
ಕೋಲಾರ, 07 ಸೆಪ್ಟೆಂಬರ್ (ಹಿ.ಸ):
ಆ್ಯಂಕರ್ : ಕೆಜಿಎಫ್ ತಾಲೂಕಿನ ದೊಡ್ಡಕಾರಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮುಂಜಾನೆ ನಡೆದಿದೆ. ಬೆಂಗಳೂರಿನಿಂದ ಚೆನ್ನೈ ಕಾರಿಡಾರ್ ಎಕ್ಸ್ಪ್ರೆಸ್ ಮಾರ್ಗವಾಗಿ ತೆರಳುತ್ತಿದ್ದ ಟೊಯೋಟಾ ಕಾರು ಅಪಘಾತಕ್ಕೀಡಾಗಿದ್ದು, ಮೃತರನ್ನು ಮೈಸೂರು ಮೂಲದ ದೇವೇಂದ್ರ ಕುಮಾರ್ (೪೦), ಶಾರದಮ್ಮ (೭೦), ಜಿಷ್ಣು (೧೫) ಹಾಗೂ ದೀಕ್ಷಿತಾ (೨೫) ಎಂದು ಗುರುತಿಸಲಾಗಿದೆ.
ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ವಾಹನದಲ್ಲಿದ್ದ ಮತ್ತಿತರ ನಾಲ್ವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ತಕ್ಷಣವೇ ಸ್ಥಳೀಯರು ಹಾಗೂ ಪೊಲೀಸರು ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಬೆತಮಂಗಲ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರೆಸಿದ್ದಾರೆ. ಮುಂಜಾನೆಯ ವೇಳೆ ಸಂಭವಿಸಿದ ಈ ದುರ್ಘಟನೆಯಿಂದಾಗಿ ಮೃತರ ಕುಟುಂಬದಲ್ಲಿ ತೀವ್ರ ಶೋಕಮೂಡಿದೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್