದರ್ಭದಲ್ಲಿ ಸಾರ್ವಜನಿಕರು ಬಹಳ ಜಾಗರೂಕತೆಯನ್ನು ಹಾಗೂ ಗೌರವಾನ್ವಿತ ಸುಪ್ರಿಂಕೋರ್ಟ್ ಮತ್ತು ಮಾನ್ಯ ಸರ್ಕಾರವು ನೀಡಿರುವ ಹಾಗೂ ಕಾಲಕಾಲಕ್ಕೆ ನೀಡುವ ಸೂಚನೆಗಳನ್ನು ಪಾಲನೆ ಮಾಡಬೇಕು. ಈ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಸಾರ್ವಜನಿಕರು ದೀಪಾವಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಮತ್ತು ಪಟಾಕಿ ಸಿಡಿಸುವ ಸಮಯದಲ್ಲಿ ಗಮನ ಹಾಗೂ ಜಾಗ್ರತೆ ವಹಿಸುವಂತೆ ಮತ್ತು ಪ್ರಸ್ತುತ ತಿಳಿಸಲಾಗುವ ಅಂಶಗಳಂತೆ ಪಾಲನೆ ಮಾಡಬೇಕು.
ದೀಪಾವಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ 2018ರ ಮಾನ್ಯ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಆದೇಶದಂತೆ CSIR-NEERIಇವರು ಶಿಪಾರಸ್ಸು ಮಾಡಿರುವಂತೆ ಹಾಗೂ ಗೌರವಾನ್ವಿತ ಸುಪ್ರೀಂ ಕೋರ್ಟ್ ಆದೇಶ ದಿನಾಂಕ: 30/10/2018 ರಲ್ಲಿ ತಿಳಿಸಿರುವಂತೆ ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು.
ಜಿಲ್ಲೆಯಾದ್ಯಂತ ಹಸಿರು ಪಟಾಕಿ ಹೊರತುಪಡಿಸಿ ನಿಷೇಧಿತ ಪಟಾಕಿಗಳ ಉತ್ಪಾದನೆ, ಸಂಗ್ರಹ ಮತ್ತು ಮಾರಾಟವನ್ನು ನಿಷೇಧಿಸಲಾಗಿದ್ದು, ಅದರಂತೆ ಎಲ್ಲರೂ ಪಾಲನೆ ಮಾಡಬೇಕು. ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ದೀಪಾವಳಿ ಹಬ್ಬದಲ್ಲಿ ಸಿಡಿಸುವ ಪಟಾಕಿಗಳಿಂದಾಗುವ ಶಬ್ದ ಮತ್ತು ವಾಯು ಮಾಲಿನ್ಯವನ್ನು ನಿಯಂತ್ರಸಬೇಕು. ದೀಪಾವಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಬಳಸುವಾಗ ಯಾವುದೇ ಪ್ರಾಣಿ, ಪಕ್ಷಿಗಳು, ಮಕ್ಕಳು ಹಾಗೂ ವೃದ್ಧರಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು. ಯಾವುದೇ ಸ್ಥಳೀಯ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳ ಸುತ್ತಮುತ್ತಲಿನ ಹಾಗೂ ಇನ್ನಾವುದೇ ನಿಷೇಧಿತ ಪ್ರದೇಶದಲ್ಲಿ ಪಟಾಕಿಗಳನ್ನು ಸ್ಪೋಟಿಸುವಂತಿಲ್ಲ ಅಥವಾ ಬಳಸುವಂತಿಲ್ಲ.
ಸಾರ್ವಜನಿಕರು ಸಂಚರಿಸುವ ರಸ್ತೆಗಳ ಮೇಲೆ ಹಾಗೂ ರಸ್ತೆಗಳ ಮಧ್ಯದಲ್ಲಿ ಪಟಾಕಿಗಳನ್ನು ಸಿಡಿಸುವಂತಿಲ್ಲ. ಪಟಾಕಿಗಳನ್ನು ಬಳಕೆ ಮಾಡುವುದರಿಂದ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಾಗೂ ಯಾವುದೇ ಅನಾಹುತವಾಗದಂತೆ ಹಬ್ಬವನ್ನು ಆಚರಣೆ ಮಾಡಬೇಕು. ಸಾರ್ವಜನಿಕರು ಪಟಾಕಿಗಳನ್ನು ಸಿಡಿಸುವಾಗ ಅಥವಾ ಬಳಕೆ ಮಾಡುವಾಗ ಬಹಳ ಜಾಗ್ರತೆಯನ್ನು ವಹಿಸಬೇಕು. ಚಿಕ್ಕ ಮಕ್ಕಳಿಗೆ ಪಟಾಕಿಗಳನ್ನು ಕೊಟ್ಟು ಅವುಗಳ ಬಳಕೆ ಬಗ್ಗೆ ಸರಿಯಾಗಿ ತಿಳಿಸದೇ ಆಚರಣೆ ಮಾಡುವುದು ಅನಾಹುತಗಳಿಗೆ ದಾರಿ ಮಾಡಿಕೊಡುತ್ತದೆ. ಕೆಲವೊಮ್ಮೆ ಪಟಾಕಿಗಳು ಕೂಡಲೇ ವ್ಯತಿರಿಕ್ತ ಪ್ರತಿಕ್ರಿಯೆಗೊಳಪಟ್ಟು ಸಿಡಿಯುವುದರಿಂದ ಪಟಾಕಿ ಬಳಕೆ ಮಾಡಿದವರಿಗೆ ಹಾಗೂ ಅಲ್ಲಿ ನೆರೆದಿರುವವರಿಗೆ ಗಾಯ ಅಥವಾ ಅನಾಹುತಗಳಾಗುವ ಸಾಧ್ಯತೆಗಳಿರುತ್ತವೆ. ಕಾರಣ ಪಟಾಕಿಗಳ ಬಳಕೆ ಸಮಯದಲ್ಲಿ ಬಹಳ ಜಾಗರೂಕತೆಯನ್ನು ವಹಿಸಬೇಕು. ಪಟಾಕಿಗಳನ್ನು ಸಿಡಿಸುವ ಸಂದರ್ಭದಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಹಾಗೂ ಸುತ್ತಮತ್ತಲಿನ ಮಕ್ಕಳ, ವೃದ್ಧರ ಅಥವಾ ಸಾರ್ವಜನಿಕ ಆರೋಗ್ಯ ಹಾಗೂ ಆಸ್ತಿಗಳಿಗೆ ದಕ್ಕೆಯಾಗದಂತೆ ನೋಡಿಕೊಳ್ಳಬೇಕು.
ಹಿಂದಿನಿಂದಲೂ ಸಂಪ್ರದಾಯಕವಾಗಿ ದೀಪಾವಳಿಯನ್ನು ಮಣ್ಣಿನ ಹಣತೆಗಳಲ್ಲಿ ದೀಪಗಳನ್ನು ಬೆಳಗಿಸುವುದರ ಮೂಲಕ ಆಚರಣೆ ಮಾಡಿಕೊಂಡು ಬರಲಾಗುತ್ತಿದ್ದು, ಅದರಂತೆ ಈ ವರ್ಷ ಹಬ್ಬದ ಆಚರಣೆಯಲ್ಲೂ ಸಹ ಮಣ್ಣಿನ ಹಣತೆಗಳನ್ನೇ ಬಳಕೆ ಮಾಡುವುದರಿಂದ ನಮ್ಮ ಸ್ಥಳೀಯ ಹಣತೆ ತಯಾರಿಕರಿಗೆ ಉತೇಜನ ಮತ್ತು ಉದ್ಯೋಗ ಸೃಷ್ಟಿಸಿದಂತಾಗುವುದು.
ಬೆಳಕಿನ ಹಬ್ಬ ದೀಪಾವಳಿ ಆಚರಣೆ ಸಂದರ್ಭದಲ್ಲಿ ಮಕ್ಕಳಿಗೆ ಪಟಾಕಿಗಳನ್ನು ಕೊಡುವಾಗ ಮತ್ತು ಸಿಡಿಸುವಾಗ ತಾತ್ಸಾರ ಮನೋಭಾವ ಅಥವಾ ಅಲಕ್ಷ್ಯತನ ವಹಿಸದೇ, ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಸಾರ್ವಜನಿಕರೆಲ್ಲರೂ ಎಚ್ಚರ ಮತ್ತು ಜಾಗ್ರತೆಯನ್ನು ವಹಿಸಿ, ಎಲ್ಲರ ಮನೆಗಳಲ್ಲಿ ಹಣತೆಯ ದೀಪಗಳನ್ನು ಬೆಳಗುವುದರ ಮೂಲಕ ಅತ್ಯಂತ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸುವಂತೆ ತಿಳಿಸುತ್ತಾ ಜಿಲ್ಲೆಯ ಜನತೆಗೆ ಜಿಲ್ಲಾಧಿಕಾರಿಗಳು ಶುಭ ಹಾರೈಸಿದ್ದಾರೆ ಎಂದು ಕೊಪ್ಪಳ ಜಿಲ್ಲಾಡಳಿತ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್