ಕಲೇಶ್ವರ ದೇವರ ಹುಚ್ಚಯ್ಯ ತೇರು ಉತ್ಸವ
ಗದಗ, 03 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್:- ಗದಗ ಜಿಲ್ಲೆಯ ಜಕ್ಕಲಿ ಗ್ರಾಮದ ಆರಾಧ್ಯ ದೈವ ಶ್ರೀ ಕಲೇಶ್ವರ ದೇವರ ಹುಚ್ಚಯ್ಯ ತೇರು ಉತ್ಸವ ಸೋಮವಾರ ಅತ್ಯಂತ ವೈಭವದಿಂದ ನಡೆಯಿತು. ನೂರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದು, ತೇರು ಎಳೆದು ಹರಕೆ ಸಲ್ಲಿಸುವ ಮೂಲಕ ಧಾರ್ಮಿಕ ಸಂಭ್ರಮದಲ್ಲಿ ಭಾಗಿಯಾದರು.
ಫೋಟೋ


ಗದಗ, 03 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:- ಗದಗ ಜಿಲ್ಲೆಯ ಜಕ್ಕಲಿ ಗ್ರಾಮದ ಆರಾಧ್ಯ ದೈವ ಶ್ರೀ ಕಲೇಶ್ವರ ದೇವರ ಹುಚ್ಚಯ್ಯ ತೇರು ಉತ್ಸವ ಸೋಮವಾರ ಅತ್ಯಂತ ವೈಭವದಿಂದ ನಡೆಯಿತು. ನೂರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದು, ತೇರು ಎಳೆದು ಹರಕೆ ಸಲ್ಲಿಸುವ ಮೂಲಕ ಧಾರ್ಮಿಕ ಸಂಭ್ರಮದಲ್ಲಿ ಭಾಗಿಯಾದರು.

ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ಕಲೇಶ್ವರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ವಿಶೇಷ ಪೂಜೆ, ಮಹಾರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು. ಗ್ರಾಮದ ಮಹಿಳೆಯರು ತಮ್ಮ ಮನೆಗಳಲ್ಲಿ ಸಿದ್ಧಪಡಿಸಿದ ಸಿಹಿ ಅಡುಗೆ ಹಾಗೂ ವಿವಿಧ ನೈವೇದ್ಯಗಳನ್ನು ದೇವರಿಗೆ ಸಮರ್ಪಿಸಿ ಭಕ್ತಿ ಮೆರೆದರು. ಜಾತ್ರೆಗೆ ಆಗಮಿಸಿದ ಭಕ್ತರ ಅನುಕೂಲಕ್ಕಾಗಿ ದೇವಸ್ಥಾನ ಸಮಿತಿ ವತಿಯಿಂದ ಅನ್ನದಾಸೋಹದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ವೀರಭದ್ರೇಶ್ವರ ದೇವಸ್ಥಾನದಿಂದ ನಂದಿಕೋಲನ್ನು ಮೆರವಣಿಗೆ ಮೂಲಕ ಕಲೇಶ್ವರ ದೇವಸ್ಥಾನಕ್ಕೆ ತರಲಾಯಿತು. ನಂತರ ಶಿವಶರಣರಾದ ಅಣ್ಣಯ್ಯ-ತಮ್ಮಯ್ಯನವರ ಮನೆಯಿಂದ ಕಳಸವನ್ನು ತಂದು ಪೂಜೆ ಸಲ್ಲಿಸಿ ಹುಚ್ಚಯ್ಯ ತೇರಿಗೆ ಜೋಡಿಸಲಾಯಿತು. ಶಿವಶರಣರ ಮರಿ ಮೊಮ್ಮಕ್ಕಳು ಪೂಜೆ ಸಲ್ಲಿಸಿದ ಬಳಿಕ ತೇರು ಎಳೆಯುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಹೂವುಗಳಿಂದ ಆಕರ್ಷಕವಾಗಿ ಅಲಂಕರಿಸಿದ್ದ ಭವ್ಯ ತೇರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗುತ್ತಿದ್ದಂತೆ ಭಕ್ತರ ಸಂಭ್ರಮ ಮುಗಿಲು ಮುಟ್ಟಿತು. 'ಶ್ರೀ ಕಲೇಶ್ವರ ಮಹಾರಾಜ್ ಕೀ ಜೈ', 'ಹರ ಹರ ಮಹಾದೇವ' ಎಂಬ ಜಯಘೋಷಗಳು ಎಲ್ಲೆಡೆ ಮೊಳಗಿದವು. ಭಕ್ತರು ಉತ್ತತ್ತಿ ಎಸೆದು, ನಮಸ್ಕರಿಸಿ ತೇರನ್ನು ಎಳೆದು ದೇವರ ಕೃಪೆಗೆ ಪಾತ್ರರಾಗಲು ಮುಂದಾದರು.

ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದ ದುರ್ಗಾದೇವಿ ಹಾಗೂ ಬೀರದೇವರ ಡೊಳ್ಳು ಮೇಳದ ಡೊಳ್ಳು ಕುಣಿತ ನೆರೆದಿದ್ದವರನ್ನು ರಂಜಿಸಿತು. ಡೊಳ್ಳಿನ ನಾದಕ್ಕೆ ಕಲಾವಿದರು ಪ್ರದರ್ಶಿಸಿದ ಕುಣಿತಕ್ಕೆ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದರು. ಯುವಕರ ತಂಡ ನಂದಿಕೋಲನ್ನು ಒಂದೇ ಕೈಯಲ್ಲಿ ಎತ್ತಿ ಹಿಡಿದು ಪ್ರದರ್ಶಿಸಿದ ಸಾಹಸವೂ ಜನರ ಗಮನ ಸೆಳೆಯಿತು.

ವೀರಭದ್ರೇಶ್ವರ ದೇವಸ್ಥಾನದ ಬಳಿ ಸಾಂಪ್ರದಾಯಿಕ ಒಡಪುಗಳ ಘೋಷ ಮೊಳಗುತ್ತಿದ್ದಂತೆ ಭಕ್ತರು ಭಕ್ತಿಯ ಪರವಶತೆಯಲ್ಲಿ ತೇಲಿದರು.

ತಳಿರು-ತೋರಣಗಳಿಂದ ಸಿಂಗಾರಗೊಂಡಿದ್ದ ಬೀದಿಗಳು ಹಾಗೂ ವಿದ್ಯುತ್ ದೀಪಗಳಿಂದ ಕಂಗೊಳಿಸಿದ ದೇವಸ್ಥಾನದ ಗೋಪುರ, ದೀಪಸ್ತಂಭ ಮತ್ತು ನವಗ್ರಹ ಮಂಟಪ ಜಾತ್ರೆಯ ಸೊಬಗನ್ನು ಹೆಚ್ಚಿಸಿತು.

ಗ್ರಾಮದ ಪ್ರಮುಖ ದೇವಸ್ಥಾನಗಳು ಹಾಗೂ ವಿವಿಧ ಬೀದಿಗಳಲ್ಲಿ ಸಂಚರಿಸಿದ ಹುಚ್ಚಯ್ಯ ಉತ್ಸವವು ಭೋರ್ಗಲ್ವರೆಗೆ ತೆರಳಿ ಬಳಿಕ ಸ್ವಸ್ಥಾನಕ್ಕೆ ಮರಳಿತು. ತೇರು ಸ್ವಸ್ಥಾನ ತಲುಪುತ್ತಿದ್ದಂತೆ ಭಕ್ತರು ಹರ್ಷ ವ್ಯಕ್ತಪಡಿಸಿ ದೇವರ ದರ್ಶನ ಪಡೆದರು.

ಜಕ್ಕಲಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಧಾರ್ಮಿಕ ಆಚರಣೆಗಳು, ಸಾಂಪ್ರದಾಯಿಕ ಸಂಪ್ರದಾಯಗಳು, ಡೊಳ್ಳು ಕುಣಿತ ಹಾಗೂ ಭಕ್ತರ ಉತ್ಸಾಹದಿಂದ ಹುಚ್ಚಯ್ಯ ತೇರು ಉತ್ಸವವು ಅದ್ದೂರಿಯಾಗಿ ನೆರವೇರಿತು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande