
ಗದಗ, 03 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:- ರಾಷ್ಟ್ರೀಯ ಹಬ್ಬಗಳು, ದಸರಾ ಕ್ರೀಡಾಕೂಟ ಸೇರಿದಂತೆ ವಿವಿಧ ಕ್ರೀಡಾ ಚಟುವಟಿಕೆಗಳಿಗೆ ವೇದಿಕೆಯಾಗಿರುವ ನಗರದ ಜಿಲ್ಲಾ ಕ್ರೀಡಾಂಗಣದ ಮೂಲ ಸ್ವರೂಪಕ್ಕೆ ಧಕ್ಕೆ ತರುವ ಯಾವುದೇ ಕಾಮಗಾರಿಗೆ ಅವಕಾಶ ನೀಡಬಾರದು. ಪ್ರಸ್ತುತ ನಡೆಯುತ್ತಿರುವ ಸಿಂಥೆಟಿಕ್ ಫುಟ್ಬಾಲ್ ಮೈದಾನ ನಿರ್ಮಾಣ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಿ, ಜಿಲ್ಲೆಯ ಎಲ್ಲ ಕ್ರೀಡಾಪಟುಗಳ ಅಗತ್ಯಗಳನ್ನು ಪರಿಗಣಿಸಿ ಕ್ರೀಡಾಂಗಣವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು ಎಂದು ಹಿಂದೂ ಸಂಘಟನೆಯ ಮುಖಂಡ ರಾಜು ಖಾನಪ್ಪನವರ ಒತ್ತಾಯಿಸಿದರು.
ಗದಗ ನಗರದ ಪತ್ರಿಕಾ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕ್ರೀಡಾಂಗಣವನ್ನು ಒಂದೇ ಕ್ರೀಡೆಗೆ ಸೀಮಿತಗೊಳಿಸುವ ಬದಲು ವಿವಿಧ ಕ್ರೀಡಾ ಚಟುವಟಿಕೆಗಳಿಗೆ ಹಾಗೂ ಸಾರ್ವಜನಿಕರ ಬಳಕೆಗೆ ಅನುಕೂಲವಾಗುವ ಬಹುಪಯೋಗಿ ಕ್ರೀಡಾ ಕೇಂದ್ರವನ್ನಾಗಿ ರೂಪಿಸಬೇಕು ಎಂದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಫುಟ್ಬಾಲ್ ಮೈದಾನ ನಿರ್ಮಾಣಕ್ಕೆ ಕಾಮಗಾರಿ ಆರಂಭಿಸಲಾಗಿದ್ದು, ಇದರಿಂದ ಇತರ ಕ್ರೀಡಾ ಚಟುವಟಿಕೆಗಳಿಗೆ ಅಗತ್ಯವಿರುವ ಸ್ಥಳಾವಕಾಶ ಕಡಿಮೆಯಾಗುವ ಸಾಧ್ಯತೆ ಇದೆ. ಕ್ರೀಡಾಪಟುಗಳು ಹಾಗೂ ಸಾರ್ವಜನಿಕರ ಓಡಾಟಕ್ಕೂ ತೊಂದರೆಯಾಗಬಹುದು. ಹೀಗಾಗಿ ಕಾಮಗಾರಿ ಕೈಗೊಳ್ಳುವ ಮುನ್ನ ಕ್ರೀಡಾಪಟುಗಳ ಅಭಿಪ್ರಾಯ ಪಡೆದು, ಕ್ರೀಡಾಂಗಣದ ಸಮಗ್ರ ಅಭಿವೃದ್ಧಿಗೆ ಸೂಕ್ತ ಯೋಜನೆ ರೂಪಿಸಬೇಕು ಎಂದು ಹೇಳಿದರು.
ಈಗಾಗಲೇ ಕ್ರೀಡಾಂಗಣದಲ್ಲಿ ಹಲವು ಮೂಲಭೂತ ಸಮಸ್ಯೆಗಳಿವೆ. ಬಾಸ್ಕೆಟ್ಬಾಲ್ ಹಾಗೂ ಸ್ಕೇಟಿಂಗ್ ಸೇರಿದಂತೆ ಕೆಲವು ಕ್ರೀಡೆಗಳಿಗೆ ಒಂದೇ ಮೈದಾನವನ್ನು ಬಳಸುವ ಪರಿಸ್ಥಿತಿ ಇದೆ. ಅಥ್ಲೆಟಿಕ್ಸ್ ಟ್ರ್ಯಾಕ್ನಲ್ಲಿಯೂ ಅಗತ್ಯ ಸೌಲಭ್ಯಗಳ ಕೊರತೆಯಿದ್ದು, ಏಕಕಾಲದಲ್ಲಿ ಕೆಲವೇ ಕ್ರೀಡಾಪಟುಗಳಿಗೆ ಓಡಲು ಸಾಧ್ಯವಾಗುತ್ತಿದೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದೆ ಹೊಸದಾಗಿ ಮತ್ತೊಂದು ಸಿಂಥೆಟಿಕ್ ಮೈದಾನ ನಿರ್ಮಿಸುವುದು ಎಷ್ಟರ ಮಟ್ಟಿಗೆ ಸೂಕ್ತ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
18 ವರ್ಷ ಹಳೆಯ ಸಿಂಥೆಟಿಕ್ ಟ್ರ್ಯಾಕ್
ಜಿಲ್ಲಾ ಕ್ರೀಡಾಂಗಣದಲ್ಲಿರುವ ಸಿಂಥೆಟಿಕ್ ಟ್ರ್ಯಾಕ್ಗೆ ಸುಮಾರು 18 ವರ್ಷಗಳಾಗಿದ್ದು, ಅದರ ಬಳಕೆಯ ಅವಧಿಯೂ ಪೂರ್ಣಗೊಂಡಿದೆ. ಹೀಗಾಗಿ ಹಳೆಯ ಟ್ರ್ಯಾಕ್ನ ಸ್ಥಿತಿಗತಿ ಪರಿಶೀಲಿಸಿ, ಕ್ರೀಡಾಪಟುಗಳಿಗೆ ಅಗತ್ಯವಿರುವ ಆಧುನಿಕ ಸೌಲಭ್ಯಗಳನ್ನು ಕಲ್ಪಿಸುವತ್ತ ಅಧಿಕಾರಿಗಳು ಗಮನಹರಿಸಬೇಕು.
ಅಥ್ಲೆಟಿಕ್ಸ್, ಬಾಸ್ಕೆಟ್ಬಾಲ್, ಸ್ಕೇಟಿಂಗ್, ಫುಟ್ಬಾಲ್ ಸೇರಿದಂತೆ ವಿವಿಧ ಕ್ರೀಡೆಗಳಿಗೆ ಪ್ರತ್ಯೇಕ ಹಾಗೂ ಗುಣಮಟ್ಟದ ಸೌಲಭ್ಯ ಕಲ್ಪಿಸುವ ಸಮಗ್ರ ಯೋಜನೆ ರೂಪಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಜಿಲ್ಲಾ ಕ್ರೀಡಾಂಗಣವು ಜಿಲ್ಲೆಯ ಕ್ರೀಡಾಪಟುಗಳ ಭವಿಷ್ಯ ರೂಪಿಸುವ ಪ್ರಮುಖ ಕ್ರೀಡಾ ಕೇಂದ್ರವಾಗಿದೆ. ಆದ್ದರಿಂದ ಅವೈಜ್ಞಾನಿಕ ಕಾಮಗಾರಿಗಳ ಮೂಲಕ ಅದರ ಮೂಲ ಸ್ವರೂಪಕ್ಕೆ ಧಕ್ಕೆ ತರಬಾರದು. ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಮುನ್ನ ಕ್ರೀಡಾಪಟುಗಳು, ತರಬೇತುದಾರರು ಹಾಗೂ ಕ್ರೀಡಾ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಒತ್ತಾಯಿಸಿದರು.
ಸ್ಥಳೀಯ ಶಾಸಕರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಸಿಂಥೆಟಿಕ್ ಫುಟ್ಬಾಲ್ ಮೈದಾನದ ಕಾಮಗಾರಿಯನ್ನು ಪರಿಶೀಲಿಸಬೇಕು. ಕ್ರೀಡಾಪಟುಗಳ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ರಾಜು ಖಾನಪ್ಪನವರ ಎಚ್ಚರಿಸಿದರು.
ರಾಜಕೀಯ ಹಸ್ತಕ್ಷೇಪಕ್ಕೆ ಕಡಿವಾಣ
ರವಿಕಾಂತ ಅಂಗಡಿ, ವೆಂಕನಗೌಡ ಗೋವಿಂದಗೌಡ್ರ ಹಾಗೂ ಅರವಿಂದ ಹುಲ್ಲೂರು ಮಾತನಾಡಿ, ಕ್ರೀಡಾ ಕ್ಷೇತ್ರದ ಬಗ್ಗೆ ಅನುಭವ ಹಾಗೂ ಜ್ಞಾನ ಹೊಂದಿರುವ ಅಧಿಕಾರಿಗಳಿಗೆ ಸೂಕ್ತ ಜವಾಬ್ದಾರಿ ನೀಡಬೇಕು. ಪ್ರಭಾರಿ ಅಧಿಕಾರಿಗಳ ಮೂಲಕ ಮಹತ್ವದ ಕ್ರೀಡಾ ಯೋಜನೆಗಳನ್ನು ನಿರ್ವಹಿಸುವುದರಿಂದ ಆಡಳಿತಾತ್ಮಕ ಸಮಸ್ಯೆಗಳು ಎದುರಾಗುತ್ತಿವೆ ಎಂದು ಆರೋಪಿಸಿದರು.
ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿಯಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ನೀಡದೆ, ಕ್ರೀಡಾಪಟುಗಳ ಅಗತ್ಯ ಹಾಗೂ ಭವಿಷ್ಯದ ಕ್ರೀಡಾ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಬೇಕು.
ಜಿಲ್ಲೆಯ ಪ್ರತಿಭಾವಂತ ಕ್ರೀಡಾಪಟುಗಳಿಗೆ ತರಬೇತಿ, ಅಭ್ಯಾಸ ಹಾಗೂ ಸ್ಪರ್ಧೆಗಳಿಗೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳನ್ನು ಒಂದೇ ಸ್ಥಳದಲ್ಲಿ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಪರಮೇಶ ನಾಯಕ್, ಮಹಾಂತೇಶ ಪಾಟೀಲ, ದೇವರಾಜ ದೊಡ್ಡಮನಿ, ನಾಗರಾಜ ಬಂಡಿವಡ್ಡರ, ಮಲ್ಲಿಕಾರ್ಜುನ ಬನ್ನಿಗಿಡದ, ಸಾಗರ, ಪ್ರಭು ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP