
ಬೆಂಗಳೂರು, 25 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಚಿನ್ನ ಖರೀದಿ ಸಂಸ್ಥೆ ಅಟ್ಟಿಕಾ ಗೋಲ್ಡ್ಗೆ ಸತತವಾಗಿ ತನಿಖಾ ಸಂಸ್ಥೆಗಳ ಬಿಸಿ ತಟ್ಟಿದೆ. ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ಶೋಧ ಕಾರ್ಯಾಚರಣೆ ಮುಕ್ತಾಯಗೊಂಡ ಕೆಲವೇ ಗಂಟೆಗಳಲ್ಲಿ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳು ಸಂಸ್ಥೆಗೆ ಸಂಬಂಧಿಸಿದ 19 ಸ್ಥಳಗಳಲ್ಲಿ ದಾಳಿ ನಡೆಸಿ ಪರಿಶೀಲನೆ ಆರಂಭಿಸಿದ್ದಾರೆ.
ಅಟ್ಟಿಕಾ ಗೋಲ್ಡ್ ಸಂಸ್ಥೆಯ ಕಚೇರಿಗಳು ಹಾಗೂ ಸಂಬಂಧಿತ ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ಹಣಕಾಸು ವ್ಯವಹಾರಗಳು, ಖಾತೆ ಪುಸ್ತಕಗಳು ಮತ್ತು ಇತರ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಗ್ರಾಹಕರಿಂದ ನೇರವಾಗಿ ಚಿನ್ನ ಖರೀದಿ, ಹಣಕಾಸು ವ್ಯವಹಾರಗಳಲ್ಲಿ ಅಕ್ರಮ ಹಾಗೂ ತೆರಿಗೆ ಸಂಬಂಧಿತ ಆರೋಪಗಳ ಹಿನ್ನೆಲೆಯಲ್ಲಿ ಈ ಪರಿಶೀಲನೆ ನಡೆದಿದೆ ಎನ್ನಲಾಗಿದೆ.
ಇದಕ್ಕೂ ಮುನ್ನ ಅಟ್ಟಿಕಾ ಗೋಲ್ಡ್ಗೆ ಸಂಬಂಧಿಸಿದ 19ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ಶೋಧ ನಡೆಸಿದ್ದರು. ಹಣಕಾಸು ಅಕ್ರಮ ಹಾಗೂ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಆರೋಪಗಳ ಹಿನ್ನೆಲೆಯಲ್ಲಿ ದಾಖಲೆಗಳು ಮತ್ತು ವಹಿವಾಟಿನ ಮಾಹಿತಿಯನ್ನು ಅಧಿಕಾರಿಗಳು ಪರಿಶೀಲಿಸಿದ್ದರು ಎಂದು ವರದಿಗಳು ತಿಳಿಸಿವೆ.
“ಅಟ್ಟಿಕಾ ಗೋಲ್ಡ್ಗೆ ಸಂಬಂಧಿಸಿದ 19 ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಸಂಸ್ಥೆಯ ಹಣಕಾಸು ವ್ಯವಹಾರಗಳು ಮತ್ತು ದಾಖಲೆಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ” ಎಂದು ಮೂಲಗಳು ತಿಳಿಸಿವೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R