ದಾಳಿಂಬೆ ಬೆಲೆ ಕುಸಿತ: ಕೇಂದ್ರದ ಮಧ್ಯಪ್ರವೇಶಕ್ಕೆ ಡಿ.ಕೆ. ಸುಧಾಕರ್ ಒತ್ತಾಯ
ಚಿಕ್ಕಬಳ್ಳಾಪುರ, 02 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್: ಜಿಲ್ಲೆಯಲ್ಲಿ ದಾಳಿಂಬೆ ಬೆಲೆ ತೀವ್ರವಾಗಿ ಕುಸಿದಿರುವುದರಿಂದ ಸಂಕಷ್ಟಕ್ಕೆ ಸಿಲುಕಿರುವ ಬೆಳೆಗಾರರ ನೆರವಿಗೆ ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಚಿಕ್ಕಬಳ್ಳಾಪುರ ಸಂಸದ ಡಿ.ಕೆ. ಸುಧಾಕರ್ ಒತ್ತಾಯಿಸಿದ್ದಾರೆ. ಈ ಕುರಿತು ಕೇಂದ್ರ
ಸುಧಾಕರ ಬರೆದ ಪತ್ರ


ಚಿಕ್ಕಬಳ್ಳಾಪುರ, 02 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:

ಜಿಲ್ಲೆಯಲ್ಲಿ ದಾಳಿಂಬೆ ಬೆಲೆ ತೀವ್ರವಾಗಿ ಕುಸಿದಿರುವುದರಿಂದ ಸಂಕಷ್ಟಕ್ಕೆ ಸಿಲುಕಿರುವ ಬೆಳೆಗಾರರ ನೆರವಿಗೆ ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಚಿಕ್ಕಬಳ್ಳಾಪುರ ಸಂಸದ ಡಿ.ಕೆ. ಸುಧಾಕರ್ ಒತ್ತಾಯಿಸಿದ್ದಾರೆ.

ಈ ಕುರಿತು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು ಸಮಸ್ಯೆಯನ್ನು ಗಮನಕ್ಕೆ ತಂದಿರುವುದಾಗಿ ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಸುಮಾರು 2,500 ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗುತ್ತಿದ್ದು, ಈ ಬಾರಿ ಉತ್ತಮ ಗುಣಮಟ್ಟದ ಫಸಲು ಬಂದಿದ್ದರೂ ಮಾರುಕಟ್ಟೆ ಬೆಲೆ ಕುಸಿತದಿಂದ ರೈತರ ಆದಾಯಕ್ಕೆ ಹೊಡೆತ ಬಿದ್ದಿದೆ ಎಂದಿದ್ದಾರೆ.

ಕಳೆದ ವರ್ಷ ಕೆ.ಜಿ.ಗೆ ಸುಮಾರು ₹180 ಇದ್ದ ದಾಳಿಂಬೆ ಬೆಲೆ ಈ ವರ್ಷ ₹100ರಿಂದ ₹120ಕ್ಕೆ ಕುಸಿದಿದೆ. ಕಡಿಮೆ ಗುಣಮಟ್ಟದ ಹಣ್ಣು ಕೆ.ಜಿ.ಗೆ ಕೇವಲ ₹60ರಷ್ಟಕ್ಕೆ ಮಾರಾಟವಾಗುತ್ತಿದೆ. ರಸಗೊಬ್ಬರ, ನೀರಾವರಿ, ಕಾರ್ಮಿಕರು ಹಾಗೂ ತೋಟ ನಿರ್ವಹಣೆ ವೆಚ್ಚ ಹೆಚ್ಚಿರುವ ಹಿನ್ನೆಲೆಯಲ್ಲಿ ರೈತರು ನಷ್ಟ ಅನುಭವಿಸುವಂತಾಗಿದೆ ಎಂದು ಹೇಳಿದ್ದಾರೆ.

ದಾಳಿಂಬೆ ಶೀಘ್ರ ಹಾಳಾಗುವ ಬೆಳೆಯಾಗಿರುವುದರಿಂದ ಬೆಲೆ ಏರಿಕೆಯಾಗುವವರೆಗೆ ಉತ್ಪನ್ನವನ್ನು ಸಂಗ್ರಹಿಸಿಡಲು ರೈತರಿಗೆ ಸಾಧ್ಯವಿಲ್ಲ. ಹೀಗಾಗಿ ತಕ್ಷಣ ಮಾರುಕಟ್ಟೆ ಮಧ್ಯಪ್ರವೇಶ ಅಗತ್ಯವಿದೆ ಎಂದು ಸುಧಾಕರ್ ತಿಳಿಸಿದ್ದಾರೆ.

ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಸೂಕ್ತ ಕ್ರಮ ಕೈಗೊಳ್ಳುವುದು, ಪ್ರಮುಖ ಮಾರುಕಟ್ಟೆ ಹಾಗೂ ಸಂಸ್ಕರಣಾ ಘಟಕಗಳೊಂದಿಗೆ ಉತ್ತಮ ಸಂಪರ್ಕ ಕಲ್ಪಿಸುವುದು, ಕೊಯ್ಲೋತ್ತರ ಮೂಲಸೌಕರ್ಯ, ಶೀತಲ ಸರಪಳಿ, ಸಂಗ್ರಹಣಾ ವ್ಯವಸ್ಥೆ ಹಾಗೂ ರಫ್ತು ಉತ್ತೇಜನಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರದ ದಾಳಿಂಬೆ ಬೆಳೆಗಾರರ ಶ್ರಮಕ್ಕೆ ನ್ಯಾಯಯುತ ಹಾಗೂ ಲಾಭದಾಯಕ ಬೆಲೆ ದೊರೆಯುವಂತೆ ಮಾಡಲು ನಿರಂತರವಾಗಿ ಪ್ರಯತ್ನಿಸುವುದಾಗಿ ಸಂಸದ ಡಿ.ಕೆ. ಸುಧಾಕರ್ ಹೇಳಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande