
ಬೆಂಗಳೂರು, 18 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನದ ಭಾಗವಾಗಿ ಸ್ವಚ್ಛಗೊಳಿಸಲಾಗಿರುವ ಹೆಬ್ಬಾಳ ಫ್ಲೈಓವರ್ ಸುತ್ತಮುತ್ತಲಿನ ಪ್ರದೇಶಗಳಿಗೆ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲನೆ ನಡೆಸಿದರು.
ಹೆಬ್ಬಾಳ ಫ್ಲೈಓವರ್ ಹಾಗೂ ಸುತ್ತಮುತ್ತಲಿನ ಸಾರ್ವಜನಿಕ ಸ್ಥಳಗಳಲ್ಲಿ ಕೈಗೊಂಡಿರುವ ಸ್ವಚ್ಛತಾ ಕಾರ್ಯಗಳನ್ನು ಸಚಿವರು ಖುದ್ದಾಗಿ ವೀಕ್ಷಿಸಿದರು. ಈ ವೇಳೆ ಕೆಲವು ಕಡೆಗಳಲ್ಲಿ ತ್ಯಾಜ್ಯ ವಿಲೇವಾರಿ ಹಾಗೂ ಸ್ವಚ್ಛತೆ ನಿರ್ವಹಣೆ ಸಮರ್ಪಕವಾಗಿಲ್ಲದಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದ ಅಧಿಕಾರಿಯ ವಿರುದ್ಧ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ನೀವು ಕೆಲಸ ಮಾಡೋದು ಜನರಿಗಾಗಿಯೇ ಅಥವಾ ಕಾಂಟ್ರಾಕ್ಟರ್ಗಳಿಗಾಗಿಯೇ?” ಎಂದು ಪ್ರಶ್ನಿಸಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲಸ ನಿರ್ವಹಿಸುವಂತೆ ಸೂಚಿಸಿದರು.
ಸ್ವಚ್ಛಗೊಳಿಸಿದ ಪ್ರದೇಶಗಳಲ್ಲಿ ಮತ್ತೆ ತ್ಯಾಜ್ಯ ಸಂಗ್ರಹವಾಗದಂತೆ ನಿರಂತರ ನಿಗಾ ವಹಿಸಬೇಕು. ಸ್ವಚ್ಛತೆ ಕಾಪಾಡುವಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅಲ್ಲದೆ, ಬಿಬಿಎಂಪಿ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿದ ಸಚಿವರು, ಪ್ರಮುಖ ಜಂಕ್ಷನ್ಗಳು ಮತ್ತು ರಸ್ತೆಗಳನ್ನು ಕಸಮುಕ್ತವಾಗಿಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಸಾರ್ವಜನಿಕರಲ್ಲಿಯೂ ತ್ಯಾಜ್ಯ ವಿಲೇವಾರಿ ಕುರಿತು ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನದಡಿ ಸ್ವಚ್ಛಗೊಳಿಸಿದ ಪ್ರದೇಶಗಳ ನಿರ್ವಹಣೆ ಕೇವಲ ಒಂದು ದಿನದ ಕಾರ್ಯವಾಗದೆ, ನಿರಂತರವಾಗಿ ನಡೆಯಬೇಕು. ಸ್ವಚ್ಛತಾ ಕಾರ್ಯದ ನಂತರವೂ ಅದೇ ಸ್ಥಳದಲ್ಲಿ ಮತ್ತೆ ಕಸ ಸೇರುವಂತಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R