ಮಕ್ಕಳಲ್ಲಿ ದೇಶದ ಅಖಂಡತೆ, ಏಕತೆಯ ಭಾವ ಮೂಡಿಸುವಲ್ಲಿ ದೇಶಭಕ್ತಿ ಗೀತೆಗಳು ಸಹಕಾರಿ: ಪಿ.ಬಿ. ಕಾಲವಾಡ
ವಿಜಯಪುರ, 18 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ಸುಂದರ ಬದುಕು ಹಾಗೂ ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಿಕ್ಸೂಚಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಸ್ಥೆಯಲ್ಲಿ ಅಳವಡಿಸಿಕೊಳ್ಳುವ ಶಿಸ್ತು, ಸೇವಾ ಮನೋಭಾವ ಮತ್ತು ಕೌಶಲ್ಯಗಳು ಮಕ್ಕಳ ಸರ್ವತೋಮುಖ ವ್ಯಕ್ತಿತ್ವ ವಿಕಸನಕ್
ಸ್ಕೌಟ್


ವಿಜಯಪುರ, 18 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ಸುಂದರ ಬದುಕು ಹಾಗೂ ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಿಕ್ಸೂಚಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಸ್ಥೆಯಲ್ಲಿ ಅಳವಡಿಸಿಕೊಳ್ಳುವ ಶಿಸ್ತು, ಸೇವಾ ಮನೋಭಾವ ಮತ್ತು ಕೌಶಲ್ಯಗಳು ಮಕ್ಕಳ ಸರ್ವತೋಮುಖ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತವೆ ಎಂದು ದೈಹಿಕ ಶಿಕ್ಷಣಾಧಿಕಾರಿ ಪಿ.ಬಿ. ಕಾಲವಾಡ ಹೇಳಿದರು.

ವಿಜಯಪುರ ಜಿಲ್ಲೆಯ ಇಂಡಿ ನಗರದ ಗುರುಭವನದಲ್ಲಿ ಶುಕ್ರವಾರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಇಂಡಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ದೇಶಭಕ್ತಿ ಗೀತೆಗಳ ಗೀತಗಾಯನ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ದೇಶಭಕ್ತಿ ಎನ್ನುವುದು ಕೇವಲ ದೇಶದ ಮೇಲಿನ ಅಭಿಮಾನಕ್ಕೆ ಸೀಮಿತವಾಗದೆ, ದೇಶದ ಸಮಗ್ರತೆ, ಸೋದರತೆ, ಸಮಾನತೆ ಮತ್ತು ಸೌಹಾರ್ದತೆಯನ್ನು ಬಲಪಡಿಸುವ ಪ್ರಮುಖ ಪ್ರೇರಣಾ ಶಕ್ತಿಯಾಗಿದೆ. ವಿದ್ಯಾರ್ಥಿ ಜೀವನದಲ್ಲಿಯೇ ಮಕ್ಕಳಲ್ಲಿ ದೇಶಾಭಿಮಾನ, ಶಿಸ್ತು, ಸೇವಾ ಮನೋಭಾವ ಹಾಗೂ ಜವಾಬ್ದಾರಿಯುತ ನಾಗರಿಕತ್ವದ ಗುಣಗಳನ್ನು ಬೆಳೆಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಹೇಳಿದರು.

ದೇಶಭಕ್ತಿ ಗೀತೆಗಳಂತಹ ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳಲ್ಲಿ ದೇಶದ ಬಗ್ಗೆ ಹೆಮ್ಮೆ ಹಾಗೂ ಗೌರವದ ಭಾವನೆಯನ್ನು ಮೂಡಿಸುವುದರ ಜೊತೆಗೆ, ವಿವಿಧತೆಯಲ್ಲಿ ಏಕತೆಯ ಮಹತ್ವವನ್ನು ಅರಿಯಲು ಸಹಕಾರಿಯಾಗುತ್ತವೆ. ಸಂಗೀತದ ಮೂಲಕ ದೇಶದ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸುವುದು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ರಾಜ್ಯ ಸಂಪನ್ಮೂಲ ವ್ಯಕ್ತಿ ಜಗದೀಶ ಬೋಳಸೂರ ಮುಖ್ಯ ಅತಿಥಿಯಾಗಿ ಮಾತನಾಡಿ, ಮಕ್ಕಳು ಸ್ವಯಂಸೇವೆಯ ಮೂಲಕ ಸಮಾಜದೊಂದಿಗೆ ಬೆರೆಯುವ ಗುಣವನ್ನು ಬೆಳೆಸಿಕೊಳ್ಳಬೇಕು. ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಆತ್ಮವಿಶ್ವಾಸ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ. ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳ ಮೂಲಕ ಮಕ್ಕಳು ತಮ್ಮ ದೈಹಿಕ, ಬೌದ್ಧಿಕ, ಭಾವನಾತ್ಮಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಲು ಉತ್ತಮ ಅವಕಾಶ ದೊರೆಯುತ್ತದೆ ಎಂದರು.

ಸ್ಕೌಟ್ ಮಾಸ್ಟರ್ ಸಂತೋಷ ಬಂಡೆ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶಭಕ್ತಿಯ ಸ್ಪರ್ಧಾ ಚಟುವಟಿಕೆಗಳು ಮಕ್ಕಳಲ್ಲಿ ದೇಶದ ಅಖಂಡತೆ ಹಾಗೂ ಭವ್ಯ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಗೌರವವನ್ನು ಹೆಚ್ಚಿಸುತ್ತವೆ. ಪ್ರತಿಯೊಬ್ಬರಲ್ಲೂ ದೇಶಭಕ್ತಿ, ಸೇವಾ ಹಾಗೂ ತ್ಯಾಗ ಮನೋಭಾವ ಜಾಗೃತವಾದಾಗ ದೇಶದ ಏಕತೆ ಮತ್ತಷ್ಟು ಗಟ್ಟಿಗೊಳ್ಳುತ್ತದೆ ಎಂದು ಹೇಳಿದರು.

ಸಹಾಯಕ ಸಂಘಟನಾ ಆಯುಕ್ತ ಡಿ.ಬಿ. ಅತ್ತಾರ ಮಾತನಾಡಿ, ದೇಶದ ಅಭಿವೃದ್ಧಿ ಹಾಗೂ ಶಾಂತಿಗಾಗಿ ಪ್ರತಿಯೊಬ್ಬರೂ ತಿಳುವಳಿಕೆ, ಶಿಸ್ತು ಮತ್ತು ನಿಷ್ಠೆಯಿಂದ ಕಾರ್ಯನಿರ್ವಹಿಸುವಂತೆ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳು ಪ್ರೋತ್ಸಾಹಿಸುತ್ತವೆ. ವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆಯನ್ನು ಹೊರತರುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯದರ್ಶಿ ಷಹಾಜಿ ಪಾಟೀಲ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಣ ಸಂಯೋಜಕ ಸಿ.ಬಿ. ಬಿರಾದಾರ, ಸ್ಕೌಟ್ಸ್ ಮಾಸ್ಟರ್ ಚಿಕ್ಕಯ್ಯ ಮಠಪತಿ, ವೈ.ಎಂ. ಬಾಗೇವಾಡಿ, ಸರೋಜಿನಿ ಮಾವಿನಮರ, ರಾಹುಲ ಚವ್ಹಾಣ, ಗೈಡ್ ಕ್ಯಾಪ್ಟನ್ ಶ್ರೀದೇವಿ ಜೀರಗಾಳ ಸೇರಿದಂತೆ ತಾಲೂಕಿನ ವಿವಿಧ ಶಾಲೆಗಳ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸ್ಕೌಟ್ ಮಾಸ್ಟರ್ ಪ್ರಶಾಂತ ತಳವಾರ ಸ್ವಾಗತಿಸಿದರು. ಬಸವರಾಜ ಗೋರನಾಳ ನಿರೂಪಿಸಿದರು. ವಿವಿಧ ವಿಭಾಗಗಳಲ್ಲಿ ನಡೆದ ದೇಶಭಕ್ತಿ ಗೀತಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರಗಳನ್ನು ನೀಡಿ ಗೌರವಿಸಲಾಯಿತು.

ತಾಲೂಕು ಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ದೇಶಭಕ್ತಿ ಗೀತೆಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು. ಸ್ಪರ್ಧೆಯು ಮಕ್ಕಳಲ್ಲಿನ ಸಂಗೀತ ಪ್ರತಿಭೆಯನ್ನು ಅನಾವರಣಗೊಳಿಸುವುದರ ಜೊತೆಗೆ ದೇಶದ ಅಖಂಡತೆ, ಏಕತೆ, ಸಂಸ್ಕೃತಿ ಮತ್ತು ದೇಶಪ್ರೇಮದ ಮೌಲ್ಯಗಳನ್ನು ಬೆಳೆಸುವ ವೇದಿಕೆಯಾಗಿ ಗಮನ ಸೆಳೆಯಿತು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande