ಮಂಡ್ಯದಲ್ಲಿ ನೀರಿನ ಕೊರತೆ ನಡುವೆ ಕೃಷಿ ಚಟುವಟಿಕೆ ಚುರುಕು
ಕೃಷಿ ಚಟುವಟಿಕೆ ಗರಿಗೆದರಿಕೆ
mandya-agriculture-activities-resume-amid-water-shortage-fear


ಮಂಡ್ಯ, 02 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಜಿಲ್ಲೆಯಲ್ಲಿ ನೀರಿನ ಗಂಭೀರ ಆತಂಕ ಮತ್ತು ಸರ್ಕಾರದ ಎಚ್ಚರಿಕೆಗಳ ನಡುವೆಯೂ ರೈತರು ಭತ್ತದ ನಾಟಿ ಕಾರ್ಯಕ್ಕೆ ಸಿದ್ಧತೆಗಳನ್ನು ಆರಂಭಿಸಿದ್ದಾರೆ. ತಮಿಳುನಾಡಿಗೆ ನೀರು ಹರಿಸುವ ಸಲುವಾಗಿ ನಾಲೆಗಳಿಗೆ ನೀರು ಬಿಟ್ಟಿರುವುದನ್ನು ಸದುಪಯೋಗಪಡಿಸಿಕೊಳ್ಳಲು ಮುಂದಾಗಿರುವ ರೈತರು, ಮಳೆ ಹಾಗೂ ಜಲಾಶಯ ಭರ್ತಿಯಾಗುವ ಭರವಸೆಯಲ್ಲಿ ಜಮೀನು ಹದಗೊಳಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.

ಕಾವೇರಿ ನೀರು ನಿರ್ವಹಣೆ ಹಾಗೂ ಮುಂಗಾರು ಹಂಗಾಮಿನ ಹಿನ್ನೆಲೆಯಲ್ಲಿ, ಈ ಬಾರಿ ಜಿಲ್ಲೆಯ ರೈತರು ಯಾವುದೇ ಹೊಸ ಬೆಳೆಗಳನ್ನು ಬೆಳೆಯದಂತೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅಲ್ಲದೆ, ನಾಲೆಗಳಿಗೆ ನಿರಂತರ ನೀರು ಹರಿಸದೆ 'ಕಟ್ಟು ಪದ್ಧತಿ'ಯ (ಆವರ್ತಕ ನೀರು) ಮೂಲಕ ಮಾತ್ರ ನೀರು ಪೂರೈಸಲಾಗುತ್ತಿದೆ.

ಈ ಕುರಿತು ಅಳಲು ತೋಡಿಕೊಂಡಿರುವ ಸ್ಥಳೀಯ ರೈತರು, ನಾಲೆಗಳಿಗೆ ನೀರು ಬಿಟ್ಟಿರುವುದು ಖುಷಿಯ ಸಂಗತಿಯಾದರೂ, ಕಟ್ಟು ಪದ್ಧತಿಯ ನೀರನ್ನು ನಂಬಿ ಪೂರ್ಣ ಪ್ರಮಾಣದಲ್ಲಿ ಬೆಳೆ ಬೆಳೆಯಲು ಸಾಧ್ಯವಿಲ್ಲ. ಅಧಿಕಾರಿಗಳು ಯಾವ ಸಮಯದಲ್ಲಿ ನೀರು ನಿಲ್ಲಿಸುತ್ತಾರೋ ಎಂಬ ನಿರಂತರ ಭಯದಲ್ಲೇ ಬದುಕಬೇಕಿದೆ. ಸರ್ಕಾರ ಕಟ್ಟು ಪದ್ಧತಿಯನ್ನು ಕೈಬಿಟ್ಟು ನಿರಂತರವಾಗಿ ನೀರು ಹರಿಸಿದರೆ ಮಾತ್ರ ರೈತರು ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಒತ್ತಾಯಿಸಿದ್ದಾರೆ.

ಇದೇ ವೇಳೆ ಸರ್ಕಾರದ ಧೋರಣೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರೈತರು, ನಾಲೆಗಳ ಹೆಸರಿನಲ್ಲಿ ತಮಿಳುನಾಡಿಗೆ ಮಾತ್ರ ನಿರಂತರವಾಗಿ ನೀರು ಹರಿಸಲಾಗುತ್ತಿದೆ. ಆದರೆ ಇಲ್ಲಿಯವರೆಗೆ ಬರ ಪರಿಹಾರವನ್ನೂ ನೀಡಿಲ್ಲ ಹಾಗೂ ನಂಬಿ ಬದುಕು ಕಟ್ಟಿಕೊಳ್ಳಲು ಸಮರ್ಪಕವಾಗಿ ನೀರನ್ನೂ ಬಿಡುತ್ತಿಲ್ಲ ಎಂದು ದೂರಿದ್ದಾರೆ. ಕೂಡಲೇ ಸರ್ಕಾರ ರಾಜಕೀಯ ಬದಿಗಿಟ್ಟು, ಸಂಕಷ್ಟದಲ್ಲಿರುವ ರೈತರನ್ನು ರಕ್ಷಿಸುವ ನಿಟ್ಟಿನಲ್ಲಿ ಶಾಶ್ವತ ಹಾಗೂ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande