
ಕೋಲಾರ, 08 ಸೆಪ್ಟೆಂಬರ್ (ಹಿ.ಸ)
ಆ್ಯಂಕರ್ : ನನ್ನ ಕೈಗೆ ಸಿಕ್ಕಿಕೊಂಡರೆ ಯಮನ ಕೈಗೆ ಸಿಕ್ಕಿಕೊಂಡಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಏನೇನು ಮಾಡಿದ್ದೀರಿ ಎಂಬುದು ನನಗೆ ಗೊತ್ತು. ಇನ್ನು ಮುಂದೆ ನಿಮ್ಮ ಕಳ್ಳಾಟ ನಡೆಯುವುದಿಲ್ಲ. ಸಮಯಕ್ಕೆ ಸರಿಯಾಗಿ ಅಧಿಕಾರಿಗಳ ಹಾಜರಾತಿ ನನಗೆ ಮುಖ್ಯ ಎಂದು ನೂತನವಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಾಸಕ ಕೊತ್ತೂರು ಮಂಜುನಾಥ್ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಮಂಗಳವಾರ ಡಿಸಿಸಿ ಬ್ಯಾಂಕ್ ಮುಖ್ಯ ಕಛೇರಿಯ ಸಭಾಂಗಣದಲ್ಲಿ ಆನ್ಲೈನ್ ಮೂಲಕ ಎರಡು ಜಿಲ್ಲೆಗಳ ಶಾಖೆಗಳ ವ್ಯವಸ್ಥಾಪಕರು ಮತ್ತು ಸಿಬ್ಬಂದಿಯ ಪರಿಚಯ ಮಾಡಿಕೊಂಡು, ಬ್ಯಾಂಕ್ ಸ್ಥಿತಿಗತಿಗಳನ್ನು ಅವಲೋಕಿಸಿದ ನಂತರ ಮಾತನಾಡಿದರು.
ಇದು ಕೇವಲ ಪರಿಚಯ ಮಾಡಿಕೊಳ್ಳುವ ಸಭೆ ಮಾತ್ರ. ಮುಂದಿನ ದಿನಗಳಲ್ಲಿ ಎರಡು ಜಿಲ್ಲೆಗಳಿಗೆ ಸಂಬ0ಧಿಸಿದ ಬ್ಯಾಂಕ್ ಶಾಖೆಗಳ ಅಧಿಕಾರಿಗಳ ಸಭೆಯನ್ನು ಪ್ರತ್ಯೇಕವಾಗಿ ನಡೆಸಲಾಗುವುದು. ಪ್ರತಿವಾರ ಒಂದೊAದು ಬ್ಯಾಂಕ್ ಶಾಖೆಗೆ ಖುದ್ದು ಭೇಟಿ ನೀಡಿ, ಬ್ಯಾಂಕಿನ ನ್ಯೂನತೆಗಳನ್ನು ಸರಿಪಡಿಸಲಾಗುವುದು ಎಂದು ತಿಳಿಸಿದರು.
ಅಧಿಕಾರಿ ಮತ್ತು ಸಿಬ್ಬಂದಿ ಬ್ಯಾಂಕಿನಲ್ಲಿ ನಡೆಸಿರುವ ದುರ್ಬಳಕೆ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇದೆ. ಇನ್ನು ಮುಂದೆ ಅಧಿಕಾರಿಗಳ ವರ್ತನೆ ಸರಿಯಾಗಿರಬೇಕು. ಇದು ನನ್ನ ಮೊದಲ ಮತ್ತು ಕೊನೆಯ ಎಚ್ಚರಿಕೆ. ಬ್ಯಾಂಕ್ ಸಾರ್ವಜನಿಕರ ಆಸ್ತಿ ಆಗಬೇಕು. ಎಲ್ಲ ಶಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗಿ ಕೆಲಸ ನಿರ್ವಹಿಸಬೇಕು. ರೈತರಿಗೆ, ಗ್ರಾಹಕರಿಗೆ ಸ್ಪಂದಿಸಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಮೋಹನ್ ರೆಡ್ಡಿ, ನಿರ್ದೇಶಕ ಕಾಜಿಕಲ್ಲಹಳ್ಳಿ ಮುನಿರಾಜು, ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಖಾನ್ ಫರ್ವೇಜ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್