ಬೆಂಗಳೂರು, 14 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ನಾಳೆಯಿಂದ ಕಲ್ಯಾಣ ಕರ್ನಾಟಕ ಪ್ರದೇಶದ ಪ್ರವಾಸಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಅವರು ರೈತರಿಗೆ ಆರ್ಥಿಕ ಸಬಲೀಕರಣ ನೀಡುವ ಉದ್ದೇಶದಿಂದ ಸ್ಥಾಪಿಸಲಾದ ಕೃಷಿ ಉತ್ಪನ್ನ ಮೌಲ್ಯವರ್ಧನೆ ಘಟಕಗಳು, ತರಬೇತಿ ಕೇಂದ್ರಗಳು ಮತ್ತು ಕಾಮನ್ ಫೆಸಿಲಿಟಿ ಸೆಂಟರ್‌ಗಳನ್ನು ವೀಕ್ಷಿಸಲಿದ್ದಾರೆ.
ಸೀತಾರಾಮನ್ ಅವರ ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿ ಮೂಲಕ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ತಲಾ ಒಂದು ಕೃಷಿ ಮೌಲ್ಯವರ್ಧನೆ ಘಟಕವನ್ನು ಸ್ಥಾಪಿಸಲಾಗಿದೆ.
ಅವುಗಳ ವಿವರವಾದ ಮಾಹಿತಿಯನ್ನು ತಮ್ಮ ಎಕ್ಸ ಖಾತೆಯಲ್ಲಿ ಹಂಚಿಕೊಂಡಿದ್ದಾರೆ...
ವಿಜಯನಗರ: ಕಡಲೆ ಬೇಳೆ, ಹುರಿದ ಕಡಲೆ, ಕಡಲೆ ಚಿಕ್ಕಿ, ಬೀಜ ತೆಗೆಯಲ್ಪಟ್ಟ ಹುಣಸೆ ಬ್ಲಾಕ್ ಮತ್ತು ಹುಣಸೆ ಪಲ್ಪ್ (ಉತ್ಪಾದನಾ ಸಾಮರ್ಥ್ಯ – ಕಡಲೆ 200 ಕೆ.ಜಿ/ಗಂ.; ಹುಣಸೆ 100 ಕೆ.ಜಿ/ಗಂ.)
ಬಳ್ಳಾರಿ: ಮೆಣಸಿನ ಪುಡಿ ಮತ್ತು ಫ್ಲೇಕ್ಸ್ (250 ಕೆ.ಜಿ/ಗಂ.)
ಕೊಪ್ಪಳ: ಹಣ್ಣಿನ ಪಲ್ಪ್, ಜ್ಯೂಸ್ ಮತ್ತು ಅಮಚೂರ್ ಪುಡಿ (500 ಕೆ.ಜಿ/ಗಂ.)
ರಾಯಚೂರು: ಚಿಲಾ ಪ್ರೀಮಿಕ್ಸ್, ಕಡ್ಲೆ ಬೇಳೆ ಹಾಗೂ ತೊಗರಿ ದಾಲ್ ಮಿಲ್ (350 ಕೆ.ಜಿ/ಗಂ.)
ಯಾದಗಿರಿ: ಕಡಲೆ ಬೆಣ್ಣೆ, ಹುರಿದ ಕಡಲೆ ಮತ್ತು ಕಡಲೆ ಎಣ್ಣೆ (300 ಕೆ.ಜಿ/ಗಂ.)
ಕಲಬುರಗಿ: ಸಿರಿಧಾನ್ಯ ಫ್ಲೇಕ್ಸ್, ಪಾಪ್ಸ್, ಹಿಟ್ಟು ಹಾಗೂ ಸಂಪೂರ್ಣ ಸಿರಿಧಾನ್ಯಗಳು (500 ಕೆ.ಜಿ/ಗಂ.)
ಬೀದರ್: ಸೋಯಾಬೀನ್ ಟೋಫು ಮತ್ತು ಸೋಯಾ ಹಾಲು (300 ಕೆ.ಜಿ/ಗಂ.)
ಈ ಪ್ರವಾಸದ ವೇಳೆಯಲ್ಲಿ ವಿಜಯನಗರ, ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಘಟಕಗಳ ಉದ್ಘಾಟನೆ ನಡೆಯಲಿದೆ.
ಸೀತಾರಾಮನ್ ಅವರು ಘಟಕಗಳಿಂದ ತರಬೇತಿ ಪಡೆದ ರೈತರು, ಅವರ ಕುಟುಂಬಗಳು ಮತ್ತು ರೈತರ ಉತ್ಪಾದಕರ ಸಂಘದ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ.
ಈ ಕಾರ್ಯಕ್ರಮಗಳ ಮೂಲಕ ರೈತರಿಗೆ ಉತ್ಪಾದನಾ ಸರಪಳಿಯಲ್ಲಿ ಹೊಸ ಆರ್ಥಿಕ ಅವಕಾಶಗಳು ದೊರಕಲಿದ್ದು, ಕಲ್ಯಾಣ ಕರ್ನಾಟಕದ ಕೃಷಿ ಆಧಾರಿತ ಆರ್ಥಿಕತೆಗೆ ನೂತನ ವೇಗ ಸಿಗಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa