
ಬೆಂಗಳೂರು, 24 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ದ್ವಿಚಕ್ರ ವಾಹನಕ್ಕೆ ಸಿಮೆಂಟ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾಲೇಜು ವಿದ್ಯಾರ್ಥಿನಿಯೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ಹೊಸೂರು ಮುಖ್ಯರಸ್ತೆಯಲ್ಲಿ ನಡೆದಿದೆ.ಮೃತರನ್ನು ಹೊಂಪಲಘಟ್ಟ ಗ್ರಾಮದ ನಿವಾಸಿ, 20 ವರ್ಷದ ಇಂಚರ ಎಂದು ಗುರುತಿಸಲಾಗಿದೆ.
ಅವರು ಬಿಸಿಎ ವ್ಯಾಸಂಗ ಮಾಡುತ್ತಿದ್ದರು. ಎಂದಿನಂತೆ ಕಾಲೇಜು ಮುಗಿಸಿಕೊಂಡು ಸ್ಕೂಟರ್ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಹೊಸೂರು ರಸ್ತೆಯ ಸವೇರಾ ಟೀ ಸ್ಟಾಲ್ ಬಳಿ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.
ಸ್ಕೂಟರ್ಗೆ ಹಿಂಬದಿಯಿಂದ ಸಿಮೆಂಟ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಂಚರ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅಪಘಾತಕ್ಕೆ ಲಾರಿ ಚಾಲಕನ ಅಜಾಗರೂಕತೆ ಕಾರಣ ಎಂದು ಪ್ರಾಥಮಿಕವಾಗಿ ಆರೋಪಿಸಲಾಗಿದೆ.
ಘಟನೆ ಕುರಿತು ಮಾಹಿತಿ ಪಡೆದ ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತದ ಕುರಿತು ತನಿಖೆ ಮುಂದುವರಿಸಿದ್ದಾರೆ. ಮೃತದೇಹವನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಿಂದ ಕುಟುಂಬಸ್ಥರು ಹಾಗೂ ಸ್ನೇಹಿತರಲ್ಲಿ ಆಘಾತ ಹಾಗೂ ದುಃಖದ ವಾತಾವರಣ ನಿರ್ಮಾಣವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R