
ಬೆಂಗಳೂರು, 02 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳದಲ್ಲಿ ಬಿಜೆಪಿ–ಆರ್‌ಎಸ್‌ಎಸ್ ಕಾರ್ಯಕರ್ತರು ನಡೆಸಿದ್ದಾರೆ ಎನ್ನಲಾದ ‘ಶುದ್ಧೀಕರಣ’ ಕಾರ್ಯಕ್ರಮವನ್ನು ಖಂಡಿಸಿ, ಲೋಕಸಭೆ ಪ್ರತಿ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ಇಂಧನ ಸಚಿವ ಕೆ.ಜೆ. ಜಾರ್ಜ್ ತೀವ್ರವಾಗಿ ವಿರೋಧಿಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕೆಪಿಸಿಸಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಖರ್ಗೆ ಅವರು ಸಂವಿಧಾನದ ಮೌಲ್ಯಗಳು ಹಾಗೂ ಸಮಾನತೆಯನ್ನು ರಕ್ಷಿಸುವ ಕುರಿತು ಮಾತನಾಡಿದ ಸ್ಥಳದಲ್ಲೇ ಜಾತಿ ತಾರತಮ್ಯವನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಶುದ್ಧೀಕರಣ ನಡೆಸಿರುವುದು ಖಂಡನೀಯ ಎಂದರು.
ತಾರತಮ್ಯದ ವಿರುದ್ಧ ಧ್ವನಿ ಎತ್ತಿದ ರಾಹುಲ್ ಗಾಂಧಿ ವಿರುದ್ಧವೇ ಪ್ರಕರಣ ದಾಖಲಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದೆ. ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯವನ್ನು ಪ್ರಶ್ನಿಸುವವರನ್ನು ಮೌನಗೊಳಿಸುವ ಬದಲು, ಇಂತಹ ಕೃತ್ಯಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಹುಲ್ ಗಾಂಧಿ ವಿರುದ್ಧ ದಾಖಲಿಸಿರುವ ಎಫ್‌ಐಆರ್ ಅನ್ನು ಕೂಡಲೇ ಹಿಂಪಡೆಯಬೇಕು ಹಾಗೂ ಹಲ್ದ್ವಾನಿ ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೆ.ಜೆ. ಜಾರ್ಜ್ ಒತ್ತಾಯಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.