ಬಳ್ಳಾರಿ, 18 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಅನಿರೀಕ್ಷಿತ ದಾಳಿ, ತಪಾಸಣೆಯನ್ನು ಕೈಗೊಂಡು ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರನ್ನು ರಕ್ಷಣೆ ಮಾಡುವಂತೆ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ಹೇಳಿದ್ದಾರೆ.
ಅವರು ಶುಕ್ರವಾರ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನಾ ಕ್ರಿಯಾ ಯೋಜನೆಯ ಅನುಷ್ಠಾನ ಪ್ರಗತಿ ಕುರಿತಂತೆ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಕಾರ್ಯಕಾರಿ ಹಾಗೂ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ನಗರ ಪ್ರದೇಶಗಳಲ್ಲಿನ ಕಿರಾಣಿ, ಬಟ್ಟೆ ಅಂಗಡಿಗಳು, ಹೋಟೆಲ್, ಗ್ಯಾರೇಜ್, ಕೋಳಿ ಫಾರಂ ಹಾಗೂ ಇತರೆ ವಾಣಿಜ್ಯ ಸಂಸ್ಥೆಗಳು ಮತ್ತು ಕಾರ್ಖಾನೆಗಳು, ಕೈಗಾರಿಕೆ ಪ್ರದೇಶಗಳಲ್ಲಿ ಯಾವುದೇ ರೀತಿಯ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರನ್ನು ನೇಮಿಸಿಕೊಂಡಿದ್ದಲ್ಲಿ, ಸಂಬ0ಧಪಟ್ಟ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಬೇಕು. ಈ ಸಂದರ್ಭದಲ್ಲಿ ರಕ್ಷಣೆಯಾದ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರಿಗೆ ಸೂಕ್ತ ಪುನರ್ವಸತಿ ಕಲ್ಪಿಸಬೇಕು ಮತ್ತು ಆ ಮಕ್ಕಳನ್ನು ಬಾಲ ಕಾರ್ಮಿಕತೆಗೆ ತಳ್ಳಿದ ಪೋಷಕರಿಗೂ ಸೂಕ್ತ ಸಮಾಲೋಚನೆ ಮೂಲಕ ಮಕ್ಕಳ ಶಿಕ್ಷಣ ಹಾಗೂ ಉತ್ತಮ ಜೀವನ ರೂಪಿಸಲು ಮುಂದಾಗುವAತೆ ಮನವರಿಕೆ ಮಾಡಿಕೊಡಬೇಕು. ಮಕ್ಕಳ ಪರಿಶೀಲನೆ ಕಾರ್ಯ ಮಾಡುವುದರಿಂದ ಕೂಡ ಮಕ್ಕಳು ಬಾಲಕಾರ್ಮಿಕತೆಗೆ ಒಳಗಾಗುವುದನ್ನು ತಪ್ಪಿಸಬಹುದು ಎಂದರು.
ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಎಲ್ಲಾ ರೀತಿಯ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಆಯಾ ವೃತ್ತದ ಕಾರ್ಮಿಕ ನಿರೀಕ್ಷಕರು ಬಾಲಕಾರ್ಮಿಕ ಯೋಜನಾಧಿಕಾರಿಗಳೊಂದಿಗೆ ನಿಯಮಿತವಾಗಿ ಹೆಚ್ಚಿನ ಪ್ರಮಾಣದಲ್ಲಿ ಬಾಲಕಾರ್ಮಿಕ ತಪಾಸಣೆಗೆ ವಿವಿಧ ಪ್ರದೇಶ, ಕಾರ್ಖಾನೆ, ಮಾರುಕಟ್ಟೆಗಳಿಗೆ ಭೇಟಿ ನೀಡಬೇಕು. ಬೇರೆ ಬೇರೆ ರಾಜ್ಯಗಳಿಂದ ಮತ್ತು ವಿವಿಧ ಹಳ್ಳಿಗಳಿಂದ ಕಾರ್ಖಾನೆಗಳಿಗೆ ದುಡಿಯಲು ಬರುವ ಬಡ ಕಾರ್ಮಿಕರು ವಾಸಿಸುವಂತಹ ಸ್ಥಳಗಳಲ್ಲಿ ಹಾಗೂ ವಿಶೇಷವಾಗಿ ಇಟ್ಟಿಗೆ ಭಟ್ಟಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ವಾಸಿಸುವ ಸ್ಥಳಗಳಿಗೆ ಭೇಟಿ ನೀಡಿ, ಅವರ ಮಕ್ಕಳನ್ನು ಅಂಗನವಾಡಿ ಕೇಂದ್ರ ಮತ್ತು ಸಮೀಪದ ಸರ್ಕಾರಿ ಶಾಲೆಗೆ ಸೇರಿಸಬೇಕು. ಅವಶ್ಯವಿದ್ದಲ್ಲಿ ಟೆಂಟ್ ಶಾಲೆಗಳನ್ನು ತೆರೆದು ವಲಸೆ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಒದಗಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯಕಾರ್ಯದರ್ಶಿಗಳಾದ ಮಹಾಂತೇಶ ಎಸ್. ದರಗದ್ ಅವರು ಮಾತನಾಡಿ, ರಕ್ಷಿಸಲ್ಪಟ್ಟ ಬಾಲಕಾರ್ಮಿಕರನ್ನು ನಿಯಮಾನುಸಾರವಾಗಿ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿದ ನಂತರದಲ್ಲಿ ಅವರನ್ನು ವಸತಿ ನಿಲಯಗಳಿಗೆ ದಾಖಲಿಸಬೇಕು. ಬಾಲಕಾರ್ಮಿಕರ ಕುಟುಂಬಕ್ಕೆ ಆದಾಯದ ಮೂಲವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಯೋಜನೆಗಳನ್ನು ಪರಿಚಯಿಸಿ, ಸ್ವಾವಲಂಬನೆಯಿAದ ಜೀವನ ನಡೆಸಲು ಅವರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಿ ಕೊಡಬೇಕು. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಇದಕ್ಕಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಕಾರ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.
ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ ಅವರು ಮಾತನಾಡಿ, ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಜಿಲ್ಲಾ ಬಾಲಕಾರ್ಮಿಕ ನಿರ್ಮೂಲನಾ ಹಾಗೂ ಪುನರ್ವಸತಿ ಸೊಸೈಟಿ ವತಿಯಿಂದ ಅಗತ್ಯ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಗಳಿಂದ ತಪಾಸಣೆ ನಡೆಸಿ ಜಿಲ್ಲೆಯಲ್ಲಿ ಬಾಲಕಾರ್ಮಿಕ, ಕಿಶೋರ ಕಾರ್ಮಿಕರನ್ನು ರಕ್ಷಿಸಲಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ 67 ಬಾಲ ಹಾಗೂ ಕಿಶೋರ ಕಾರ್ಮಿಕರನ್ನು ಪತ್ತೆ ಮಾಡಲಾಗಿದ್ದು, 17 ಪ್ರಕರಣಗಳನ್ನು ಸಂಬAಧಪಟ್ಟ ನ್ಯಾಯಾಲಯಗಳಲ್ಲಿ ದಾಖಲಿಸಲಾಗಿದೆ.
ಬಾಲಕಾರ್ಮಿಕರಾಗಿ ಪತ್ತೆಯಾದ 6 ಮಕ್ಕಳಿಗೆ ಮಾಲೀಕರಿಂದ ವಸೂಲಿಯಾದ ದಂಡದ ಮೊತ್ತ ಮತ್ತು ಸರ್ಕಾರದ ವಂತಿಕೆ ಸೇರಿ ಕಾರ್ಪಸ್ ಫಂಡ್ ಮೊತ್ತವನ್ನು ಒಟ್ಟು 35,000 ರೂ.ಗಳನ್ನು ಪ್ರತಿ ಮಗುವಿಗೆ ಜಿಲ್ಲಾಧಿಕಾರಿಗಳು ಹಾಗೂ ಕಾರ್ಮಿಕ ಅಧಿಕಾರಿಗಳ ಮೂಲಕ ಬಾಂಡ್ ಮತ್ತು ಚೆಕ್‌ಗಳನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಸುಧಾ ಗರಗರವರು ಮಾತನಾಡಿ ಸೊಸೈಟಿಗೆ ರಾಜ್ಯದಿಂದ ಬಂದಿರುವ ಸುತ್ತೋಲೆಗಳ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ್, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ ಶೆಟ್ಟಪ್ಪನವರ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್