
ಕೋಲಾರ, ಸೆಪ್ಟೆಂಬರ್ ೧೯ (ಹಿ.ಸ)
ಆ್ಯಂಕರ್ : ಶಾಸಕ ಬಾಲಕೃಷ್ಣ ಅವರಿಗೆ ಸಚಿವ ಸ್ಥಾನ ಕಾಂಟ್ರಾಕ್ಟ್ ರೂಪದಲ್ಲಿ ಸಿಕ್ಕಿದೆ. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಮತ್ತು ಕುಮಾರಸ್ವಾಮಿ ಅವರನ್ನು ಅತಿಯಾಗಿ ನಿಂದಿಸಿದ್ದಕ್ಕಾಗಿಯೇ ಅವರಿಗೆ ಕಾಂಟ್ರಾಕ್ಟ್ ರೂಪದಲ್ಲಿ ಸಚಿವ ಸ್ಥಾನ ನೀಡಲಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಗುಡುಗಿದರು.
ಮಾಲೂರಿನ ವೈಟ್ ಗಾರ್ಡನ್ ನಲ್ಲಿ ಆಯೋಜಿಸಿದ್ದ ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಂಡು ಮಾಧ್ಯಮಗಳ ಜೊತೆ ಮಾತನಾಡಿದರು.
ಸಚಿವ ಸ್ಥಾನ ಸಿಕ್ಕಾಗ ಜನಸೇವೆ ಮಾಡುವುದನ್ನು ಬಿಟ್ಟು ಪ್ರತಿದಿನ ದೇವೇಗೌಡರ ಕುಟುಂಬದ ವಿರುದ್ಧ ಮಾತನಾಡುತ್ತಿದ್ದಾರೆ. ಇಂದಿನ ಯುವ ಪೀಳಿಗೆ ಹಾಗೂ ಜನತೆ ಇದನ್ನು ಒಪ್ಪುವುದಿಲ್ಲ. ಕೇವಲ ರಾಜಕೀಯ ನಿಂದನೆ ಬಿಟ್ಟು ಕೆಲಸ ಮತ್ತು ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚೆ ಮಾಡಲಿ ಎಂದು ಸಚಿವರ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು .
ನೈಸ್ ಯೋಜನೆಯಲ್ಲಿ ಭಾರೀ ಅಕ್ರಮ ನಡೆದಿದೆ, ನೈಸ್ ಸಂಸ್ಥೆಯವರು ನೂರಾರು ಕೋಟಿ ರೂಪಾಯಿ ಹಣ ಗಳಿಸಿದ್ದಾರೆ. ಈ ಬಗ್ಗೆ ವಿವರಗಳನ್ನು ಸದ್ಯದಲ್ಲೇ ಬಹಿರಂಗ ಮಾಡುತ್ತೇನೆ. ನೈಸ್ ವಿಚಾರದಲ್ಲಿ ನಾನು ಇಲ್ಲಿ ಹೆಚ್ಚು ಮಾತನಾಡುವುದಿಲ್ಲ, ಮುಂದೆ ಹೋಗುತ್ತಾ ಹೋಗುತ್ತಾ ನಿಮಗೆಲ್ಲ ಗೊತ್ತಾಗುತ್ತದೆ. ಇನ್ನೊಂದು ವಾರದಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ. ನೈಸ್ ಯೋಜನೆಯಿಂದಾಗಿ ನಮ್ಮ ಭಾಗದ ರೈತರಿಗೆ ದೊಡ್ಡ ಮಟ್ಟದ ಅನ್ಯಾಯವಾಗಿದೆ. ರೈತರಿಗೆ ನ್ಯಾಯ ಕೊಡಿಸಲು ಮುಂದೆಯೂ ನಿರಂತರ ಹೋರಾಟ ನಡೆಯಲಿದೆ.
ಕೇಂದ್ರ ಸಚಿವ ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಟೆಸ್ಟಿಂಗ್ ಯೂನಿಟ್ ತರಲು ಈಗಾಗಲೇ ತೀರ್ಮಾನ ಮಾಡಿದ್ದಾರೆ ಮತ್ತು ಅದಕ್ಕೆ ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ. ಅವರಿಗೆ ಲಭ್ಯವಿರುವ ಭೂಮಿಯಲ್ಲಿ ಟೆಸ್ಟಿಂಗ್ ಯೂನಿಟ್ ಹಾಕಿ ಕೈಗಾರಿಕಾ ಅಭಿವೃದ್ಧಿ ಮಾಡಲು ಅವಕಾಶವಿದೆ. ಕುಮಾರಣ್ಣನಿಗೆ ಒಳ್ಳೆಯ ಹೆಸರು ಬಂದುಬಿಡುತ್ತದೆ ಎಂದು ರಾಜ್ಯ ಸರ್ಕಾರ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ. ಇಂತಹ ವಿಷಯಗಳಲ್ಲಿ ರಾಜಕೀಯ ಮಾಡಬೇಡಿ, ರಾಜ್ಯದ ಜನರ ಏಳಿಗೆಗಾಗಿ, ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ಯುವಕರಿಗೆ ಭವಿಷ್ಯವನ್ನು ಕಟ್ಟಿಕೊಡಿ.
ಹಬ್ಬ-ಆಚರಣೆಗಳನ್ನು ಜನ ಮುಕ್ತವಾಗಿ ೧-೨ ದಿನ ಆಚರಿಸಲು ಸರ್ಕಾರ ಅವಕಾಶ ಮಾಡಿಕೊಡಬೇಕು. ಕಾನೂನಿನ ಚೌಕಟ್ಟಿನಲ್ಲಿ ಯಾವುದೇ ಗೊಂದಲ, ಸಮಸ್ಯೆ ಆಗದಂತೆ ಸರ್ಕಾರ ನಡೆದುಕೊಳ್ಳಬೇಕು. ಯಾವುದೋ ಒಂದು ಸಮುದಾಯ ಅಥವಾ ಧರ್ಮವನ್ನು ಓಲೈಕೆ ಮಾಡುವುದನ್ನು ಬಿಟ್ಟು ಸರ್ವ ಜನಾಂಗದ ಜೊತೆ ಸರ್ಕಾರ ನ್ಯಾಯಯುತವಾಗಿ ನಡೆದುಕೊಳ್ಳಬೇಕು. ಪ್ರಸ್ತುತ ಸರ್ಕಾರ ಅದನ್ನು ಪಾಲಿಸುತ್ತಿಲ್ಲ.
ಇಡೀ ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದೆ. ಆದರೆ ರೈತರ ಬಗ್ಗೆ ರಾಜ್ಯ ಸರ್ಕಾರಕ್ಕೆ ಸ್ವಲ್ಪವಾದರೂ ಕಾಳಜಿ, ಚಿಂತನೆ ಮತ್ತು ಬದ್ಧತೆ ಇಲ್ಲ. ನಾನು ಕೂಡ ಉತ್ತರ ಕರ್ನಾಟಕ ಭಾಗಕ್ಕೆ ಪ್ರವಾಸ ಮಾಡಿ ಬಂದಿದ್ದೇನೆ. ಸೂಕ್ತ ಸಮಯಕ್ಕೆ ಮಳೆಯಾಗದ ಕಾರಣ ಮಳೆಯನ್ನೇ ನೆಚ್ಚಿಕೊಂಡು ಬೆಳೆ ಬೆಳೆದಿದ್ದ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಸರ್ಕಾರ ಕೇವಲ ೧೦೨ ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿದೆ. ಆದರೆ ಬರ ಪರಿಸ್ಥಿತಿ ೧೦೨ ತಾಲೂಕುಗಳಿಗೆ ಮಾತ್ರ ಸೀಮಿತವಾಗಿಲ್ಲ. ರಾಜ್ಯದ ಎಲ್ಲಾ ೨೩೬ ತಾಲೂಕುಗಳನ್ನೂ ಬರಪೀಡಿತ ಎಂದು ಘೋಷಣೆ ಮಾಡಬೇಕು ಮತ್ತು ರೈತರ ಆತ್ಮಹತ್ಯೆ ತಡೆಗಟ್ಟಲು ಕೂಡಲೇ ಸಾಲಮನ್ನಾ ಮಾಡಬೇಕು.
ಜೆಡಿಎಸ್ ಮುಖಂಡ ಹೂಡಿ ವಿಜಯ್ ಕುಮಾರ್ ಅವರ ಆಯೋಜನೆಯಲ್ಲಿ ನಡೆದ ಈ ಸಭೆಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಆಗಮಿಸಿದರು. ಈ ವೇಳೆ ಜೆಡಿಎಸ್ ನಾಯಕರು ಹಾಗೂ ನೂರಾರು ಕಾರ್ಯಕರ್ತರು ನಿಖಿಲ್ ಕುಮಾರಸ್ವಾಮಿ ಅವರಿಗೆ ಭರ್ಜರಿ ಸ್ವಾಗತ ಕೋರಿದರು. ಸುಮಾರು ಅರ್ಧ ಕಿಲೋಮೀಟರ್ ವರೆಗೂ ಪಟಾಕಿ ಸಿಡಿಸಿ, ಹೂಮಳೆಗರೆದು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.
ಸಭೆಯಲ್ಲಿ ಕೋರ್ ಕಮಿಟಿ ಅಧ್ಯಕ್ಷರಾದ ಜೆ. ಕೆ ಕೃಷ್ಣಾರೆಡ್ಡಿ ಅವರು, ಸಂಸದ ಮಲ್ಲೇಶ್ ಬಾಬು ಅವರು, ಹೂಡಿ ವಿಜಯ್ ಕುಮಾರ್ ಅವರು, ಶ್ರೀ ರಮೇಗೌಡ ಅವರು ಸೇರಿದಂತೆ ಕೋರ್ ಕಮಿಟಿ ಸದಸ್ಯರು ಸೇರಿದಂತೆ ಜಿಲ್ಲೆಯ ಪ್ರಮುಖ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್