
ಬೆಂಗಳೂರು, 02 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:
ಕಾಂಗ್ರೆಸ್ ಹಿರಿಯರ ಗುಂಡಾಗಿರಿ ಚಾಳಿ ಯುವ ಕಾಂಗ್ರೆಸ್ ಕಾರ್ಯಕರ್ತರಿಗೂ ಅಂಟಿಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ನ್ಯಾಯಕ್ಕಾಗಿ ಬಿಜೆಪಿ ನಡೆಸಿದ ಹೋರಾಟವನ್ನು ಗುಂಡಾಗಿರಿಗೆ ಹೋಲಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇದೀಗ ತಮ್ಮ ಪಕ್ಷದವರ ವರ್ತನೆಯತ್ತ ಕಣ್ಣುಹಾಯಿಸಬೇಕು ಎಂದು ಟೀಕಿಸಿದ್ದಾರೆ.
ಉನ್ನತ ಹುದ್ದೆಯಲ್ಲಿರುವ ಐಪಿಎಸ್ ಅಧಿಕಾರಿಯೊಂದಿಗೆ ಯುವ ಕಾಂಗ್ರೆಸ್ ಅಧ್ಯಕ್ಷರು ದುಂಡಾವರ್ತನೆ ತೋರಿದ್ದಾರೆ. ಸಂವಿಧಾನ ಮತ್ತು ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ವಿಚಾರದಲ್ಲಿ ಯಾವಾಗ ಕ್ರಮ ಕೈಗೊಳ್ಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಡಿಸಿಪಿ ಜತೆ ದುಂಡಾವರ್ತನೆ ತೋರಿದ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಇದೇ ಚಾಳಿ ರಾಜ್ಯಾದ್ಯಂತ ವಿಸ್ತರಿಸಲಿದೆ ಎಂದು ವಿಜಯೇಂದ್ರ ಎಚ್ಚರಿಸಿದ್ದಾರೆ.
‘ನಮ್ಮದೇ ಸರ್ಕಾರ, ನಾವು ಏನು ಮಾಡಿದರೂ ನಡೆಯುತ್ತದೆ’ ಎಂಬ ಧೈರ್ಯ ಕಾಂಗ್ರೆಸ್ ಕಾರ್ಯಕರ್ತರಲ್ಲಿದೆ. ಅವರಿಗೆ ಸರ್ಕಾರ ಹಾಗೂ ಶಿಕ್ಷೆಯ ಭಯವಿಲ್ಲ. ಪಕ್ಷದ ಕಚೇರಿಗೆ ಮುತ್ತಿಗೆ ಹಾಕಿ, ಅನಧಿಕೃತವಾಗಿ ಒಳನುಗ್ಗಲು ಯತ್ನಿಸಿದವರ ವಿರುದ್ಧ ರಾಜಾತಿಥ್ಯ ನೀಡದೆ ಕಾನೂನು ಕ್ರಮ ಕೈಗೊಳ್ಳಬೇಕು. ಕಾನೂನು ಎಲ್ಲರಿಗೂ ಒಂದೇ ಎಂದು ಅವರು ಹೇಳಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.