2027ರ ಬೆಂಗಳೂರು ಕ್ವಾಂಟಂ ಸಮಿಟ್ ಜಾಗತಿಕ ವೇದಿಕೆಯಾಗಿ ವಿಸ್ತರಣೆ: ಡಾ. ಅಜಯ್ ಧರ್ಮಸಿಂಗ್
ಬೆಂಗಳೂರು, 20 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:2027ರಲ್ಲಿ ನಡೆಯಲಿರುವ ಎರಡನೇ ‘ಕ್ವಾಂಟಂ ಇಂಡಿಯಾ ಬೆಂಗಳೂರು ಸಮಿಟ್‌’ ಅನ್ನು ಜಾಗತಿಕ ಮಟ್ಟದ ಪ್ರಮುಖ ಕ್ವಾಂಟಂ ವೇದಿಕೆಯಾಗಿ ರೂಪಿಸಲು ಕರ್ನಾಟಕ ಸರ್ಕಾರ ಉದ್ದೇಶಿಸಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರ್ಮಸ
ಕ್ಯೂನ್ಯೂ ಲ್ಯಾಬ್ಸ್ನ 10ನೇ ವಾರ್ಷಿಕೋತ್ಸವ ಹಾಗೂ ಕ್ಯೂಶೀಲ್ಡ್ 2.0 ಬಿಡುಗಡೆ ಕಾರ್ಯಕ್ರಮ


ಬೆಂಗಳೂರು, 20 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:2027ರಲ್ಲಿ ನಡೆಯಲಿರುವ ಎರಡನೇ ‘ಕ್ವಾಂಟಂ ಇಂಡಿಯಾ ಬೆಂಗಳೂರು ಸಮಿಟ್‌’ ಅನ್ನು ಜಾಗತಿಕ ಮಟ್ಟದ ಪ್ರಮುಖ ಕ್ವಾಂಟಂ ವೇದಿಕೆಯಾಗಿ ರೂಪಿಸಲು ಕರ್ನಾಟಕ ಸರ್ಕಾರ ಉದ್ದೇಶಿಸಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರ್ಮಸಿಂಗ್ ಹೇಳಿದರು.

ಬೆಂಗಳೂರಿನಲ್ಲಿ ನಡೆದ ಕ್ಯೂನ್ಯೂ ಲ್ಯಾಬ್ಸ್‌ನ 10ನೇ ವಾರ್ಷಿಕೋತ್ಸವ ಹಾಗೂ ಕ್ಯೂಶೀಲ್ಡ್‌ 2.0 ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ಸಮಾವೇಶದಲ್ಲಿ ಜಾಗತಿಕ ಸಂಶೋಧಕರು, ತಂತ್ರಜ್ಞಾನ ಕಂಪನಿಗಳು, ನವೋದ್ಯಮಗಳು, ಹೂಡಿಕೆದಾರರು ಮತ್ತು ನೀತಿನಿರ್ಧಾರಕರ ಹೆಚ್ಚಿನ ಪಾಲ್ಗೊಳ್ಳುವಿಕೆಗೆ ಒತ್ತು ನೀಡಲಾಗುವುದು ಎಂದರು.

“2027ರ ಸಮಿಟ್‌ ಕೇವಲ ಸಮ್ಮೇಳನವಾಗಿರಬಾರದು. ಸಂಶೋಧನೆ, ಉದ್ಯಮ, ನವೋದ್ಯಮಗಳು, ಹೂಡಿಕೆ ಮತ್ತು ಅಂತರರಾಷ್ಟ್ರೀಯ ಸಹಭಾಗಿತ್ವಗಳನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸುವ ಜಾಗತಿಕ ಕ್ವಾಂಟಂ ವೇದಿಕೆಯಾಗಬೇಕು” ಎಂದು ಹೇಳಿದರು.

ರಾಜ್ಯದ ಪ್ರಸ್ತಾವಿತ ಕ್ವಾಂಟಂ ಸಿಟಿ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕ್ಯೂನ್ಯೂ ಲ್ಯಾಬ್ಸ್‌ಗೆ ಸಚಿವರು ಆಹ್ವಾನ ನೀಡಿದರು. ಕ್ವಾಂಟಂ ಸಂಶೋಧನೆ, ಯಂತ್ರಾಂಶ, ನವೋದ್ಯಮಗಳು, ಪ್ರತಿಭೆ, ಉದ್ಯಮ ಮತ್ತು ವಾಣಿಜ್ಯೀಕರಣವನ್ನು ಒಂದೇ ವ್ಯವಸ್ಥೆಯಲ್ಲಿ ಒಗ್ಗೂಡಿಸುವುದು ಕ್ವಾಂಟಂ ಸಿಟಿಯ ಉದ್ದೇಶವಾಗಿದೆ ಎಂದರು.

“ಸಂಶೋಧನೆಯಿಂದ ನೈಜ ಬಳಕೆಯವರೆಗೆ ಸ್ವದೇಶಿ ಕ್ವಾಂಟಂ ತಂತ್ರಜ್ಞಾನವನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಕ್ಯೂನ್ಯೂ ಲ್ಯಾಬ್ಸ್ ತೋರಿಸಿದೆ. ಇಂತಹ ಸಂಸ್ಥೆಗಳು ಕರ್ನಾಟಕದ ಕ್ವಾಂಟಂ ಸಿಟಿ ನಿರ್ಮಾಣದಲ್ಲಿ ಪ್ರಮುಖ ಪಾಲುದಾರರಾಗಬೇಕು” ಎಂದು ಅವರು ಹೇಳಿದರು.

2035ರ ವೇಳೆಗೆ 20 ಬಿಲಿಯನ್ ಡಾಲರ್ ಆರ್ಥಿಕತೆಯ ಗುರಿ

2035ರ ವೇಳೆಗೆ 20 ಬಿಲಿಯನ್ ಡಾಲರ್ ಕ್ವಾಂಟಂ ಆರ್ಥಿಕತೆಯನ್ನು ನಿರ್ಮಿಸುವ ಗುರಿಯನ್ನು ಕರ್ನಾಟಕ ಹೊಂದಿದೆ. ಮೂಲಸೌಕರ್ಯ, ಮಾನವ ಸಂಪನ್ಮೂಲ, ನವೋದ್ಯಮಗಳು, ಸಂಶೋಧನೆ ಮತ್ತು ಜಾಗತಿಕ ಸಹಭಾಗಿತ್ವಕ್ಕೆ ಒತ್ತು ನೀಡುವ ₹1,000 ಕೋಟಿ ಕರ್ನಾಟಕ ಕ್ವಾಂಟಂ ಮಿಷನ್‌ ಮೂಲಕ ರಾಜ್ಯದ ಕ್ವಾಂಟಂ ಪರಿಸರ ವ್ಯವಸ್ಥೆಯನ್ನು ವಿಸ್ತರಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

“ಪೇಟೆಂಟ್‌ಗಳು, ಉತ್ಪನ್ನಗಳು, ಹೊಸ ಕಂಪನಿಗಳು, ನುರಿತ ಪ್ರತಿಭೆ, ಹೂಡಿಕೆ ಮತ್ತು ಜಾಗತಿಕ ಮಾರುಕಟ್ಟೆ ಅವಕಾಶಗಳು ನಮ್ಮ ಕ್ವಾಂಟಂ ಪ್ರಯತ್ನಗಳ ನಿಜವಾದ ಫಲಿತಾಂಶವಾಗಬೇಕು. ಕ್ವಾಂಟಂ ಆಲೋಚನೆಗಳು ಹುಟ್ಟುವ, ತಂತ್ರಜ್ಞಾನಗಳು ನಿರ್ಮಾಣವಾಗುವ ಮತ್ತು ಕಂಪನಿಗಳು ಜಾಗತಿಕ ಮಟ್ಟಕ್ಕೆ ಬೆಳೆಯುವ ಕೇಂದ್ರವಾಗಿ ಕರ್ನಾಟಕ ಹೊರಹೊಮ್ಮಬೇಕು” ಎಂದು ಅವರು ಹೇಳಿದರು.

ಕ್ಯೂನ್ಯೂ ಲ್ಯಾಬ್ಸ್ ಹತ್ತು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸಂಸ್ಥೆಯ ಸ್ಥಾಪಕರು, ವಿಜ್ಞಾನಿಗಳು, ಎಂಜಿನಿಯರ್‌ಗಳು ಹಾಗೂ ಸಿಬ್ಬಂದಿಯನ್ನು ಅಭಿನಂದಿಸಿದ ಡಾ. ಅಜಯ್ ಧರ್ಮಸಿಂಗ್, ಭಾರತೀಯ ತಂತ್ರಜ್ಞಾನಗಳನ್ನು ಜಾಗತಿಕ ಮಾರುಕಟ್ಟೆಗೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿರುವ ಸ್ವದೇಶಿ ಆಳತಂತ್ರಜ್ಞಾನ ಕಂಪನಿಗಳಿಗೆ ಕರ್ನಾಟಕ ಸರ್ಕಾರ ನಿರಂತರ ಪ್ರೋತ್ಸಾಹ ನೀಡಲಿದೆ ಎಂದರು.

ಕಾರ್ಯಕ್ರಮದಲ್ಲಿ ಕ್ಯೂನ್ಯೂ ಲ್ಯಾಬ್ಸ್ ಸಹ-ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುನಿಲ್ ಗುಪ್ತಾ ಹಾಗೂ ರಾಷ್ಟ್ರೀಯ ಕ್ವಾಂಟಂ ಮಿಷನ್‌ನ ಮಿಷನ್ ಗವರ್ನಿಂಗ್ ಬೋರ್ಡ್ ಅಧ್ಯಕ್ಷ ಡಾ. ಅಜೈ ಚೌಧರಿ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande