ಬೆಳಗಾವಿ ಪಾಲಿಕೆ ಸಭೆಯಲ್ಲಿ ಮಹಿಳಾ ಅಧಿಕಾರಿಗೆ ಅವಮಾನ ಆರೋಪ; ಸಿಬ್ಬಂದಿಯಿಂದ ಪ್ರತಿಭಟನೆ
ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮಹಿಳಾ ಅಧಿಕಾರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರತಿಭಟನೆ ನಡೆಸಿ, AIMIM ಸದಸ್ಯ ಶಾಹಿದ್ ಖಾನ್ ಪಠಾಣ್ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದರು.
belagavi-municipal-corporation-officials-protest-over-insult-to-woman-officer


ಬೆಳಗಾವಿ, 30 ಸೆಪ್ಟೆಂಬರ್ (ಹಿ.ಸ.):

ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮಹಿಳಾ ಅಧಿಕಾರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಬುಧವಾರ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಪಾಲಿಕೆ ಅಭಿವೃದ್ಧಿ ಶಾಖೆಯ ಉಪ ಆಯುಕ್ತೆ ಲಕ್ಷ್ಮೀ ನಿಪ್ಪಾಣಿಕರ್ ಅವರನ್ನು ಪಾಲಿಕೆ ಸದಸ್ಯ ಹಾಗೂ AIMIMನ ಶಾಹಿದ್ ಖಾನ್ ಪಠಾಣ್ ಅವಮಾನಿಸಿದ್ದಾರೆ ಎಂದು ಆರೋಪಿಸಿ ಅಧಿಕಾರಿಗಳು ಮತ್ತು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದರು.

‘ದಲಿತ ವಿರೋಧಿ ನಗರ ಸೇವಕರು’ ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು, ಶಾಹಿದ್ ಖಾನ್ ಪಠಾಣ್ ವಿರುದ್ಧ ಕಾನೂನು ಕ್ರಮ ಕೈಗೊಂಡು ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು.

ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪಾಲಿಕೆ ಅಭಿವೃದ್ಧಿ ಕಾರ್ಯಗಳ ಕುರಿತು ಪ್ರಶ್ನಿಸಿದ ಸಂದರ್ಭದಲ್ಲಿ ಶಾಹಿದ್ ಖಾನ್ ಪಠಾಣ್ ಅವರು, ಅಧಿಕಾರಿಗಳು ಕೆಲಸ ಮಾಡಲು ಲಾಯಕ್ ಇಲ್ಲ ಎಂಬ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದಕ್ಕೆ ಲಕ್ಷ್ಮೀ ನಿಪ್ಪಾಣಿಕರ್ ಸಭೆಯಲ್ಲೇ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಅವರು ಸೇರಿದಂತೆ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಧರಣಿ ಸತ್ಯಾಗ್ರಹ ನಡೆಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಶಾಹಿದ್ ಖಾನ್ ಪಠಾಣ್, “ಮಹಾನಗರ ಪಾಲಿಕೆಯಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ರೆಸಲ್ಯೂಷನ್ ಪಾಸ್ ಮಾಡಿ ಒಂದೂವರೆ ವರ್ಷವಾದರೂ ಅಧಿಕಾರಿಗಳಿಂದ ಯಾವುದೇ ಉತ್ತರ ಸಿಕ್ಕಿಲ್ಲ.

ಸಭೆಯಲ್ಲಿ ಪ್ರಶ್ನೆ ಕೇಳಿದರೂ ಸುಮಾರು ಒಂದೂವರೆ ಗಂಟೆ ಕಾಲಹರಣ ಮಾಡಲಾಯಿತು. ಈ ಬಗ್ಗೆ ಮೇಯರ್ ಹಾಗೂ ವಿಪಕ್ಷ ನಾಯಕರೊಂದಿಗೆ ಸಭೆ ನಡೆಸುತ್ತೇವೆ. ಸಭೆಯ ಬಳಿಕ ಮುಂದಿನ ನಿರ್ಧಾರ ತಿಳಿಸುತ್ತೇವೆ” ಎಂದು ಹೇಳಿದರು.

ಇದೇ ವೇಳೆ, ಬೆಳಗಾವಿ ಮಹಾನಗರ ಪಾಲಿಕೆಯ ಸಭೆಯ ಅಂತ್ಯದಲ್ಲಿ ಕನ್ನಡಪರ ನಿರ್ಣಯವನ್ನೂ ಬಹುಮತದಿಂದ ಅಂಗೀಕರಿಸಲಾಯಿತು.

1988ರ ಸದನದ ನಿರ್ಣಯದಂತೆ ಮುಂದುವರಿಯುವಂತೆ ಸರ್ಕಾರಕ್ಕೆ ಪತ್ರ ಬರೆಯಲು ಹಾಗೂ ಮಹಾಜನ್ ವರದಿಯೇ ಅಂತಿಮ ಎಂಬ ನಿಲುವನ್ನು ಮುಂದುವರಿಸಲು ನಿರ್ಣಯ ಕೈಗೊಳ್ಳಲಾಯಿತು.

ಆಯುಕ್ತ ಕಾರ್ತಿಕ ಎಂ. ಅವರು ಸರ್ಕಾರದ ಪತ್ರವನ್ನು ಸಭೆಯಲ್ಲಿ ಓದಿದರು. ಮೇಯರ್ ನಿರ್ಣಯವನ್ನು ಪ್ರಕಟಿಸಿದಾಗ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಮೇಜು ತಟ್ಟಿ ಬೆಂಬಲಿಸಿದರು.

ಮೇಯರ್ ಅವರ ರೋಲಿಂಗ್ಗೆ ಎಂಇಎಸ್ ಬೆಂಬಲಿತ ಸದಸ್ಯರು ವಿರೋಧ ವ್ಯಕ್ತಪಡಿಸಿ ಸಭೆಯನ್ನು ಬಹಿಷ್ಕರಿಸಿದರು. ಸುಮಾರು ಆರು ತಿಂಗಳ ಹೋರಾಟದ ಬಳಿಕ ಪಾಲಿಕೆ ಸರ್ಕಾರದ ಆದೇಶವನ್ನು ಯಥಾವತ್ತಾಗಿ ಪಾಲಿಸುವ ನಿರ್ಧಾರ ಕೈಗೊಂಡಿದ್ದು, ಸರ್ಕಾರದೊಂದಿಗೆ ಸಂಘರ್ಷಕ್ಕೆ ಇಳಿಯದ ನಿಲುವು ತಾಳಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande