
ಬೀದರ್, 02 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಸರ್ಕಾರದ ಸ್ಪಷ್ಟ ನಿರ್ದೇಶನವಿದ್ದರೂ, ಜಿಲ್ಲೆಯ ರೈತರ ಜೀವನಾಡಿಯಾಗಿರುವ ಹುಮನಾಬಾದ್ ತಾಲೂಕಿನ ಹಳ್ಳಿಖೇಡ್ (ಬಿ)ಯಲ್ಲಿರುವ ಬಿಎಸ್ಎಸ್ಕೆ ಸಕ್ಕರೆ ಕಾರ್ಖಾನೆಯ ಚರ ಹಾಗೂ ಸ್ಥಿರಾಸ್ತಿಗಳ ಹರಾಜು ಪ್ರಕ್ರಿಯೆ ಇಂದು (ಸೆಪ್ಟೆಂಬರ್ 2) ಮಧ್ಯಾಹ್ನ ಸುಮಾರು 2 ಗಂಟೆಗೆ ನಡೆಯುವ ಸಾಧ್ಯತೆಯಿದೆ. ಹರಾಜು ಪ್ರಕ್ರಿಯೆಗೆ ತಡೆ ನೀಡುವಂತೆ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿಗಳು ಡಿಸಿಸಿ ಬ್ಯಾಂಕ್ಗೆ ನಿರ್ದೇಶನ ನೀಡಿದ್ದರೂ, ಬ್ಯಾಂಕ್ ಆಡಳಿತ ಮಂಡಳಿ ಹರಾಜಿಗೆ ಮುಂದಾಗಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.
ಸಾಲದ ಸುಳಿಯಲ್ಲಿ ಬಿಎಸ್ಎಸ್ಕೆ ಕಾರ್ಖಾನೆ:
1963ರಲ್ಲಿ ಆರಂಭಗೊಂಡ ಬಿಎಸ್ಎಸ್ಕೆ ಸಕ್ಕರೆ ಕಾರ್ಖಾನೆ ಬೀದರ್ ಜಿಲ್ಲೆಯ ಮೊದಲ ಸಕ್ಕರೆ ಕಾರ್ಖಾನೆಗಳಲ್ಲಿ ಒಂದಾಗಿದೆ. ಸುಮಾರು 24 ಸಾವಿರಕ್ಕೂ ಅಧಿಕ ರೈತರು ಷೇರುದಾರರಾಗಿರುವ ಈ ಕಾರ್ಖಾನೆ, ಸಾವಿರಾರು ರೈತ ಕುಟುಂಬಗಳ ಬದುಕಿನೊಂದಿಗೆ ನೇರವಾಗಿ ಬೆಸೆದುಕೊಂಡಿದೆ. ಆದರೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಕಾರ್ಖಾನೆ ಸಂಪೂರ್ಣ ಬಂದ್ ಆಗಿದ್ದು, ಕಬ್ಬು ನುರಿಸುವ ಯಂತ್ರೋಪಕರಣಗಳು ತುಕ್ಕು ಹಿಡಿದು ಹಾಳಾಗುತ್ತಿವೆ.
ಕಾರ್ಖಾನೆಯ ಮೇಲಿನ ಒಟ್ಟು ಸಾಲದ ವಿವರಗಳು ಇಂತಿವೆ:ಡಿಸಿಸಿ ಬ್ಯಾಂಕ್ ಸಾಲ: ಸುಮಾರು 115 ಕೋಟಿ ರೂ. ಅಸಲು ಮತ್ತು ಬಡ್ಡಿ ಸೇರಿ ಬಾಕಿ ಮೊತ್ತ ಈಗ 230 ಕೋಟಿ ರೂ. ಗೂ ಅಧಿಕವಾಗಿದೆ (ಸಾಲ ಪಡೆಯುವಾಗ 143 ಎಕರೆ ಭೂಮಿಯನ್ನು ಭದ್ರತೆಯಾಗಿಡಲಾಗಿತ್ತು).ಇತರ ಬ್ಯಾಂಕ್ ಸಾಲಗಳು: ಅಪೆಕ್ಸ್ ಬ್ಯಾಂಕ್ಗೆ ಸುಮಾರು 110 ಕೋಟಿ ರೂ. ಹಾಗೂ ಎಸ್ಬಿಐಗೆ ಸುಮಾರು 13 ಕೋಟಿ ರೂ. ಬಾಕಿ ಇದೆ.
ಒಟ್ಟು ಸಾಲದ ಹೊರೆ: ಕಾರ್ಖಾನೆಯ ಮೇಲೆ ಒಟ್ಟು 350 ಕೋಟಿ ರೂಪಾಯಿಗೂ ಅಧಿಕ ಸಾಲದ ಅಂದಾಜು ಪಟ್ಟಿಯಿದೆ.
ಸರ್ಕಾರದ ಆದೇಶ ನಿರ್ಲಕ್ಷ್ಯ?ಕಳೆದ ಜುಲೈ 28ರಂದೇ ಸರ್ಕಾರದ ವತಿಯಿಂದ ಪತ್ರದ ಮೂಲಕ ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಹರಾಜು ಪ್ರಕ್ರಿಯೆಗೆ ತಡೆ ನೀಡುವಂತೆ ಸೂಚನೆ ನೀಡಲಾಗಿತ್ತು ಎನ್ನಲಾಗಿದೆ. ಸರ್ಕಾರದ ಸೂಚನೆಗೆ ಕಿಮ್ಮತ್ತು ನೀಡದ ಬ್ಯಾಂಕ್ ಆಡಳಿತ ಮಂಡಳಿಯು, ಸಾಲ ವಸೂಲಿಗಾಗಿ ಅನ್ನದಾತರ ಹಿತಾಸಕ್ತಿ ಕಡೆಗಣಿಸಿ ಹರಾಜಿಗೆ ಹೆಜ್ಜೆ ಇಟ್ಟಿದೆ ಎಂಬ ಆರೋಪ ಕೇಳಿಬಂದಿದೆ.
ಹರಾಜು ಪ್ರಕ್ರಿಯೆ ಹಿನ್ನೆಲೆಯಲ್ಲಿ ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಲು, ಬೀದರ್ ನಗರದ ಬಸವೇಶ್ವರ ವೃತ್ತದ ಸಮೀಪವಿರುವ ಡಿಸಿಸಿ ಬ್ಯಾಂಕ್ ಮುಖ್ಯ ಕಚೇರಿಯ ಸುತ್ತಮುತ್ತ ಪೊಲೀಸ್ ಸಿಬ್ಬಂದಿ ನಿಯೋಜಿಸುವಂತೆ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ. ಇದು ಈ ಹರಾಜಿನ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಈ ಹಿಂದೆ 2023ರಲ್ಲಿ ಕಾರ್ಖಾನೆಯನ್ನು ಲೀಸ್ಗೆ ನೀಡಲು ನಡೆಸಿದ ಪ್ರಯತ್ನಗಳು ವಿಫಲವಾಗಿದ್ದವು. ಈಗ ಸರ್ಕಾರದ ನಿರ್ದೇಶನವಿದ್ದರೂ ಹರಾಜು ನಡೆಯುತ್ತದೆಯೇ, ಸರ್ಕಾರದ ಸೂಚನೆಗಿಂತ ಬ್ಯಾಂಕ್ ಆಡಳಿತ ಮಂಡಳಿಯ ನಿರ್ಧಾರವೇ ದೊಡ್ಡದಾ, ಮತ್ತು 24 ಸಾವಿರ ರೈತ ಷೇರುದಾರರ ಭವಿಷ್ಯವೇನು ಎಂಬ ಪ್ರಶ್ನೆಗಳು ಬೀದರ್ ಜಿಲ್ಲೆಯ ರೈತರು ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಹಾಗೂ ಚರ್ಚೆಗೆ ಗ್ರಾಸವಾಗಿವೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R