ಬೆಂಗಳೂರು, 17 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು, ಮಹಿಳೆಯರು ಮತ್ತು ಮಕ್ಕಳು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ ಎಂದು ಪ್ರತಿ ಪಕ್ಷದ ನಾಯಕ ಆರ್. ಅಶೋಕ ಸರಕಾರದ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಾದ್ಯಂತ 979 ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಿದ್ದು, ಕೇವಲ ಬೆಂಗಳೂರು ನಗರದಲ್ಲೇ 114ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಆರೋಪಿಸಿದ್ದಾರೆ.
ಮೈಸೂರು ಜಿಲ್ಲೆಯ ಬುಡಕಟ್ಟು ಹುಡುಗಿಯೊಬ್ಬಳ ಮೇಲೆ ನಡೆದ ಭೀಕರ ಅತ್ಯಾಚಾರ ಮತ್ತು ಕೊಲೆ, ಕಲಬುರಗಿಯ ಗ್ರಂಥಪಾಲಕನ ಆತ್ಮಹತ್ಯೆ ಪ್ರಕರಣ ಇವುಗಳು ಎಲ್ಲವೂ ಕಾಂಗ್ರೆಸ್ ಸರ್ಕಾರದ ನೈತಿಕ ಮತ್ತು ಆಡಳಿತಾತ್ಮಕ ವೈಫಲ್ಯವನ್ನು ಬಯಲಿಗೆಳೆಯುತ್ತವೆ ಎಂದಿದ್ದಾರೆ
ಈ ಸಂಭಂದ ಕೇಂದ್ರ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ತುರ್ತು ಪತ್ರ ಬರೆದಿದ್ದು, ತಕ್ಷಣ ರಾಜ್ಯದಲ್ಲಿ ಮಧ್ಯಪ್ರವೇಶಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. “ಕರ್ನಾಟಕದಲ್ಲಿ ಈಗ ಸ್ವತಂತ್ರ ಸತ್ಯಶೋಧನಾ ತಂಡ ರಚನೆ ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಹೆಣ್ಣುಮಕ್ಕಳು ಅಸುರಕ್ಷಿತರಾಗಿರುವಾಗ ರಾಜ್ಯ ಬಿಜೆಪಿ ಮೌನವಾಗಿರುವುದಿಲ್ಲ. ರಾಜ್ಯ ಸರ್ಕಾರ ಈ ಭದ್ರತಾ ಕುಸಿತಕ್ಕೆ ಸ್ಪಷ್ಟ ಉತ್ತರ ನೀಡಬೇಕು ಮತ್ತು ಮಹಿಳಾ-ಮಕ್ಕಳ ಸುರಕ್ಷತೆಗೆ ಖಚಿತ ಕ್ರಮ ಕೈಗೊಳ್ಳಬೇಕು ಎಂದು ಅಶೋಕ ಆಗ್ರಹಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa