ಚಂಡೀಗಡ, 14 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಐಪಿಎಸ್ ಅಧಿಕಾರಿ ವೈ. ಪೂರಣ್ ಕುಮಾರ್ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಹರಿಯಾಣದ ಪೊಲೀಸ್ ಮಹಾನಿರ್ದೇಶಕ ಶತ್ರುಘ್ನ ಕಪೂರ್ ಅವರನ್ನು ಸರ್ಕಾರ ತಕ್ಷಣದಿಂದ ರಜೆ ಮೇಲೆ ಕಳುಹಿಸಿದೆ.
ಸೋಮವಾರ ಬೆಳಗಿನ ಜಾವ ಸುಮಾರು 1 ಗಂಟೆಗೆ ಸರ್ಕಾರ ಈ ಆದೇಶ ಹೊರಡಿಸಿದ್ದು, ಇದು ರಾಜಕೀಯ ಮತ್ತು ಆಡಳಿತ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರೋಹ್ಟಕ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ನರೇಂದ್ರ ಬಿಜಾರ್ನಿಯಾ ಅವರನ್ನು ಈಗಾಗಲೇ ವರ್ಗಾವಣೆ ಮಾಡಲಾಗಿದೆ.
ಈ ನಡುವೆ, ಡಿಜಿಪಿ ಹಾಗೂ ಎಸ್ಪಿ ವಿರುದ್ಧ ದಲಿತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇಬ್ಬರನ್ನೂ ಬಂಧಿಸಿ ಅಮಾನತುಗೊಳಿಸುವಂತೆ ಆಗ್ರಹಿಸುತ್ತಿವೆ.
ಐಪಿಎಸ್ ಅಧಿಕಾರಿ ವೈ. ಪೂರಣ್ ಕುಮಾರ್ ಅವರ ಪತ್ನಿ ಐಎಎಸ್ ಅಧಿಕಾರಿ ಅಮ್ನೀತ್ ಪಿ. ಕುಮಾರ್ ಹಾಗೂ ಅವರ ಸೋದರ ಮಾವ ಅಮಿತ್ ರತನ್ ಕೊಟ್ಫಟ್ಟಾ ಅವರ ಬೆಂಬಲಿಗರು ಕೂಡ ಸರ್ಕಾರದ ಕ್ರಮದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ.
ಅಕ್ಟೋಬರ್ 17ರಂದು ಸೋನಿಪತ್‌ನ ರಾಯ್‌ನಲ್ಲಿ ನಿಗದಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರ ಜನ್ ವಿಶ್ವಾಸ್–ಜನ್ ವಿಕಾಸ್ ರ್ಯಾಲಿ ಮುಂದೂಡಲಾಗಿದೆ.
ಈ ಘಟನೆಗಳ ನಡುವೆ, ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕೇಂದ್ರ ಆಹಾರ ಸಂಸ್ಕರಣೆ ಸಚಿವ ಚಿರಾಗ್ ಪಾಸ್ವಾನ್ ಮಂಗಳವಾರ ಚಂಡೀಗಢಕ್ಕೆ ಆಗಮಿಸಲಿದ್ದು, ವೈ. ಪೂರಣ್ ಕುಮಾರ್ ಅವರ ಕುಟುಂಬವನ್ನು ಭೇಟಿ ಮಾಡಲಿದ್ದಾರೆ. ಸರ್ಕಾರ ಈ ನಿರ್ಧಾರವನ್ನು ಅವರ ಆಗಮನಕ್ಕೂ ಮುನ್ನವೇ ಕೈಗೊಂಡಿದೆ.
ಕುಟುಂಬದ ನಿರ್ಧಾರದ ಪ್ರಕಾರ ವೈ. ಪೂರಣ್ ಕುಮಾರ್ ಅವರ ಮರಣೋತ್ತರ ಪರೀಕ್ಷೆ ಇಂದು ನಡೆಯುವ ಸಾಧ್ಯತೆ ಇದೆ. ಈ ಪ್ರಕರಣವು ಹರಿಯಾಣದಲ್ಲಿ ರಾಜಕೀಯ ಭೂಕಂಪ ಸೃಷ್ಟಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa