
ಬೆಂಗಳೂರು, 23 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಬರಗಾಲದ ಹಿನ್ನೆಲೆಯಲ್ಲಿ ಕೊಪ್ಪಳ ಹಾಗೂ ಗಂಗಾವತಿ ಭಾಗದ ಸಾವಿರಾರು ಗೋಪಾಲಕರು ತಮ್ಮ ನೂರಾರು ಗೋವುಗಳ ಸಮೇತ ಹಾವೇರಿ ಜಿಲ್ಲೆಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ.
ಈ ಕುರಿತು ‘ಎಕ್ಸ್’ನಲ್ಲಿ ಹೇಳಿಕೆ ನೀಡಿರುವ ಅವರು, ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ರೈತರು ಮತ್ತು ಗೋಪಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಟೀಕಿಸಿದ್ದಾರೆ. ಬರದ ತೀವ್ರತೆಯಿಂದ ಕೆರೆ-ಕಟ್ಟೆಗಳು ಬತ್ತಿ ಹೋಗಿದ್ದು, ಕುಡಿಯಲು ನೀರಿಲ್ಲದೆ, ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ ಎಂದು ಹೇಳಿದ್ದಾರೆ.
‘ನಮಗೆ ಯಾವುದೇ ಪರಿಹಾರ ಬೇಡ, ನಮ್ಮ ಮೂಕ ಪ್ರಾಣಿಗಳಿಗೆ ನೀರು ಮತ್ತು ಮೇವು ಕೊಡಿ ಸಾಕು’ ಎಂದು ಗೋಪಾಲಕರು ಕಣ್ಣೀರಿಡುತ್ತಾ ಊರೂರು ಅಲೆಯುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಅವರ ಅಳಲು ಸರ್ಕಾರಕ್ಕೆ ಕೇಳಿಸುತ್ತಿಲ್ಲವೇ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.
ಬರಪೀಡಿತ ಪ್ರದೇಶಗಳಲ್ಲಿ ಗೋಶಾಲೆಗಳು ಎಲ್ಲಿವೆ, ಮೇವಿನ ಬ್ಯಾಂಕ್‌ಗಳು ಎಲ್ಲಿವೆ ಹಾಗೂ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆ ಎಲ್ಲಿದೆ ಎಂದು ಅಶೋಕ ಪ್ರಶ್ನಿಸಿದ್ದಾರೆ. ಮೂಕ ಪ್ರಾಣಿಗಳಿಗೆ ನೀರು ಮತ್ತು ಮೇವು ಒದಗಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಬರ ಪರಿಹಾರದ ಹೆಸರಿನಲ್ಲಿ ಸಭೆ, ಸಮೀಕ್ಷೆ ನಡೆಸುತ್ತಾ ಕಾಲಹರಣ ಮಾಡದೆ, ತಕ್ಷಣ ಬರಪೀಡಿತ ಪ್ರದೇಶಗಳಲ್ಲಿ ಗೋಶಾಲೆಗಳನ್ನು ತೆರೆದು ಅಗತ್ಯ ಪ್ರಮಾಣದಲ್ಲಿ ಉಚಿತ ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.