ಕೊಪ್ಪಳ, 17 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ರಾಜ್ಯ ಸರ್ಕಾರ ಯುವ ಸಬಲಿಕರಣಕ್ಕಾಗಿ ಯುವಜನೋತ್ಸವ ದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಯುವಜನರಲ್ಲಿರುವ ಜನಪದ ಕಲೆ, ಸಾಹಿತ್ಯ ಮತ್ತು ಕ್ರೀಡೆಯಂತಹ ಪ್ರತಿಭೆಗಳನ್ನು ಗುರುತಿಸಲು ಯುವಜನೋತ್ಸವ ಕಾರ್ಯಕ್ರಮವು ಒಂದು ಉತ್ತಮ ವೇದಿಕೆಯಾಗಿದೆ ಎಂದು ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್ ಅವರು ತಿಳಿಸಿದ್ದಾರೆ.
ಶುಕ್ರವಾರ ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಹಾಗೂ ರಾಜ್ಯ ಯುವ ಸಂಘಗಳ ಒಕ್ಕೂಟ (ರಿ), ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಕೊಪ್ಪಳ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಯುವಜನತೆಯಲ್ಲಿರುವ ಪ್ರತಿಭೆಯನ್ನು ಪ್ರದರ್ಶನ ಮಾಡಲು ಅವಕಾಶಗಳನ್ನು ಕಲ್ಪಿಸಿ, ಅವರಿಗೆ ರಾಜ್ಯ, ರಾಷ್ಟç ಮಟ್ಟದಲ್ಲಿ ತಮ್ಮ ಕಲೆಯ ನೈಪುಣ್ಯತೆಯನ್ನು ಪ್ರದರ್ಶನ ಮಾಡುವುದಕ್ಕಾಗಿ ಯುವಜನೋತ್ಸವದಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಯುವ ಜನತೆ ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದು ತಿಳಿಸಿದರು.
ನಮ್ಮ ದೇಶ ಇಡೀ ವಿಶ್ವದಲ್ಲೇ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದ್ದು, ಆದರೆ, ಕಲೆ, ಸಂಗೀತ ಮತ್ತು ವಿವಿಧ ಕ್ರೀಡೆಗಳಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವವರ ಸಂಖ್ಯೆ ಕಡಿಮೆಯಿದೆ. ಹಾಗಾಗಿ ಕಲೆ, ಸಂಗೀತ ಮತ್ತು ವಿವಿಧ ಕ್ರೀಡೆಗಳಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವು ಮೂಲಕ ಅವರಿಗೆ ಉತ್ತೇಜಿಸಲಾಗುತ್ತಿದೆ. ಅಂತಹ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಂಡು ಮುಂದಿನ ದಿನಗಳಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವವರ ಸಂಖ್ಯೆ ಹೆಚ್ಚಾಗಬೇಕೆಂದು ಹೇಳಿದರು.
ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲೊಂದಾದ ಪದ್ಮಶ್ರೀ ಪ್ರಶಸ್ತಿ ಪಡೆದ ಬೀಮವ್ವ ಶಿಳ್ಳೇಕ್ಯಾತರ್ ಅವರು ನಮ್ಮ ಜಿಲ್ಲೆಯ ಹೆಮ್ಮೆಯಾಗಿದ್ದಾರೆ. ಅವರಲ್ಲಿರುವ ಪ್ರತಿಭೆಯು ಅವರನ್ನು ಹಳ್ಳಿಯಿಂದ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ಪದ್ಮಶ್ರೀ ಪುರಸ್ಕೃತರಾದ ಬೀಮವ್ವ ಶಿಳ್ಳೇಕ್ಯಾತರ್ ಅವರು 103 ವರ್ಷದ ತಮ್ಮ ಇಳಿವಯಸ್ಸಿನಲ್ಲೂ ತಮ್ಮಲ್ಲಿನ ಕಲೆಯನ್ನು ಯಾವ ರೀತಿಯಲ್ಲಿ ಪ್ರದರ್ಶಿಸುತ್ತಿದ್ದಾರೆ. ಅವರನ್ನು ನಾವೆಲ್ಲರೂ ಸ್ಪೂರ್ತಿಯಾಗಿಸಿಕೊಳ್ಳಬೇಕು. ವಿಶೇಷವಾಗಿ ನಮ್ಮ ಯುವಜನರು ಯಾವುದೇ ರೀತಿಯಲ್ಲಿ ಹಿಂಜರಿತ ತೋರದೆ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ, ನಮ್ಮ ಜಿಲ್ಲೆ, ರಾಜ್ಯ ಮತ್ತು ದೇಶಕ್ಕೆ ಉತ್ತಮ ಹೆಸರು ತರುವರಂತವರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಪದ್ಮಶ್ರೀ ಪುರಸ್ಕೃತರಾದ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ್ ಅವರು, ಇಂದಿನ ಮಕ್ಕಳು ಮತ್ತು ಯುವ ಸಮುದಾಯವು ಮೊಬೈಲ್ ಬಳಕೆಗೆ ಹೆಚ್ಚು ಸಮಯವನ್ನು ವ್ಯಯ ಮಾಡುತ್ತಾರೆ. ಕಲೆ, ಸಾಹಿತ್ಯ ಮತ್ತು ಕ್ರೀಡೆಗಳಲ್ಲಿ ಭಾಗವಹಿಸಿ, ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಬೇಕು. ಪೋಷಕರು ತಮ್ಮ ಮಕ್ಕಳಿಗೆ ಹೆಚ್ಚು ಮೊಬೈಲ್ ಬಳಕೆ ಮಾಡದಂತೆ ತಿಳಿ ಹೇಳಬೇಕು. ಅದರ ಬದಲಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಅವರಿಗೆ ಪ್ರೆರೆಪಿಸಬೇಕು ಎಂದು ಹೇಳಿದರು.
ಕೊಪ್ಪಳ ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್ ಅವರು ಮಾತನಾಡಿ, ಯುವಕರು ಸಹ ನಮ್ಮ ದೇಶದ ಬೆನ್ನೆಲುಬು ಮತ್ತು ಭವ್ಯ ಪ್ರಜೆಗಳಾಗಿದ್ದಾರೆ. ನಮ್ಮ ರಾಜ್ಯ ಸರ್ಕಾರವು ಯುವಕರು ಮತ್ತು ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ದೇಶದ ಯುವ ಜನತೆಯ ಶಕ್ತಿ ಹಾಗೂ ಅವರ ಪ್ರತಿಭೆಯನ್ನು ಪ್ರದರ್ಶಿಸಲು ಈ ಯುವಜನೋತ್ಸವ ಕಾರ್ಯಕ್ರಮ ಒಂದು ಉತ್ತಮ ವೇದಿಕೆಯಾಗಿದೆ. ನಮ್ಮ ಜಿಲ್ಲೆಯ ಯುವ ಪ್ರತಿಭೆಗಳು ವಿವಿಧ ಸಾಂಸ್ಕೃತಿಕ ಮತ್ತು ಕಲಾತ್ಮಕ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ನಮ್ಮ ಜಿಲ್ಲೆಯ ಹೆಸರು ತರುವಂತೆ ಮಾಡಬೇಕು ಎಂದು ಹೇಳಿದರು.
ಯುವಕರು ತಮ್ಮೊಳಗಿನ ಶಕ್ತಿಯನ್ನು ಅರಿತುಕೊಳ್ಳಬೇಕು. ನಿಮ್ಮ ಯೌವ್ವನವೇ ನಮ್ಮ ನಾಡಿನ ಸೂಕ್ತ ಸಂಪನ್ಮೂಲವಾಗಿದೆ. ನಮ್ಮ ಮುಖ್ಯ ಮಂತ್ರಿಗಳು ಯುವ ಜನತೆಯನ್ನು ಮೇಲೆತ್ತುವ ಉದ್ದೇಶದಿಂದ ರಾಜ್ಯ ಸರ್ಕಾರದಿಂದ ಅನೇಕ ಯುವಜನಪರ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ. ಬಡ ಯುವಕರ ವಿದ್ಯಾಭ್ಯಾಸಕ್ಕಾಗಿ ಲ್ಯಾಪ್‌ಟಾಪ್, ಬ್ಯಾಂಕ್ ಸಾಲ ಸೌಲಭ್ಯ, ನಿರುದ್ಯೋಗ ಭತ್ಯೆಯಾದ ಯುವನಿಧಿ, ಹೆಣ್ಣು ಮಕ್ಕಳಿಗೆ ಉಚಿತ ಕೌಶಲ್ಯಯುತ ತರಬೇತಿಯನ್ನು ನೀಡಲಾಗುತ್ತಿದೆ. ರಾಜ್ಯ ಸರ್ಕಾರದ ಎಲ್ಲಾ ಯುವಪರ ಯೋಜನಗಳನ್ನು ಸದುಪಯೋಗ ಪಡೆಸಿಕೊಂಡು ತಂದೆ-ತಾಯಿ ಹಾಗೂ ನಮ್ಮ ಜಿಲ್ಲೆಗೆ ಉತ್ತಮ ಕೊಡುಗೆ ಯುವಕರು ನೀಡುವಂತವರಾಗಬೇಕು ಎಂದರು.
ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ ಅವರು ಮಾತನಾಡಿ, ಯುವಜನೋತ್ಸವ ಕಾರ್ಯಕ್ರಮದಲ್ಲಿ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು. ಯುವಕರಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ನಮ್ಮ ಸರ್ಕಾರ ಯುವನಿಧಿ ಯೋಜನೆ ಜಾರಿ ಮಾಡಿದೆ. ನಮ್ಮ ಜಿಲ್ಲೆಯ ಸುಮಾರು 10 ಸಾವಿರಕ್ಕೂ ಅಧಿಕ ನಿರುದ್ಯೋಗಿ ವಿದ್ಯಾವಂತರು ಈ ಯೋಜನೆಯಡಿ ನೋಂದಾಯಿಸಿಕೊಂಡು, ಯುವನಿಧಿಯ ಲಾಭ ಪಡೆಯುತ್ತಿದ್ದಾರೆ. ಅರ್ಹ ಯುವಜನತೆ ಯುವನಿಧಿ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಹೊಲಿಗೆ ಯಂತ್ರ ವಿತರಣೆ: ಮಹಿಳೆಯರ ಸ್ವಾವಲಂಬನೆ ಬದುಕನ್ನು ಕಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಡಿ. ದೇವರಾಜ್ ಅರಸು ಅಭಿವೃದ್ಧಿ ನಿಗಮ ವತಿಯಿಂದ ಅರ್ಹ ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ಇದೇ ಸಂದರ್ಭದಲ್ಲಿ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಹಾಗೂ ಕನ್ನಡ ಜಾನಪದ ಪರಿಷತ್ತಿನ ರಾಜ್ಯ ಅಧ್ಯಕ್ಷರಾದ ಡಾ. ಎಸ್.ಬಾಲಾಜಿ, ರಾಜ್ಯ ಯುವ ಪ್ರಶಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶರಣಪ್ಪ ವಡಿಗೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ್ ಬಿ. ಜಾಬಗೌಡರ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷರಾದ ಮಂಜುನಾಥ ಜಿ. ಗೊಂಡಬಾಳ, ತಾಲ್ಲೂಕು ಕ್ರೀಡಾಧಿಕಾರಿ ಶರಬಸಪ್ಪ ಬಂಡಿಹಾಳ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಸಹಾಯಕ ಕ್ರೀಡಾಧಿಕಾರಿಗಳು, ರಾಜ್ಯ ಮತ್ತು ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತರು, ಯುವ ಸಂಘಗಳ ಒಕ್ಕೂಟಗಳು ಹಾಗೂ ನೋಂದಾಯಿತ ಯುವ ಮಂಡಳಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್