ರೈತರಿಗೆ ಮತ್ತು ಮಹಿಳೆಯರಿಗೆ ಡಿಸಿಸಿ ಬ್ಯಾಂಕ್ ವತಿಯಿಂದ ಸಾಲ ನೀಡಲು ಮನವಿ
ರೈತರಿಗೆ ಮತ್ತು ಮಹಿಳೆಯರಿಗೆ ಡಿಸಿಸಿ ಬ್ಯಾಂಕ್ನಿ0ದ ಸಾಲ ನೀಡಲು ಮನವಿ
ಬಣಕನಹಳ್ಳಿ ನಟರಾಜ್


ಕೋಲಾರ, 08 ಸೆಪ್ಟಂಬರ್ (ಹಿ.ಸ)

ಆ್ಯಂಕರ್ : ಕಾಂಗ್ರೆಸ್ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಮತಬ್ಯಾಂಕ್ ಹೆಚ್ಚಿಸಿಕೊಳ್ಳುವ ಸ್ವಾರ್ಥಕ್ಕಾಗಿ ಹಿಂದಿನಿಂದಲೂ ಡಿಸಿಸಿ ಬ್ಯಾಂಕ್ ಅನ್ನು ದುರುಪಯೋಗಪಡಿಸಿಕೊಂಡು ಬಂದಿದ್ದಾರೆ. ರೈತರು, ಮಹಿಳೆಯರ ಜೀವನಾಡಿ ಎನಿಸಿದ್ದ ಬ್ಯಾಂಕ್ ಅನ್ನು ಅಧಃಪತನಕ್ಕೆ ದೂಡಿದ್ದಾರೆ ಎಂದು ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್ ಆರೋಪಿಸಿದರು.

ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಡಿಸಿಸಿ ಬ್ಯಾಂಕ್ ಈಗಾಗಲೇ ದಿವಾಳಿಯಾಗಿದೆ. ಹೊಸ ಅಧ್ಯಕ್ಷ ಕೊತ್ತೂರು ಮಂಜುನಾಥ್ ಅದನ್ನು ಪುನಶ್ಚೇತನಗೊಳಿಸಿ, ರೈತರಿಗೆ ಮತ್ತು ಮಹಿಳೆಯರಿಗೆ ಸಾಲ ಕೊಡುವ ವ್ಯವಸ್ಥೆ ಮಾಡಬೇಕು. ಎರಡು ವರ್ಷಗಳಿಂದ ರೈತರಿಗೆ, ಮಹಿಳೆಯರಿಗೆ ಸರಿಯಾಗಿ ಸಾಲ ಸಿಗುತ್ತಿಲ್ಲ. ಹೀಗಾಗಿ, ಖಾಸಗಿ ಫೈನಾನ್ಸ್, ಬಡ್ಡಿ ವ್ಯವಹಾರದ ಮೊರೆ ಹೋಗುತ್ತಿದ್ದಾರೆ. ಜಿಲ್ಲೆಯಲ್ಲಿ ಬರಗಾಲವಿದ್ದು, ಈವರೆಗೆ ಯಾರೂ ಬರ ವೀಕ್ಷಣೆಗೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಡಿಸಿಸಿ ಬ್ಯಾಂಕ್ ಟೇಬಲ್ ಮೇಲೆ ಹಣ ಇಟ್ಟು ಶಾಸಕರ ಸಮ್ಮುಖದಲ್ಲಿ ಸಾಲ ಹಂಚಲಾಯಿತು. ಇದು ಎಷ್ಟು ಮಟ್ಟಿಗೆ ಸರಿ. ಚೆಕ್ ಮೂಲಕ ಕೊಟ್ಟರೆ ಒಪ್ಪಿಕೊಳ್ಳಬಹುದು. ಆದರೆ, ಟೇಬಲ್ ಮೇಲೆ ಜೋಡಿಸಿ ಶಾಸಕರ ಮೂಲಕ ಹಂಚುವುದು ಯಾವ ನ್ಯಾಯ? ಇದೇ ದಿವಾಳಿಗೆ ಮೂಲ ಕಾರಣ. ವೋಟಿಗಾಗಿ, ಸ್ವಾರ್ಥಕ್ಕಾಗಿ ಹಿಂದಿನ ಅಧ್ಯಕ್ಷರನ್ನು ದೇವರು ಎಂದು ಕಾಂಗ್ರೆಸ್ ಶಾಸಕರೇ ಹೊಗಳಿ ಅಟ್ಟಕ್ಕೇರಿಸಿದರು. ಇದಕ್ಕೆ ವಿಧಾನಸಭೆ ಮಾಜಿ ಅಧ್ಯಕ್ಷ ರಮೇಶ್ ಕುಮಾರ್, ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ರೂಪಮ್ಮ, ನಂಜೇಗೌಡ ಹಾಗೂ ಅನಿಲ್ ಕುಮಾರ್ ಕಾರಣ. ತಾವೇ ಮಾಡಿದ ತಪ್ಪನ್ನು ಈಗ ಬೇರೆಯವರ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ. ಎದೆ ಮೇಲೆ ಕೈ ಇಟ್ಟು ಅರ್ಧ ಗಂಟೆ ಯೋಚನೆ ಮಾಡಲಿ, ನಾವೇನು ತಪ್ಪು ಮಾಡಿದ್ದೇವೆ ಎಂಬುದು ಅರ್ಥವಾಗುತ್ತದೆ ಎಂದರು.

ಶಾಸಕರಾದವರೇ ಎಲ್ಲಾ ಅಧಿಕಾರವನ್ನು ತಾವೇ ಇಟ್ಟುಕೊಳ್ಳುತ್ತಿದ್ದು, ಮುಖಂಡರಿಗೆ ಬೆಲೆ ಇಲ್ಲದೆ ಪ್ರಜಾಪ್ರಭುತ್ವ ಕಗ್ಗೊಲೆಯಾಗಿದೆ. ಅವರೇ ಕೆಎಂಎಫ್, ಡಿಸಿಸಿ ಬ್ಯಾಂಕ್, ನಿಗಮ ಮಂಡಳಿಗೆ ಬರುತ್ತಿದ್ದಾರೆ, ಮುಂದೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಎಪಿಎಂಸಿ ಎಲ್ಲವನ್ನೂ ಅವರೇ ಹಿಡಿದುಕೊಳ್ಳಲು ಹೊರಟಿದ್ದಾರೆ ಎಂದು ದೂರಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande