ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸುವಲ್ಲಿ: ಎನ್ಎಸ್ಎಸ್ ಪ್ರಮುಖ ಪಾತ್ರ
ಗದಗ, 25 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್:- ವಿದ್ಯಾರ್ಥಿಗಳಲ್ಲಿ ರಾಷ್ಟ್ರ ಸೇವಾ ಮನೋಭಾವ, ಸಾಮಾಜಿಕ ಹೊಣೆಗಾರಿಕೆ, ನಾಯಕತ್ವ ಗುಣ ಹಾಗೂ ಸಮುದಾಯದೊಂದಿಗೆ ಬೆರೆತು ಕಾರ್ಯನಿರ್ವಹಿಸುವ ಮನೋಭಾವ ಬೆಳೆಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಪ್ರಮುಖ ವೇದಿಕೆಯಾಗಿದೆ ಎಂದು ಮಹಾತ್ಮ ಗಾಂಧಿ ಗ್ರಾಮೀಣಾ
ಫೋಟೋ


ಗದಗ, 25 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:- ವಿದ್ಯಾರ್ಥಿಗಳಲ್ಲಿ ರಾಷ್ಟ್ರ ಸೇವಾ ಮನೋಭಾವ, ಸಾಮಾಜಿಕ ಹೊಣೆಗಾರಿಕೆ, ನಾಯಕತ್ವ ಗುಣ ಹಾಗೂ ಸಮುದಾಯದೊಂದಿಗೆ ಬೆರೆತು ಕಾರ್ಯನಿರ್ವಹಿಸುವ ಮನೋಭಾವ ಬೆಳೆಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಪ್ರಮುಖ ವೇದಿಕೆಯಾಗಿದೆ ಎಂದು ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಅಮರೇಶ್ ಯಾತಗಲ್ ಹೇಳಿದರು.

ಗದಗ ನಗರದ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಿಕ್ಷಣದ ಉದ್ದೇಶ ಕೇವಲ ಜ್ಞಾನ ಸಂಪಾದನೆಗೆ ಸೀಮಿತವಾಗಬಾರದು. ಸಮಾಜದಲ್ಲಿರುವ ಸಮಸ್ಯೆಗಳನ್ನು ಅರಿತುಕೊಂಡು, ಅವುಗಳ ಪರಿಹಾರಕ್ಕೆ ಕೈಜೋಡಿಸುವ ಜವಾಬ್ದಾರಿಯುತ ಯುವಕರನ್ನು ರೂಪಿಸುವುದು ಶಿಕ್ಷಣದ ಪ್ರಮುಖ ಉದ್ದೇಶವಾಗಬೇಕು. ಈ ನಿಟ್ಟಿನಲ್ಲಿ ಎನ್ಎಸ್ಎಸ್ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆಯನ್ನು ಒದಗಿಸುತ್ತಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಗ್ರಾಮೀಣ ಜನರ ಜೀವನ, ಸ್ಥಳೀಯ ಸಮಸ್ಯೆಗಳು ಹಾಗೂ ಅಭಿವೃದ್ಧಿಯ ಅಗತ್ಯಗಳನ್ನು ನೇರವಾಗಿ ಅರಿತುಕೊಳ್ಳಬೇಕು.

ಗ್ರಾಮೀಣ ಜನರೊಂದಿಗೆ ಬೆರೆತು ಕೆಲಸ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಸಮಾಜದ ವಾಸ್ತವ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

‘ಸೇವೆಯ ಮೂಲಕ ಕಲಿಕೆ–ಕಲಿಕೆಯ ಮೂಲಕ ಸಮಾಜ ಪರಿವರ್ತನೆ’ ಎಂಬ ಆಶಯವನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸೇವಾ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಶಿಸ್ತು, ಸಾಮಾಜಿಕ ಕಾಳಜಿ ಹಾಗೂ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸುತ್ತವೆ ಎಂದು ಪ್ರೊ. ಅಮರೇಶ್ ಯಾತಗಲ್ ತಿಳಿಸಿದರು.

ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ

ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದ ಎನ್ಎಸ್ಎಸ್ ಕಾರ್ಯಕ್ರಮ ಸಂಯೋಜಕ ಶ್ರೀ ಪ್ರಕಾಶ್ ಮಾಚೇನಹಳ್ಳಿ, ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶ ಮತ್ತು ಮಹತ್ವದ ಕುರಿತು ವಿವರಿಸಿದರು.

ವಿಶ್ವವಿದ್ಯಾಲಯದ ಎನ್ಎಸ್ಎಸ್ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗುತ್ತಿರುವ ವಿವಿಧ ಸಾಮಾಜಿಕ ಹಾಗೂ ಸಮುದಾಯಮುಖಿ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದ ಅವರು, ವಿದ್ಯಾರ್ಥಿಗಳು ಸೇವಾ ಮನೋಭಾವದಿಂದ ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

‘ವಿಕಸಿತ ಯುವ ಭಾರತ’ ರಸಪ್ರಶ್ನೆ

ಸಂಸ್ಥಾಪನಾ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ‘ವಿಕಸಿತ ಯುವ ಭಾರತ’ ಆನ್ಲೈನ್ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿತ್ತು.

ಯುವಜನರಲ್ಲಿ ರಾಷ್ಟ್ರ ನಿರ್ಮಾಣ, ಸಾಮಾಜಿಕ ಜವಾಬ್ದಾರಿ ಹಾಗೂ ಸಮಕಾಲೀನ ವಿಷಯಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು. ದೇಶದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರದ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಇದಾಗಿತ್ತು.

ಗಣರಾಜ್ಯೋತ್ಸವ ಪಥಸಂಚಲನದ ಅನುಭವ ಹಂಚಿಕೆ

ರಾಷ್ಟ್ರೀಯ ಗಣರಾಜ್ಯೋತ್ಸವ ಪಥಸಂಚಲನದ ಆಯ್ಕೆ ಪ್ರಕ್ರಿಯೆ ಶಿಬಿರಕ್ಕೆ ವಿಶ್ವವಿದ್ಯಾಲಯದಿಂದ ಆಯ್ಕೆಯಾಗಿದ್ದ ಎನ್ಎಸ್ಎಸ್ ಸ್ವಯಂಸೇವಕರಾದ ಕು. ಪವನ ದೊಡ್ಡಮನಿ ಹಾಗೂ ಕು. ಆಪ್ರೀನಾ ಬೇಗಮ್ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಆಯ್ಕೆ ಪ್ರಕ್ರಿಯೆ, ಶಿಬಿರದ ಅನುಭವ ಹಾಗೂ ಎನ್ಎಸ್ಎಸ್ ಮೂಲಕ ದೊರೆತ ವಿವಿಧ ಅವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಇಂತಹ ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂಬ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಶೈಕ್ಷಣಿಕ ಚಟುವಟಿಕೆಗಳ ವಿಶೇಷಾಧಿಕಾರಿ ಶ್ರೀ ಎಂ.ಬಿ. ಚೆನ್ನಪ್ಪಗೌಡರ, ಕುಲಸಚಿವರ ವಿಶೇಷಾಧಿಕಾರಿ ಶ್ರೀ ಉಮೇಶ್ ಬಾರಕೇರ, ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಶ್ರೀ ಮಹೇಶ ಅಣ್ಣಿಗೇರಿ, ಶ್ರೀ ನಿಂಗಪ್ಪ ಶಿವಬಸಣ್ಣವರ್, ಡಾ. ಸಂಜಯ್ ಹಾರೋಬಿಡಿ ಹಾಗೂ ಕು. ದಿವ್ಯ ರಾಯ್ಕರ್ ಉಪಸ್ಥಿತರಿದ್ದರು.

ವಿಶ್ವವಿದ್ಯಾಲಯದ ಎನ್ಎಸ್ಎಸ್ ಸ್ವಯಂಸೇವಕರು ಹಾಗೂ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande