ಬಳ್ಳಾರಿ, 16 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಆತ್ಮ ನಿರ್ಭರ ಭಾರತ - ಸಂಕಲ್ಪ ಅಭಿಯಾನವು ಸೆಪ್ಟೆಂಬರ್ 25 ರಿಂದ ಡಿಸೆಂಬರ್ 25ರವರೆಗೆ ಬಳ್ಳಾರಿ ಜಿಲ್ಲೆಯಾದ್ಯಂತ `ಪ್ರತೀ ಮನೆಯೂ ಸ್ವದೇಶಿ - ಮನೆ ಮನೆಯೂ ಸ್ವದೇಶಿ' ಘೋಷಣೆಯೊಂದಿಗೆ ಚಳವಳಿಯ ರೀತಿಯಲ್ಲಿ ನಡೆಯಲಿದೆ ಎಂದು ವಿಧಾನ ಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರಿಗೆ ಗುರುವಾರ ಈ ಮಾಹಿತಿ ನೀಡಿದ ಅವರು, ಪಂಡಿತ ದೀನದಯಾಳ್ ಉಪಾಧ್ಯಾಯರ ಜನ್ಮ ದಿನದಂದು ಪ್ರಾರಂಭವಾಗಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನದಂದು ಸಮಾರೋಪಗೊಳ್ಳಲಿದೆ. ಈ ಅಭಿಯಾನದಲ್ಲಿ ಸ್ವದೇಶಿ ಉತ್ಪನ್ನಗಳ ಉತ್ಪಾದನೆ ಹೆಚ್ಚಳ, ಮಾರಾಟ, ಗುಣಮಟ್ಟ, ಇನ್ನಿತರೆಗಳನ್ನು ಪ್ರಮುಖವಾಘಿ ಪರಿಗಣಿಸಿ ಸ್ವದೇಶಿ ಚಳವಳಿಯನ್ನು ನಡೆಸಲಾಗುತ್ತಿದೆ. ಬಿಜೆಪಿಯ ಕಾರ್ಯಕರ್ತರು ಜಿಲ್ಲೆಯಾದ್ಯಂತ ಮನೆ ಮನೆಗೆ ಹೋಗಿ ಸ್ವದೇಶೀ ಉತ್ಪನ್ನಗಳ ಖರೀದಿ ಕುರಿತು ಜಾಗೃತಿ ಮೂಡಿಸಲಿದ್ದಾರೆ ಎಂದರು.
ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು, ಸಂಘ - ಸಂಸ್ಥೆಗಳಲ್ಲಿ ಸ್ವದೇಶೀ ಬಳಕೆಯ ಅರಿವು ಮೂಡಿಸಲು ವಿವಿಧ ಹಂತದ ಕಾರ್ಯಕ್ರಮಗಳನ್ನು ಪಕ್ಷವು ಹಮ್ಮಿಕೊಂಡಿದೆ. ಈ ಮೂಲಕ ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ ಸಂಕಲ್ಪಗಳನ್ನೂ ಪ್ರೋತ್ಸಾಹಿಸಲಾಗುತ್ತದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಶ್ರೀ ಅನಿಲ್ ನಾಯ್ಡು ಮೋಕ, ವಕ್ತಾರರಾದ ಡಾ. ಬಿ.ಕೆ. ಸುಂದರ್, ಮುಖಂಡರಾದ ಎಚ್. ಹನುಮಂತಪ್ಪ, ಗುರುಲಿಂಗನಗೌಡ, ಎಸ್. ದಿವಾಕರ್, ವೆಂಕಟರಮಣ, ತಿಮ್ಮಾರೆಡ್ಡಿ, ಕೇದಾರನಾಥ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್