ನವನಗರ ಯೂನಿಟ್ 1 ಮತ್ತು 2ರ ಸಂತ್ರಸ್ತರಿಗೆ ಹಕ್ಕುಪತ್ರ, ಈ-ಖಾತಾ ಉತಾರೆ ವಿತರಣೆ
ಬಾಗಲಕೋಟೆ, 19 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ಬಾಗಲಕೋಟೆಯ ನವನಗರದ ಯೂನಿಟ್ 1 ಮತ್ತು 2ರಲ್ಲಿ ವಾಸಿಸುತ್ತಿರುವ ಮುಳುಗಡೆ ಸಂತ್ರಸ್ತರ ಬಹುದಿನಗಳ ಬೇಡಿಕೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ (ಬಿ.ಟಿ.ಡಿ.ಎ) ವತಿಯಿಂದ ಹಕ್ಕುಪತ್ರ ಹಾಗೂ ಈ-ಖಾತಾ ಉತಾರೆಗಳನ್ನು ವ
ಹಕ್ಕು ಪತ್ರ ವಿತರಣೆ


ಬಾಗಲಕೋಟೆ, 19 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ಬಾಗಲಕೋಟೆಯ ನವನಗರದ ಯೂನಿಟ್ 1 ಮತ್ತು 2ರಲ್ಲಿ ವಾಸಿಸುತ್ತಿರುವ ಮುಳುಗಡೆ ಸಂತ್ರಸ್ತರ ಬಹುದಿನಗಳ ಬೇಡಿಕೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ (ಬಿ.ಟಿ.ಡಿ.ಎ) ವತಿಯಿಂದ ಹಕ್ಕುಪತ್ರ ಹಾಗೂ ಈ-ಖಾತಾ ಉತಾರೆಗಳನ್ನು ವಿತರಿಸಲಾಯಿತು.

ಬಿ.ಟಿ.ಡಿ.ಎ ಅಧ್ಯಕ್ಷ ಪ್ರಕಾಶ್ ತಪಶೆಟ್ಟಿ ಅವರು ಸಂತ್ರಸ್ತರಿಗೆ ಹಕ್ಕುಪತ್ರ ಹಾಗೂ ಈ-ಖಾತಾ ಉತಾರೆಗಳನ್ನು ವಿತರಿಸಿ, ಅವರ ಸಮಸ್ಯೆಗಳನ್ನು ಆಲಿಸಿದರು. ದಾಖಲೆಗಳನ್ನು ಪಡೆಯುವುದರಿಂದ ಸಂತ್ರಸ್ತರಿಗೆ ತಮ್ಮ ಆಸ್ತಿಯ ಸಂಬಂಧಿತ ವ್ಯವಹಾರಗಳಲ್ಲಿ ಹೆಚ್ಚಿನ ಅನುಕೂಲವಾಗಲಿದ್ದು, ಬಾಕಿ ಇರುವ ಅರ್ಜಿಗಳ ವಿಲೇವಾರಿಗೆ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಬಳಿಕ ಬಿ.ಟಿ.ಡಿ.ಎ ಆವರಣದಲ್ಲಿರುವ ಆರ್.ಓ. ಕಚೇರಿಗೆ ಭೇಟಿ ನೀಡಿದ ಪ್ರಕಾಶ್ ತಪಶೆಟ್ಟಿ ಅವರು, ಅಲ್ಲಿಗೆ ಆಗಮಿಸಿದ್ದ ಮುಳುಗಡೆ ಸಂತ್ರಸ್ತರಿಂದ ನೇರವಾಗಿ ಅಹವಾಲುಗಳನ್ನು ಸ್ವೀಕರಿಸಿದರು. ಸಂತ್ರಸ್ತರು ತಮ್ಮ ಸಮಸ್ಯೆಗಳು, ಬಾಕಿ ಇರುವ ದಾಖಲೆಗಳು ಹಾಗೂ ಹಕ್ಕುಪತ್ರಕ್ಕೆ ಸಂಬಂಧಿಸಿದ ವಿವಿಧ ವಿಚಾರಗಳನ್ನು ಅವರ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಕಚೇರಿಯ ಸಿಬ್ಬಂದಿಯೊಂದಿಗೆ ವಿವಿಧ ಕಡತಗಳನ್ನು ಪರಿಶೀಲಿಸಿದ ಅವರು, ಮುಳುಗಡೆ ಸಂತ್ರಸ್ತರ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಅನಗತ್ಯವಾಗಿ ವಿಳಂಬ ಮಾಡದೆ ತ್ವರಿತವಾಗಿ ವಿಲೇವಾರಿ ಮಾಡುವಂತೆ ಸೂಚಿಸಿದರು. ಸಂತ್ರಸ್ತರು ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಮಾನವೀಯ ದೃಷ್ಟಿಕೋನದಿಂದ ಪರಿಗಣಿಸಿ, ಅವರೊಂದಿಗೆ ಗೌರವ ಹಾಗೂ ವಿಶ್ವಾಸದಿಂದ ನಡೆದುಕೊಳ್ಳಬೇಕು ಎಂದು ಸಿಬ್ಬಂದಿಗೆ ನಿರ್ದೇಶನ ನೀಡಿದರು.

‘ಕಾಲಹರಣ ಮಾಡದೆ ಕೆಲಸ ಮಾಡಿ’

ಮುಳುಗಡೆ ಸಂತ್ರಸ್ತರಿಗೆ ಸಂಬಂಧಿಸಿದ ಕಡತಗಳು ಅನಗತ್ಯವಾಗಿ ಕಚೇರಿಗಳಲ್ಲಿ ಬಾಕಿ ಉಳಿಯದಂತೆ ನೋಡಿಕೊಳ್ಳಬೇಕು. ಅರ್ಜಿಗಳ ಪರಿಶೀಲನೆ ಹಾಗೂ ವಿಲೇವಾರಿ ಪ್ರಕ್ರಿಯೆಯನ್ನು ತ್ವರಿತಗೊಳಿಸಿ, ಅರ್ಹ ಸಂತ್ರಸ್ತರಿಗೆ ಶೀಘ್ರವಾಗಿ ಹಕ್ಕುಪತ್ರಗಳನ್ನು ತಲುಪಿಸುವಂತೆ ಸಿಬ್ಬಂದಿಗೆ ಪ್ರಕಾಶ್ ತಪಶೆಟ್ಟಿ ಅವರು ಖಡಕ್ ಸೂಚನೆ ನೀಡಿದರು.

ಸಂತ್ರಸ್ತರ ಸಮಸ್ಯೆಗಳಿಗೆ ಕಚೇರಿ ಮಟ್ಟದಲ್ಲಿಯೇ ಸಾಧ್ಯವಾದಷ್ಟು ಪರಿಹಾರ ಒದಗಿಸಬೇಕು. ದಾಖಲೆಗಳ ಕೊರತೆ ಅಥವಾ ಇತರ ಕಾರಣಗಳಿಂದ ಅರ್ಜಿಗಳು ಬಾಕಿ ಇದ್ದಲ್ಲಿ, ಅದರ ಬಗ್ಗೆ ಅರ್ಜಿದಾರರಿಗೆ ಸ್ಪಷ್ಟ ಮಾಹಿತಿ ನೀಡಬೇಕು. ಜನರನ್ನು ಅನಗತ್ಯವಾಗಿ ಕಚೇರಿಗೆ ಅಲೆದಾಡಿಸದೆ, ನಿಯಮಾನುಸಾರ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಅವರು ಸಿಬ್ಬಂದಿಗೆ ತಿಳಿಸಿದರು.

ನವನಗರ ನಿರ್ಮಾಣ ಹಾಗೂ ಪುನರ್ವಸತಿ ಪ್ರಕ್ರಿಯೆಯೊಂದಿಗೆ ಸಂಬಂಧ ಹೊಂದಿರುವ ಮುಳುಗಡೆ ಸಂತ್ರಸ್ತರಿಗೆ ದಾಖಲೆಗಳನ್ನು ಒದಗಿಸುವುದು ಪ್ರಮುಖವಾಗಿದ್ದು, ಅವರ ಹಕ್ಕುಗಳಿಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿಗೆ ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಪುನರ್ವಸತಿ ಅಧಿಕಾರಿ ನೀಲಕಂಠ ಅಂಕದ, ಗಂಜಿಹಾಳ, ಮಹಾದೇವ ಕಲ್ಲೂರ, ಶ್ರೀಮತಿ ಲಮಾಣಿ, ಟಿ.ಎ. ರವಿಕುಮಾರ, ಬಿ.ಟಿ.ಡಿ.ಎ ಸಿಬ್ಬಂದಿ ವರ್ಗ ಹಾಗೂ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಬಳ್ಳಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande