ಜಿನೇವಾ, 17 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಬೆಂಗಳೂರು ನಗರದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವಂತಹ ಕ್ವಾಂಟಮ್ ಸಿಟಿ ಅಭಿವೃದ್ದಿಗೆ, ಭೌತಶಾಸ್ತ್ರ ಹಾಗೂ ಕ್ವಾಂಟಮ್ ಸಂಶೋಧನೆಯಲ್ಲಿ ವಿಶ್ವದ ಪ್ರಮುಖ ಸಂಶೋಧನಾ ಸಂಸ್ಥೆಯಾಗಿರುವ ಇಟಿಹೆಚ್ [ ಹಾಗೂ ಜಿನೇವಾದ (GESDA) ಸೈನ್ಸ್ ಅಂಡ್ ಡಿಪ್ಲೋಮಸಿ ಆಂಟಿಸಿಪೇಟರ್ ನ ಜೊತೆ ಪಾಲುದಾರಿಕೆಗೆ ಚಿಂತನೆ ನಡೆಸಲಾಗುತ್ತಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಭೋಸರಾಜು ತಿಳಿಸಿದ್ದಾರೆ.
ಜಿನೇವಾದ ಸೈನ್ಸ್ ಅಂಡ್ ಡಿಪ್ಲೋಮಸಿ ಆಂಟಿಸಿಪೇಟರ್ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ವಿಶೇಷವಾಗಿ ಬೆಂಗಳೂರು ನಗರವನ್ನು ವಿಶ್ವದ ಕ್ವಾಂಟಮ್ ಕ್ಷೇತ್ರದ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ವಿಶ್ವದ ಕ್ವಾಂಟಮ್ ಕ್ಷೇತ್ರದ ಪ್ರಮುಖ ಸಮ್ಮೇಳನದಲ್ಲಿ ನಮ್ಮ ರಾಜ್ಯದಲ್ಲಿರುವ ವಿಫುಲ ಅವಕಾಶಗಳ ಬಗ್ಗೆ ವಿಸ್ತ್ರುತ ಮಾಹಿತಿಯನ್ನು ನೀಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಜಿನೇವಾದ ಸೈನ್ಸ್ ಅಂಡ್ ಡಿಪ್ಲೋಮಸಿ ಆಂಟಿಸಿಪೇಟರ್ ಸಮಾವೇಶದಲ್ಲಿ ಭಾಗವಹಿಸಿದ್ದ ಇಟಿಎಚ್ ಜ್ಯೂರಿಕ್ ಮಂಡಳಿಯ ಅಧ್ಯಕ್ಷರಾದ ಡಾ. ಮೈಕೇಲ್ ಹೆಂಗಾರ್ಟ್ನರ್ ಅವರನ್ನು ಭೇಟಿಯಾಗಿ ಸಚಿವರು ಚರ್ಚಿಸಿದರು.
ಕ್ವಾಂಟಮ್ ವಲಯದಲ್ಲಿ ಸಂಶೋಧನೆ ಮತ್ತು ಹೊಸತನವನ್ನು ಉತ್ತೇಜಿಸಲು ಇಟಿಎಚ್ ಜ್ಯೂರಿಕ್ ಮತ್ತು ಓಪನ್ ಕ್ವಾಂಟಮ್ ಇನ್ಸಿಟ್ಯೂಟ್ ಸಂಸ್ಥೆಗಳೊಂದಿಗೆ ರಾಜ್ಯ ಸರ್ಕಾರ ಸಹಕಾರದ ಬಗ್ಗೆ ಸುಧೀರ್ಘ ಚರ್ಚೆ ನಡೆಸಿದೆ. ವಿಜ್ಞಾನ, ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಅದರಲ್ಲೂ ಕ್ವಾಂಟಮ್ ಕ್ಷೇತ್ರದ ಸಂಶೋಧನೆಯಲ್ಲಿ ವಿಶ್ವದ ಪ್ರಮುಖ ಸಂಸ್ಥೆಯಾಗಿರುವ ಇಟಿಎಚ್ ಜ್ಯೂರಿಕ್ ಮತ್ತು ಕರ್ನಾಟಕದ ನಡುವೆ ಸಂಶೋಧನೆಯ ಪಾಲುದಾರಿಕೆಯನ್ನು ಸ್ಥಾಪಿಸುವ ಕುರಿತು ಚರ್ಚೆ ನಡೆಸಲಾಯಿತು. ಈ ಪಾಲುದಾರಿಕೆಯ ಮೂಲಕ ಶೈಕ್ಷಣಿಕ ಸಹಯೋಗ - ಕರ್ನಾಟಕದ ರಾಜ್ಯದ ಕ್ವಾಂಟಮ್ ಪ್ರತಿಭೆಯನ್ನು ETH ಝ್ಯೂರಿಕ್ ಡೊಮೇನ್‌ನ ಪದವಿ ಪರಿಸರ ವ್ಯವಸ್ಥೆಯೊಂದಿಗೆ ಸಂಪರ್ಕಿಸುವ ಮೂಲಕ ಜಂಟಿ ಸಂಶೋಧನೆ ಮತ್ತು ಫೆಲೋಶಿಪ್ ಕಾರ್ಯಕ್ರಮಗಳು ಆಯೋಜಿಸುವುದು ಸಾಧ್ಯವಾಗಲಿದೆ.
ಅಲ್ಲದೇ, ಕ್ವಾಂಟಮ್ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳಲ್ಲಿ ಬೆಂಗಳೂರು ನಗರ ಹಾಗೂ ರಾಜ್ಯದ ಮಾನವ ಸಂಪನ್ಮೂಲ ಭಾಗಿಯಾಗುವ ಅವಕಾಶ ದೊರೆಯಲಿದೆ. ಅಲ್ಲದೇ, ಈಗಾಗಲೇ ಈ ಸಂಶೋಧನಾ ಸಂಸ್ಥೆಗಳಲ್ಲಿ ಇರುವಂತಹ ತಂತ್ರಜ್ಞಾನದ ಬಳಕೆಗೂ ಅವಕಾಶ ದೊರೆಯಲಿದೆ. ಅಲ್ಲಿನ ತಂತ್ರಜ್ಞರು, ವಿಜ್ಞಾನಿಗಳು ನಮ್ಮ ನಗರದ ಅಭಿವೃದ್ದಿಗೆ ಸಹಕಾರ ನೀಡಲಿದ್ದಾರೆ. ಬೆಂಗಳೂರಿನಲ್ಲಿ ಇಟಿಎಚ್ - ETH – ಕರ್ನಾಟಕ ಕ್ವಾಂಟಮ್ ಸಹಕಾರ ಕೇಂದ್ರ ಸ್ಥಾಪನೆ, ದೀರ್ಘಕಾಲೀನ ಪಾಲುದಾರಿಕೆಗೆ ವೇದಿಕೆ ಬಗ್ಗೆ ಮಂಡಳಿಯ ಅಧ್ಯಕ್ಷರಾದ ಡಾ. ಮೈಕೇಲ್ ಹೆಂಗಾರ್ಟ್ನರ್ ಜೊತೆ ನಡೆಸಿದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಸಹಕಾರದ ಬಗ್ಗೆ ಸಕಾರಾತ್ಮಕವಾಗಿ ಅವರು ಪ್ರತಿಕ್ರಿಯಿಸಿದ್ದು ಮುಂದಿನ ದಿನಗಳಲ್ಲಿ ಐಐಎಸ್‌ಸಿ ಸಹಯೋಗದಲ್ಲಿ ಒಡಂಬಡಿಕೆಯ ಬಗ್ಗೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಕರ್ನಾಟಕವು ಭಾರತವನ್ನು ಕ್ವಾಂಟಮ್ ವಿಜ್ಞಾನ ಮತ್ತು ಡೀಪ್ ಟೆಕ್ ಕ್ಷೇತ್ರದ ಹೊಸ ಸಾಧ್ಯತೆಗೆ ಕೊಂಡೊಯ್ಯಲು ಬದ್ಧವಾಗಿದೆ. ಇಟಿಎಚ್ ಜ್ಯೂರಿಕ್ ಮತ್ತು ಜಿಇಎಸ್ಡಿಎ ಮುಂತಾದ ವಿಶ್ವಮಟ್ಟದ ಸಂಸ್ಥೆಗಳೊಂದಿಗಿನ ಸಹಕಾರವು ಬೆಂಗಳೂರನ್ನು ಕ್ವಾಂಟಮ್ ನಾವೀನ್ಯತೆಯ ಜಾಗತಿಕ ಕೇಂದ್ರವನ್ನಾಗಿ ಮಾಡುವ ನಮ್ಮ ದೃಷ್ಟಿಯನ್ನು ಇನ್ನಷ್ಟು ಬಲಪಡಿಸಲಿದೆ ಎಂದು ಸಚಿವ ಬೋಸರಾಜು ತಿಳಿಸಿದರು.
ಭಾರತ ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರರಾದ ಪ್ರೊ. ಅಜಯ್ ಸೂದ್ ಅವರನ್ನು ಸಮಾವೇಶದಲ್ಲಿ ಭೇಟಿಯಾದ ಸಚಿವರು, ರಾಜ್ಯದ ಕ್ವಾಂಟಮ್ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಅಗತ್ಯವಿರುವಂತಹ ಸಲಹೆ ಹಾಗೂ ಸಹಕಾರ ನೀಡುವ ನಿಟ್ಟಿನಲ್ಲಿ ಚರ್ಚಿಸಿದರು. ಅಲ್ಲದೇ, ವಿಶ್ವದ ಇತರೆ ದೇಶಗಳ ಪ್ರಮುಖ ಸಂಶೋಧನಾ ಸಂಸ್ಥೆಗಳ ಜೊತೆಯಲ್ಲಿ ನಡೆಸುತ್ತಿರುವ ಸಭೆಗಳ ಬಗ್ಗೆಯೂ ಮಾಹಿತಿ ನೀಡಲಾಯಿತು.
ಸಭೆಯಲ್ಲಿ ಕೆಸ್ಟೆಪ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಸದಾಶಿವ ಪ್ರಭು, ಕ್ವಾಂಟಮ್ ರಿಸರ್ಚ್ ಪಾರ್ಕ್‌ನ ಅಧ್ಯಕ್ಷರಾದ ಐಐಎಸ್‌ಸಿ ಪ್ರೊ. ಅರಿಂದಮ್ ಘೋಷ್, ಸಚಿವರ ಆಪ್ತ ಕಾರ್ಯದರ್ಶಿಗಳಾದ ವೀರಭದ್ರ ಹಂಚಿನಾಳ್ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa