ಕೊಪ್ಪಳ, 17 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯವೂ ಅಷ್ಟೇ ಮುಖ್ಯವಾಗಿದೆ. ದೈಹಿಕ ಮತ್ತು ಮಾನಸಿಕ ಇವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇವೆರಡರ ಸಮತೋಲನ ಕಾಪಾಡಿಕೊಂಡು ಹೋಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ದರಗದ ಅವರು ತಿಳಿಸಿದ್ದಾರೆ.
ಶುಕ್ರವಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧೀಕಾರ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳ ಕಚೇರಿ, ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ ಹಾಗೂ ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯೆ ಕಾನೂನು ಕಾಲೇಜ್ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ವರ್ಷ ಅಕ್ಟೋಬರ್ 10 ರಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಆಚರಿಸಲಾಗುತ್ತದೆ. ಸೇವೆಗಳ ಲಭ್ಯತೆ-ವಿಪತ್ತುಗಳು ಮತ್ತು ತುರ್ತು ಪರಿಸ್ಥಿಗಳಲ್ಲಿ ಮಾನಸಿಕ ಆರೋಗ್ಯ ಎಂಬ ಘೋಷವಾಕ್ಯದೊಂದಿಗೆ ಈ ವರ್ಷ ಕಾರ್ಯಕ್ರಮ ಆಚರಿಸಲಾಗುತ್ತ್ತಿದೆ. ಈ ಕಾರ್ಯಕ್ರಮದ ಉದ್ದೇಶ ಮಾನಸಿಕ ಖಾಯಿಲೆ ಗುಣಪಡಿಸಲು ಮತ್ತು ಮಾನಸಿಕ ರೋಗಕ್ಕೆ ತುತ್ತಾಗದಂತೆ ಸಾರ್ವಜನಿಕರಿಗೆ ಅರಿವು ಮೂಡಿಸುವುದಾಗಿದೆ. ಮಾನಸಿಕ ರೋಗಕ್ಕೆ ಮುಖ್ಯ ಕಾರಣ ಮೆದುಳಿನಲ್ಲಿರುವ ರಾಸಾಯನಿಕ ಬದಲಾವಣೆ, ಮಾದಕ ವಸ್ತುಗಳಾದ ಗಾಂಜಾ, ಅಫೀಮ್ ಹಾಗೂ ಆಲ್ಕೋಹಾಲ್ ಸೇವನೆ ಮತ್ತು ಮೆದುಳಿಗೆ ಸಂಬ0ಧಿಸಿದ ಸೋಂಕು, ಗಡ್ಡೆ, ಪೆಟ್ಟು, ಕುಟುಂಬ, ಹಣಕಾಸು, ಉದ್ಯೋಗ, ರೀತಿನೀತಿಗಳ ಗೊಂದಲ ಕಾರಣವಾಗಿವೆ.
ಜೊತೆಗೆ ವಿಚಿತ್ರ ನಡವಳಿಕೆ, ಮಂಕುತನ, ಆತ್ಮಹತ್ಯೆಗೆ ಪ್ರಯತ್ನ, ವಯಸ್ಸಿಗೆ ತಕ್ಕಂತೆ ಬುದ್ದಿಮಟ್ಟವಿಲ್ಲದಿರುವುದು, ದುಃಖ, ಖಿನ್ನತೆಯಂತಹ ಲಕ್ಷಣಗಳು ಕಂಡುಬ0ದರೆ ಆದಷ್ಟು ಬೇಗ ತಮ್ಮ ಸಮೀಪದ ಸರ್ಕಾರಿ ಆಸ್ಪತ್ರೆ, ತಾಲೂಕಾ ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬೇಕು. ಯಾರೂ ಮಾನಸಿಕ ಸ್ಥೆöರ್ಯವನ್ನು ಕಳೆದುಕೊಳ್ಳಬಾರದು, ಮಾನಸಿಕ ಖಾಯಿಲೆಗೂ ಚಿಕಿತ್ಸೆ ಇದೆ ಎಂಬುದರ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಅರಿವು ಮೂಡಿಸಬೇಕು. ಮಾನಸಿಕ ರೋಗಿಗಳಿಗೂ ಸಮಾಜದಲ್ಲಿ ಬದುಕುವ ಹಕ್ಕಿದೆ. ಅವರನ್ನು ಯಾರೂ ಕೀಳಾಗಿ ಕಾಣಬಾರದು. ಅವರಿಗೆ ಧೈರ್ಯ ನೀಡಬೇಕು. ಇಂದಿನ ಯುವ ಪೀಳಿಗೆ ಈ ಮಾನಸಿಕ ಖಾಯಿಲೆ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಈ ವಿಶ್ವ ಮಾನಸಿಕ ಆರೋಗ್ಯ ದಿನದಂದು ನಾವೆಲ್ಲರೂ ಪರಸ್ಪರ ಗಮನ ಹರಿಸೋಣ, ದಯೆ ತೋರೋಣ ಮತ್ತು ಕಳಂಕವನ್ನು ಕೊನೆಗೊಳಿಸೋಣ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ಪ್ರಕಾಶ ಮಾತನಾಡಿ, ಮಾನಸಿಕ ಖಾಯಿಲೆಯ ವಿಧಗಳು, ಖಾಯಿಲೆಗೆ ಇರುವ ಚಿಕಿತ್ಸಾ ಸೇವಾ ಸೌಲಭ್ಯಗಳು, ಹದಿಹರೆಯದವರು ಮಾನಸಿಕ ಖಿನ್ನತೆಯಿಂದ ಹೇಗೆ ಹೊರಗಡೆ ಬರಬೇಕು. ಅದರ ಮುಂಜಾಗೃತಾ ಕ್ರಮ, ಆಯುಷ್ಮಾನ್ ಭಾರತ್ ಡಿಜಿಟಲ್ ಅಭಿಯಾನ ಕುರಿತು ವಿವರವಾಗಿ ಮಾಹಿತಿ ನೀಡಿದರು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ರವೀಂದ್ರನಾಥ್ ಎಂ.ಹೆಚ್. ಅವರು ಮಾತನಾಡಿ, ಮಾನಸಿಕ ಖಾಯಿಲೆ ಉಂಟಾಗದAತೆ ಹಾಗೂ ಮುಂಜಾಗೃತಾ ಕ್ರಮಗಳ ಕುರಿತು ವಿವಿಧ ಉದಾರಣೆ ಮೂಲಕ ಮಾಹಿತಿ ನೀಡಿದರು. ಗಂಗಾವತಿ ಉಪ ವಿಭಾಗ ಆಸ್ಪತ್ರೆಯ ಮನೋವೈದ್ಯರಾದ ಡಾ. ವಾದಿರಾಜ ಗೋರೆಬಾಳ ಅವರು ಮಾನಸಿಕ ಖಾಯಿಲೆ ಉಂಟಾಗಲು ಕಾರಣ ಮತ್ತು ಅದರ ಪರಿಹಾರ ಹಾಗೂ ಚಿಕಿತ್ಸೆ ಕುರಿತು ಹಾಗೂ ಟೆಲಿಮನಸ್ 14416 ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಉಷಾದೇವಿ ಹಿರೇಮಠ ಅವರು ಮಾತನಾಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಮ್ಮಿಕೊಳ್ಳುವ ಇಂತಹ ಜಾಗೃತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಬಹಳ ಉಪಯುಕ್ತವಾಗಿವೆ. ವಿದ್ಯಾರ್ಥಿಗಳು ಈ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಂಡು ತಮ್ಮ ತಮ್ಮ ಗ್ರಾಮ, ವಾರ್ಡ್ಗಳಲ್ಲಿ ಹಾಗೂ ಸುತ್ತ ಮುತ್ತಲಿನ ಸಾರ್ವಜನಿಕರಿಗೆ ಅರಿವು ಮೂಡಿಸಿ, ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಕೈಜೋಡಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಗೋನಾಳು ಕುಮಾರಸ್ವಾಮಿ, ತಾಲೂಕಾ ಆರೋಗ್ಯಾಧಿಕಾರಿ ಡಾ.ರಾಮಾಂಜನೇಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ, ಕಾನೂನು ಕಾಲೇಜಿನ ಉಪಪ್ರಾಂಶುಪಾಲರಾದ ಬಸವರಾಜ, ಸಹ ಉಪನ್ಯಾಸಕರಾದ ಸೋಮಶೇಖರ ಹಾಗೂ ವಿದ್ಯಾರ್ಥಿಗಳು, ಸಿಬ್ಬಂದಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಶಿವಪ್ಪ ಬಾವಿಕಟ್ಟಿ ಕಾರ್ಯಕ್ರಮ ನಿರೂಪಿಸಿದರು, ಶರಣು ಸ್ವಾಗತಿಸಿದರು, ಸುವರ್ಣ ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್