ಸಾಲ ಯೋಜನೆಗಳ ಮೂಲಕ ರೈತರಿಗೆ ಪ್ರೋತ್ಸಾಹ : ನಿರ್ಮಲಾ ಸೀತಾರಾಮನ್
ಬಳ್ಳಾರಿ, 17 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಕೃಷಿ ಉತ್ಪನ್ನಗಳ ಸಂಸ್ಕರಣೆ, ರೈತ ಉತ್ಪಾದಕ ಸಂಸ್ಥೆಗಳಿಗೆ ವಿವಿಧ ಸಾಲ ಯೋಜನೆಗಳ ಮೂಲಕ ಪ್ರೋತ್ಸಾಹ ನೀಡಬೇಕು ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ. ಬಳ್ಳಾರಿ ನಗರದ ಕರ್ನಾಟಕ ಗ
ರೈತರಿಗೆ ವಿವಿಧ ಸಾಲ ಯೋಜನೆಗಳ ಮೂಲಕ ಪ್ರೋತ್ಸಾಹ : ನಿರ್ಮಲಾ ಸೀತಾರಾಮನ್


ಬಳ್ಳಾರಿ, 17 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕೃಷಿ ಉತ್ಪನ್ನಗಳ ಸಂಸ್ಕರಣೆ, ರೈತ ಉತ್ಪಾದಕ ಸಂಸ್ಥೆಗಳಿಗೆ ವಿವಿಧ ಸಾಲ ಯೋಜನೆಗಳ ಮೂಲಕ ಪ್ರೋತ್ಸಾಹ ನೀಡಬೇಕು ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ.

ಬಳ್ಳಾರಿ ನಗರದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಪ್ರಧಾನ ಕಚೇರಿಯ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಒಂದು ರಾಜ್ಯ-ಒಂದು ಗ್ರಾಮೀಣ ಬ್ಯಾಂಕ್ ಪ್ರಕ್ರಿಯೆಯಡಿ ಮೇ 1 ರಿಂದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಸ್ತಿತ್ವಕ್ಕೆ ಬಂದಿದ್ದು, ಈ ಬ್ಯಾಂಕ್ ದೇಶದ 3 ನೇ ಅತಿದೊಡ್ಡ ಗ್ರಾಮೀಣ ಬ್ಯಾಂಕ್ ಇದಾಗಿದೆ. ಪ್ರಸ್ತುತ ಬ್ಯಾಂಕ್ ಬಳ್ಳಾರಿಯಲ್ಲಿ ಪ್ರಧಾನ ಕಚೇರಿ ಹೊಂದಿದ್ದು, 1,750 ಶಾಖೆಗಳೊಂದಿಗೆ 1,04,364 ಕೋಟಿ ರೂ. ವಹಿವಾಟು ನಡೆಸುತ್ತಿದೆ ಎಂದರು.

ಆರ್ಥಿಕ ಚಟುವಟಿಕೆಗಳ ಮೂಲಕ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯನ್ನು ತೀವ್ರಗೊಳಿಸಬೇಕಾದ ಅವಶ್ಯಕತೆ ಇದ್ದು, ಗ್ರಾಮೀಣ ಬ್ಯಾಂಕ್ ಗಳು ಮಹತ್ತರವಾದ ಪಾತ್ರವಹಿಸಬೇಕು. ಗ್ರಾಮೀಣ ಬ್ಯಾಂಕುಗಳ ಪಾತ್ರವನ್ನು ಇನ್ನಷ್ಟು ಪರಿಣಾಮಕಾರಿಗೊಳಿಸಲು ಗ್ರಾಮೀಣ ಬ್ಯಾಂಕುಗಳನ್ನು ವಿಲೀನಗೊಳಿಸಿ ರಾಜ್ಯಕ್ಕೆ ಒಂದೇ ಗ್ರಾಮೀಣ ಬ್ಯಾಂಕ್ ಸ್ಥಾಪಿಸಲಾಗಿದೆ. ಈ ಕಾರಣಕ್ಕೆ ಗ್ರಾಮೀಣ ಭಾಗದ ಜನರ ಆರ್ಥಿಕ ಬೇಡಿಕೆಗೆ ಅನುಸರಿಸಿ ಸಾಲ ಯೋಜನೆಗಳನ್ನು ರೂಪಿಸಬೇಕು ಎಂದರು.

ಬ್ಯಾಂಕೇತರ ವಲಯಗಳನ್ನು ಗುರುತಿಸಿ ಹೊಸ ಶಾಖೆಗಳನ್ನು ತೆರೆಯುವ ಪ್ರಕ್ರಿಯೆಯನ್ನು ತೀವ್ರಗೊಳಿಸಬೇಕು. ಕೃಷಿ ಉನ್ನತೀಕರಣ ಮತ್ತು ಮೌಲ್ಯ ವರ್ಧನೆಗೆ ಸಂಬಂಧಿಸಿ ಸೂಕ್ತ ಸಾಲ ಯೋಜನೆ ರೂಪಿಸಬೇಕು. ಡಿಜಿಟಲೈಜೇಶನ್ ಗ್ರಾಮೀಣ ಭಾಗಕ್ಕೆ ಪರಿಣಾಮಕಾರಿಯಾಗಿ ತಲುಪಿಸಬೇಕಾದ ಕಾರ್ಯವನ್ನು ಗ್ರಾಮೀಣ ಬ್ಯಾಂಕ್ ಮುಂದಿನ ದಿನಗಳಲ್ಲಿ ವ್ಯವಸ್ಥಿತವಾಗಿ ಮಾಡಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ಗ್ರಾಮೀಣ ಬ್ಯಾಂಕ್ ಕೇಂದ್ರ ಸರ್ಕಾರದ ಸಾಮಾಜಿಕ ಸುರಕ್ಷಾ ಯೋಜನೆಗಳ ಅನುಷ್ಠಾನದಲ್ಲಿ ಉತ್ತಮ ಸಹಭಾಗಿತ್ವ ತೋರಿರುವುದನ್ನು ಸಚಿವರು ಶ್ಲಾಘಿಸಿದರು.

ಕೇಂದ್ರ ಹಣಕಾಸು ಇಲಾಖೆಯ ಕಾರ್ಯದರ್ಶಿ ಎಂ.ನಾಗರಾಜು ಅವರು ಮಾತನಾಡಿ, ಗ್ರಾಮೀಣ ಬ್ಯಾಂಕುಗಳು ಗ್ರಾಮೀಣ ಭಾಗದ ಚಿತ್ರಣವನ್ನು ಬದಲಿಸುವ ಶಕ್ತಿ ಹೊಂದಿದ್ದು, ಕೇಂದ್ರ ಸರ್ಕಾರ ಗ್ರಾಮೀಣ ಬ್ಯಾಂಕುಗಳನ್ನು ಬಲಪಡಿಸಲು ಎಲ್ಲ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.

ಕರ್ನಾಟಕ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷ ಶ್ರೀಕಾಂತ.ಎಂ ಭಂಡಿವಾಡ ಅವರು, ಬ್ಯಾಂಕಿನ ಕಾರ್ಯಕ್ಷಮತೆಯ ಮುಖ್ಯಾಂಶಗಳನ್ನು ಪ್ರಸ್ತುತಪಡಿಸಿದರಲ್ಲದೆ ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನದಲ್ಲಿ ಬ್ಯಾಂಕು ವಿವಿಧ ರಂಗಗಳಲ್ಲಿ ಅಗ್ರಸ್ಥಾನದಲ್ಲಿದೆ ಎಂದರು.

ಗ್ರಾಮೀಣಾಭಿವೃದ್ಧಿಗೆ ಗ್ರಾಮೀಣ ಬ್ಯಾಂಕುಗಳ ಕೊಡುಗೆಯನ್ನು ಹೆಚ್ಚಿಸಲು ನಬಾರ್ಡ್ ಎಲ್ಲಾ ರೀತಿಯಲ್ಲೂ ಬೆಂಬಲ ನೀಡುತ್ತಿದೆ ಎಂದು ನಬಾರ್ಡ್ ಅಧ್ಯಕ್ಷ ಕೆ.ವಿ.ಶಾಜಿ ತಿಳಿಸಿದರು.

ಕೆನರಾ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಕೆ. ಮಾಜುಮದಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಭೆಯಲ್ಲಿ ಹಣಕಾಸು ಇಲಾಖೆಯ ಜಂಟಿ ಕಾರ್ಯದರ್ಶಿ ಮನೋಜ್ ಎಂ.ಅಯ್ಯಪ್ಪನ್, ನಿರ್ದೇಶಕ ಸುಶೀಲ್ ಕುಮಾರ್ ಸಿಂಗ್, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ., ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್ ಮತ್ತು ಇತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande