


ಬಳ್ಳಾರಿ, 08 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆಯುತ್ತಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆ ಇಂದು 8ನೇ ದಿನಕ್ಕೆ ಕಾಲಿಟ್ಟಿದ್ದು, ದಿನದಿಂದ ದಿನಕ್ಕೆ ಜನಸಾಗರದ ಬೆಂಬಲ ಮತ್ತು ಆಶೀರ್ವಾದದೊಂದಿಗೆ ಮತ್ತಷ್ಟು ಪ್ರಬಲ ಜನಾಂದೋಲನವಾಗಿ ರೂಪುಗೊಳ್ಳುತ್ತಿದೆ.
ಇಂದು ಹಳೇ ದರೋಜಿಯಿಂದ ಪಾದಯಾತ್ರೆ ಆರಂಭಕ್ಕೂ ಮುನ್ನ ಸಂಡೂರು ತಾಲೂಕಿನ ದರೋಜಿ ಈರಮ್ಮ ಅವರ ಸಮಾಧಿಗೆ ಭೇಟಿ ನೀಡಿ ಗೌರವ ಸಲ್ಲಿಸಿದ ಬಿ.ವೈ. ವಿಜಯೇಂದ್ರ ಅವರು, ಬಳಿಕ ರಾಮಾಯಣ, ಮಹಾಭಾರತ ಹಾಗೂ ವಿವಿಧ ಜಾನಪದ ಕಥೆಗಳನ್ನು ಹಗಲು ವೇಷಗಾರರಾಗಿ ಬಿತ್ತರಿಸುತ್ತಾ ತಮ್ಮ ವೃತ್ತಿಜೀವನ ನಡೆಸುತ್ತಿರುವ ಅಲೆಮಾರಿ ಬುಡ್ಗ ಜಂಗಮ ಸಮುದಾಯದವರನ್ನು ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ಬುಡ್ಗ ಜಂಗಮ ಸಮುದಾಯ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು ಹಾಗೂ ಸವಾಲುಗಳ ಕುರಿತು ಆತ್ಮೀಯವಾಗಿ ಚರ್ಚಿಸಿದರು. ವಿಶೇಷವಾಗಿ ಒಳಮೀಸಲಾತಿ, ಉದ್ಯೋಗಾವಕಾಶಗಳು ಸೇರಿದಂತೆ ಅಲೆಮಾರಿ ಜನಾಂಗದ ಆಶೋತ್ತರಗಳನ್ನು ಆಲಿಸಿ, ಅವರ ಬದುಕಿನ ಸಂಕಷ್ಟಗಳನ್ನು ಹತ್ತಿರದಿಂದ ಅರಿತುಕೊಂಡರು.
ಮಾಧ್ಯಮಗಳ ಸಹಕಾರಕ್ಕೆ ವಿಜಯೇಂದ್ರ ಧನ್ಯವಾದ
8ನೇ ದಿನದ ಪಾದಯಾತ್ರೆಯ ವೇಳೆ ಪಾದಯಾತ್ರೆಯ ಪ್ರತಿಯೊಂದು ಹೆಜ್ಜೆಯನ್ನೂ ಜನರಿಗೆ ತಲುಪಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಮಾಧ್ಯಮ ಪ್ರತಿನಿಧಿಗಳೊಂದಿಗೆ ವಿಜಯೇಂದ್ರ ಅವರು ಆತ್ಮೀಯವಾಗಿ ಸಂವಾದ ನಡೆಸಿದರು.
ಪಾದಯಾತ್ರೆಯ ಆರಂಭದಿಂದಲೂ ಮಾಧ್ಯಮಗಳು ನೀಡುತ್ತಿರುವ ಸಹಕಾರ ಹಾಗೂ ನಿರಂತರ ಕವರೇಜ್ಗೆ ಧನ್ಯವಾದ ಸಲ್ಲಿಸಿದ ಅವರು, ಎಂಟು ದಿನಗಳ ಪಾದಯಾತ್ರೆಯಲ್ಲಿ ಎದುರಾದ ಸವಾಲುಗಳು, ಜನರಿಂದ ದೊರೆತ ಸ್ಪಂದನೆ ಹಾಗೂ ಈ ಪಾದಯಾತ್ರೆಯಿಂದ ಕಲಿತ ಪಾಠಗಳ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಆತ್ಮೀಯವಾಗಿ ಚರ್ಚಿಸಿದರು.
ಪಾದಯಾತ್ರೆ ಕೇವಲ ರಾಜಕೀಯ ಕಾರ್ಯಕ್ರಮವಾಗಿ ಉಳಿಯದೆ, ಜನರ ಬದುಕನ್ನು ಹತ್ತಿರದಿಂದ ನೋಡುವ, ಅವರ ನೋವು-ನಲಿವುಗಳನ್ನು ಆಲಿಸುವ ಹಾಗೂ ಸಮಾಜದ ವಿವಿಧ ವರ್ಗಗಳ ಸಮಸ್ಯೆಗಳಿಗೆ ಧ್ವನಿಯಾಗುವ ವೇದಿಕೆಯಾಗಿ ರೂಪುಗೊಂಡಿದೆ ಎಂಬುದು ಇಂದಿನ ದಿನದ ವಿಶೇಷವಾಗಿತ್ತು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್