ಕೆ.ಪಿ.ಎಸ್.ಸಿ ಮುಚ್ಚುವ ಮುಖ್ಯಮಂತ್ರಿ ಹೇಳಿಕೆಗೆ ಕುಮಾರಸ್ವಾಮಿ ತೀವ್ರ ಆಕ್ಷೇಪ
ಬೆಂಗಳೂರು, 23 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಕರ್ನಾಟಕ ಲೋಕಸೇವಾ ಆಯೋಗವನ್ನು ಶಾಸನಬದ್ಧವಾಗಿ ಮುಚ್ಚುವ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಪಿಎಸ್‌ಸಿ ಸಂಸ್ಥೆಯಲ್ಲಿ ಅಕ್ರಮಗಳು ನಡೆದಿವೆ ಎ
ಎಚ್.ಡಿ.ಕುಮಾರಸ್ವಾಮಿ ಸಂಗ್ರಹ ಚಿತ್ರ


ಬೆಂಗಳೂರು, 23 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಕರ್ನಾಟಕ ಲೋಕಸೇವಾ ಆಯೋಗವನ್ನು ಶಾಸನಬದ್ಧವಾಗಿ ಮುಚ್ಚುವ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೆಪಿಎಸ್‌ಸಿ ಸಂಸ್ಥೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಕಾರಣಕ್ಕೆ ಇಡೀ ಸಂಸ್ಥೆಯನ್ನೇ ಮುಚ್ಚುವ ಕುರಿತು ಚಿಂತನೆ ನಡೆಸುತ್ತಿರುವುದು ಸರಿಯಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಎಕ್ಸ್‌ನಲ್ಲಿ ಹೇಳಿದ್ದಾರೆ. ಕೆಪಿಎಸ್‌ಸಿ ಸಂಸ್ಥೆ ಉತ್ತಮವಾಗಿಯೇ ಇದ್ದು, ಅಲ್ಲಿ ತಪ್ಪು ವ್ಯಕ್ತಿಗಳು ಬಂದು ಕುಳಿತಿದ್ದಾರೆ. ಹೀಗಾಗಿ ತಪ್ಪಿತಸ್ಥರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕೇ ಹೊರತು ಸಂಸ್ಥೆಯನ್ನೇ ಮುಚ್ಚಬಾರದು ಎಂದು ಅವರು ಹೇಳಿದ್ದಾರೆ.

“ಕೆಪಿಎಸ್‌ಸಿ ಸಂಸ್ಥೆ ಚೆನ್ನಾಗಿಯೇ ಇದೆ, ಕೆಟ್ಟ ಜನ ಬಂದು ಕೂತಿದ್ದಾರಷ್ಟೇ. ಬೇಲಿಯೇ ಹೊಲ ಮೇಯುತ್ತಿದೆ. ಅಲ್ಲಿಗೆ ಖದೀಮರನ್ನು ನೇಮಕ ಮಾಡಿದ್ದು ಯಾರು? ವಸೂಲಿಗೆ ಅಂಗಡಿ ತೆರೆಯಲು ಅವಕಾಶ ಕೊಟ್ಟಿದ್ದು ಯಾರು? ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂತವರೇ ಎಸಗಿದ ಪಾಪವಲ್ಲವೇ ಇದು?” ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

“ಆ ಲೆಕ್ಕಕ್ಕೆ ಬಂದರೆ ವಿಧಾನಸೌಧವನ್ನೇ ಮುಚ್ಚಬೇಕು. ನಿಮ್ಮ ಸಾರಥ್ಯದಲ್ಲಿ ಅದೂ ನಡೆದುಹೋಗಲಿ” ಎಂದು ಮುಖ್ಯಮಂತ್ರಿ ಹೇಳಿಕೆಯನ್ನು ಅವರು ವ್ಯಂಗ್ಯವಾಡಿದ್ದಾರೆ.

ಕೆಪಿಎಸ್‌ಸಿ ಎಂದರೇನು, ಅದರ ಸಂರಚನೆ ಮತ್ತು ಸ್ವರೂಪ ಹೇಗಿದೆ, ಸಾಂವಿಧಾನಿಕವಾಗಿ ಅದಕ್ಕಿರುವ ರಕ್ಷಣೆ ಏನು ಹಾಗೂ ಆ ಸಂಸ್ಥೆ ನಡೆದುಬಂದ ಹಾದಿ ಮತ್ತು ಅದರ ಹೆಗ್ಗಳಿಕೆ ಏನು ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

“ಬೇಜವಾಬ್ದಾರಿಯಿಂದ ಚಪಲಕ್ಕೆ ನಾಲಿಗೆ ಜಾರುವ ಮೊದಲು ಕೆಪಿಎಸ್‌ಸಿ ಎಂದರೆ ಏನು ಎಂಬುದನ್ನು ತಿಳಿದುಕೊಳ್ಳಿ. ಹೊಲಕ್ಕೆ ಕಳೆ ಬಿದ್ದರೆ ಅದನ್ನು ಕಿತ್ತೆಸೆಯಬೇಕು, ಹೊಲಕ್ಕೇ ವಿಷವುಣಿಸುವ ಕೆಲಸ ಆಗಬಾರದು” ಎಂದು ಅವರು ಹೇಳಿದ್ದಾರೆ.

ಕೆಪಿಎಸ್‌ಸಿಯಲ್ಲಿ ಅಕ್ರಮಗಳ ಆರೋಪಗಳ ಹಿನ್ನೆಲೆಯಲ್ಲಿ ಸಂಸ್ಥೆಯನ್ನು ಮುಚ್ಚುವ ಕುರಿತು ಕಾನೂನು ಚೌಕಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೆ.22ರಂದು ಹೇಳಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande