
ಇತಿಹಾಸದ ಪುಟಗಳಲ್ಲಿ ಸೆಪ್ಟೆಂಬರ್ 4
ವಿಶ್ವದ ಅತ್ಯಂತ ಪ್ರಸಿದ್ಧ ಹಡಗುಗಳಲ್ಲೊಂದಾದ ಟೈಟಾನಿಕ್ ಮುಳುಗಿ ಸುಮಾರು 73 ವರ್ಷಗಳ ಬಳಿಕ, 1985ರ ಸೆಪ್ಟೆಂಬರ್ 4ರಂದು ಅದರ ಅವಶೇಷಗಳ ಮೊದಲ ಚಿತ್ರಗಳು ಜಗತ್ತಿನ ಮುಂದೆ ಬಂದವು. ಟೈಟಾನಿಕ್ ದುರಂತವು ಇತಿಹಾಸದ ಅತ್ಯಂತ ಪ್ರಸಿದ್ಧ ಸಮುದ್ರ ದುರಂತಗಳ ಪೈಕಿ ಒಂದಾಗಿದೆ.
1912ರ ಏಪ್ರಿಲ್ 10ರಂದು ಬ್ರಿಟನ್‌ನ ಸೌಥಾಂಪ್ಟನ್ ಬಂದರಿನಿಂದ ನ್ಯೂಯಾರ್ಕ್‌ಗೆ ಟೈಟಾನಿಕ್ ತನ್ನ ಮೊದಲ ಪ್ರಯಾಣ ಆರಂಭಿಸಿತ್ತು. ಆ ಕಾಲದಲ್ಲಿ ಇದು ವಿಶ್ವದ ಅತಿ ದೊಡ್ಡ ಆವಿಚಾಲಿತ ಪ್ರಯಾಣಿಕ ಹಡಗಾಗಿತ್ತು. ಸುಮಾರು 2,200 ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಹೊತ್ತಿದ್ದ ಟೈಟಾನಿಕ್ ಅತ್ಯಂತ ಸುರಕ್ಷಿತ ಹಡಗು ಎಂದು ಪರಿಗಣಿಸಲಾಗಿತ್ತು.
ಏಪ್ರಿಲ್ 14ರ ರಾತ್ರಿ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಟೈಟಾನಿಕ್ ಹಿಮಗಡ್ಡೆಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಹಡಗಿನೊಳಗೆ ವೇಗವಾಗಿ ನೀರು ನುಗ್ಗಿ ಕೆಲವೇ ಗಂಟೆಗಳಲ್ಲಿ ಅದು ಸಮುದ್ರದಲ್ಲಿ ಮುಳುಗಿತು. ದುರಂತದಲ್ಲಿ 1,500ಕ್ಕೂ ಹೆಚ್ಚು ಮಂದಿ ಮೃತಪಟ್ಟರು.
ದಶಕಗಳ ಕಾಲ ಟೈಟಾನಿಕ್ ಅವಶೇಷಗಳ ಪತ್ತೆಯಾಗಿರಲಿಲ್ಲ. ಕೊನೆಗೆ ಅಮೆರಿಕದ ಸಮುದ್ರ ವಿಜ್ಞಾನಿ ರಾಬರ್ಟ್ ಬಲ್ಲಾರ್ಡ್ ನೇತೃತ್ವದ ಕಾರ್ಯಾಚರಣೆಯಲ್ಲಿ 1985ರ ಸೆಪ್ಟೆಂಬರ್‌ನಲ್ಲಿ ಸಮುದ್ರದ ಸುಮಾರು 13 ಸಾವಿರ ಅಡಿ ಆಳದಲ್ಲಿ ಹಡಗಿನ ಅವಶೇಷಗಳನ್ನು ಪತ್ತೆಹಚ್ಚಲಾಯಿತು. ಹಡಗು ಎರಡು ಪ್ರಮುಖ ಭಾಗಗಳಾಗಿ ಒಡೆದುಹೋಗಿರುವುದು ಕಂಡುಬಂದಿತ್ತು.
ಪ್ರಮುಖ ಘಟನೆಗಳು
1665: ಮೊಘಲರು ಮತ್ತು ಛತ್ರಪತಿ ಶಿವಾಜಿ ಮಹಾರಾಜರ ನಡುವೆ ರಾಜಾ ಜಯಸಿಂಗ್ ಒಪ್ಪಂದಕ್ಕೆ ಸಹಿ.
1781: ಸ್ಪೇನ್‌ನ ನಿವಾಸಿಗಳಿಂದ ಲಾಸ್ ಏಂಜಲೀಸ್ ನಗರದ ಸ್ಥಾಪನೆ.
1888: ಮಹಾತ್ಮ ಗಾಂಧೀಜಿ ಇಂಗ್ಲೆಂಡ್‌ಗೆ ಸಮುದ್ರಯಾನ ಆರಂಭಿಸಿದರು.
1944: ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲಿ ಬ್ರಿಟಿಷ್ ಪಡೆಗಳು ಬೆಲ್ಜಿಯಂನ ಆಂಟ್‌ವರ್ಪ್ ನಗರ ಪ್ರವೇಶಿಸಿದವು.
1946: ಭಾರತದಲ್ಲಿ ಮಧ್ಯಂತರ ಸರ್ಕಾರ ರಚನೆ.
1967: ಮಹಾರಾಷ್ಟ್ರದ ಕೊಯ್ನಾ ಅಣೆಕಟ್ಟಿನ ಪ್ರದೇಶದಲ್ಲಿ 6.5 ತೀವ್ರತೆಯ ಭೂಕಂಪ; 200ಕ್ಕೂ ಹೆಚ್ಚು ಮಂದಿ ಮೃತರು.
1969: ಉತ್ತರ ವಿಯೆಟ್ನಾಂ ಅಧ್ಯಕ್ಷ ಹಾಗೂ ರಾಷ್ಟ್ರಪಿತ ಹೋ ಚಿ ಮಿನ್ ನಿಧನ.
1985: ಟೈಟಾನಿಕ್ ಅವಶೇಷಗಳ ಮೊದಲ ಚಿತ್ರಗಳು 73 ವರ್ಷಗಳ ಬಳಿಕ ಬಹಿರಂಗ.
1988: ಜಾರ್ಜ್ ಈಸ್ಟ್‌ಮನ್‌ಗೆ ರೋಲ್ ಫಿಲ್ಮ್ ಕ್ಯಾಮೆರಾ ಪೇಟೆಂಟ್ ದೊರೆಯಿತು.
1998: ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್, ಮೋನಿಕಾ ಲೆವಿನ್ಸ್ಕಿ ಸಂಬಂಧದ ಬಗ್ಗೆ ತಪ್ಪು ಮಾಡಿರುವುದಾಗಿ ಒಪ್ಪಿಕೊಂಡರು.
1998: ಡರ್ಬನ್‌ನಲ್ಲಿ 12ನೇ ಅಲಿಪ್ತ ರಾಷ್ಟ್ರಗಳ ಶೃಂಗಸಭೆ ಮುಕ್ತಾಯ.
1998: ಲ್ಯಾರಿ ಪೇಜ್ ಮತ್ತು ಸರ್ಗೇ ಬ್ರಿನ್ ಅಭಿವೃದ್ಧಿಪಡಿಸಿದ್ದ ಗೂಗಲ್‌ನ ಅಧಿಕೃತ ಆರಂಭ.
1999: ಪೂರ್ವ ಟಿಮೋರ್ ಜನಮತಗಣನೆಯಲ್ಲಿ ಶೇ.78.5ರಷ್ಟು ಮಂದಿ ಇಂಡೋನೇಷ್ಯಾದಿಂದ ಸ್ವಾತಂತ್ರ್ಯಕ್ಕೆ ಬೆಂಬಲ.
2006: ಆಸ್ಟ್ರೇಲಿಯಾದ ಪ್ರಸಿದ್ಧ ದೂರದರ್ಶನ ನಿರೂಪಕ ಹಾಗೂ ಪರಿಸರವಾದಿ ಸ್ಟೀವ್ ಇರ್ವಿನ್ ಸ್ಟಿಂಗ್ರೇ ಮೀನಿನ ದಾಳಿಗೆ ಬಲಿಯಾದರು.
2007: ಇರಾನ್‌ನ ಮಾಜಿ ಅಧ್ಯಕ್ಷ ಅಕ್ಬರ್ ಹಶ್ಮಿ ರಫ್ಸಂಜಾನಿ ಅವರನ್ನು ದೇಶದ ಅತ್ಯುನ್ನತ ಧಾರ್ಮಿಕ ಸಂಸ್ಥೆಯ ಮುಖ್ಯಸ್ಥರಾಗಿ ಆಯ್ಕೆ ಮಾಡಲಾಯಿತು.
2009: ಗುಜರಾತ್ ಹೈಕೋರ್ಟ್ ಜಸ್ವಂತ್ ಸಿಂಗ್ ಅವರ ಮೊಹಮ್ಮದ್ ಅಲಿ ಜಿನ್ನಾ ಕುರಿತ ಪುಸ್ತಕದ ಮೇಲಿನ ರಾಜ್ಯದ ನಿಷೇಧ ತೆರವುಗೊಳಿಸಿತು.
2012: ಪ್ಯಾರಾಲಿಂಪಿಕ್ಸ್‌ನಲ್ಲಿ ಗಿರೀಶ್ ಹೊಸನಗರ ನಾಗರಾಜೇಗೌಡ ಭಾರತಕ್ಕೆ ಮೊದಲ ಪದಕ ತಂದುಕೊಟ್ಟರು.
2020: ನೆಹರು ಪರ್ವತಾರೋಹಣ ಸಂಸ್ಥೆಯ ಮೂವರು ಸದಸ್ಯರು ಭಾರತ-ಚೀನಾ ಗಡಿಯ ನೆಲಾಂಗ್ ಕಣಿವೆಯಲ್ಲಿ ಮೂರು ಶಿಖರಗಳನ್ನು ಏರುವ ಮೂಲಕ ಸಾಧನೆ ಮಾಡಿದರು.
ಜನನ
1825ರಲ್ಲಿ ದಾದಾಭಾಯಿ ನೌರೋಜಿ, 1880ರಲ್ಲಿ ಭೂಪೇಂದ್ರನಾಥ ದತ್ತ, 1895ರಲ್ಲಿ ಸಿಯಾರಾಮಶರಣ ಗುಪ್ತ, 1904ರಲ್ಲಿ ಪ್ರೇಮೇಂದ್ರ ಮಿತ್ರ, 1906ರಲ್ಲಿ ನಂದದುಲಾರೆ ವಾಜಪೇಯಿ, 1909ರಲ್ಲಿ ಬ್ರಜ್ ಕುಮಾರ್ ನೆಹರು, 1941ರಲ್ಲಿ ಸುಶೀಲ್ ಕುಮಾರ್ ಶಿಂಧೆ, 1952ರಲ್ಲಿ ನಟ ಋಷಿ ಕಪೂರ್, 1962ರಲ್ಲಿ ಕ್ರಿಕೆಟಿಗ ಕಿರಣ್ ಮೋರೆ, 1971ರಲ್ಲಿ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಲಾನ್ಸ್ ಕ್ಲೂಸ್ನರ್ ಹಾಗೂ 1982ರಲ್ಲಿ ಕಾಂಗ್ರೆಸ್ ನಾಯಕ ಗೌರವ್ ಗೊಗೊಯಿ ಜನಿಸಿದರು.
ನಿಧನ
1912ರಲ್ಲಿ ಮೋಹನಲಾಲ್ ವಿಷ್ಣು ಪಂಡ್ಯ, 1975ರಲ್ಲಿ ಬಲದೇವ ಪ್ರಸಾದ್ ಮಿಶ್ರ, 1984ರಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಭೋಲಾ ಪಾಸ್ವಾನ್ ಶಾಸ್ತ್ರಿ, 1997ರಲ್ಲಿ ಸಾಹಿತಿ ಧರ್ಮವೀರ್ ಭಾರತಿ, 2006ರಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಸತ್ಯೇಂದ್ರ ನಾರಾಯಣ ಸಿಂಗ್ ಹಾಗೂ ಆಸ್ಟ್ರೇಲಿಯಾದ ಪರಿಸರವಾದಿ ಸ್ಟೀವ್ ಇರ್ವಿನ್, 2015ರಲ್ಲಿ ಗೋವಾದ ಮಾಜಿ ಮುಖ್ಯಮಂತ್ರಿ ವಿಲ್ಫ್ರೆಡ್ ಡಿಸೋಜಾ ನಿಧನರಾದರು.
ಪ್ರಮುಖ ದಿನಾಚರಣೆ
ರಾಷ್ಟ್ರೀಯ ಪೋಷಣಾ ದಿನಾಚರಣೆ (ವಾರ).
-----------
ಹಿಂದೂಸ್ತಾನ್ ಸಮಾಚಾರ್ / Rakesh.M.B.