ಗೃಹಲಕ್ಷ್ಮೀ ಫಲಾನುಭವಿಗಳ ಮರುಪರಿಶೀಲನೆ ಪಾರದರ್ಶಕವಾಗಿ ನಡೆಯಲಿ: ಬಿ.ಬಿ. ಆಸೂಟಿ
ಗದಗ, 18 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್:- ಗೃಹಲಕ್ಷ್ಮೀ ಯೋಜನೆಯ ಉದ್ದೇಶಕ್ಕೆ ಧಕ್ಕೆಯಾಗದಂತೆ ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ಸೌಲಭ್ಯ ತಲುಪಿಸುವುದು ಹಾಗೂ ಅನರ್ಹರಿಗೆ ಸರ್ಕಾರದ ಹಣ ಸೋರಿಕೆಯಾಗದಂತೆ ತಡೆಯುವುದು ಮರುಪರಿಶೀಲನೆಯ ಪ್ರಮುಖ ಉದ್ದೇಶವಾಗಿದೆ. ಈ ಕಾರ್ಯವನ್ನು ಜವಾಬ್ದಾರಿಯುತವಾಗಿ ಹಾಗೂ ಪ
ಫೋಟೋ


ಗದಗ, 18 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:- ಗೃಹಲಕ್ಷ್ಮೀ ಯೋಜನೆಯ ಉದ್ದೇಶಕ್ಕೆ ಧಕ್ಕೆಯಾಗದಂತೆ ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ಸೌಲಭ್ಯ ತಲುಪಿಸುವುದು ಹಾಗೂ ಅನರ್ಹರಿಗೆ ಸರ್ಕಾರದ ಹಣ ಸೋರಿಕೆಯಾಗದಂತೆ ತಡೆಯುವುದು ಮರುಪರಿಶೀಲನೆಯ ಪ್ರಮುಖ ಉದ್ದೇಶವಾಗಿದೆ. ಈ ಕಾರ್ಯವನ್ನು ಜವಾಬ್ದಾರಿಯುತವಾಗಿ ಹಾಗೂ ಪಾರದರ್ಶಕವಾಗಿ ಕೈಗೊಳ್ಳಬೇಕು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಆಸೂಟಿ ಹೇಳಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿಂದು ಆಯೋಜಿಸಿದ್ದ ಗೃಹಲಕ್ಷ್ಮೀ ಯೋಜನೆಯ ಮರುಪರಿಶೀಲನಾ ಅರ್ಜಿಗಳ ಕುರಿತು ಜಿಲ್ಲಾ ಮಟ್ಟದ ತರಬೇತುದಾರರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು ಫಲಾನುಭವಿಗಳಿಗೆ ನೀಡಲಾಗುತ್ತಿರುವ ಎರಡು ಸಾವಿರ ರೂಪಾಯಿ ಆರ್ಥಿಕ ನೆರವನ್ನು ಮಹಿಳೆಯರು ಸ್ವಾವಲಂಬನೆ, ಮಕ್ಕಳ ವಿದ್ಯಾಭ್ಯಾಸ, ಕೃಷಿ ಚಟುವಟಿಕೆ, ಹೈನುಗಾರಿಕೆ, ವೈದ್ಯಕೀಯ ವೆಚ್ಚ ಸೇರಿದಂತೆ ವಿವಿಧ ಅಗತ್ಯಗಳಿಗೆ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಗದಗ ಜಿಲ್ಲೆಯಲ್ಲಿ ಸುಮಾರು 2.74 ಲಕ್ಷ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ತಲುಪಿದೆ ಎಂದು ತಿಳಿಸಿದರು.

ಯೋಜನೆ ಜಾರಿಯಾಗಿ ಮೂರು ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ ಫಲಾನುಭವಿಗಳ ವಿವರಗಳನ್ನು ಮರುಪರಿಶೀಲಿಸುವ ಅಗತ್ಯವಿದೆ. ಈ ಅವಧಿಯಲ್ಲಿ ಕೆಲವು ಫಲಾನುಭವಿಗಳು ಮೃತಪಟ್ಟಿರುವುದಾಗಿ ದಾಖಲಾಗಿದ್ದರೂ, ಅವರ ಕುಟುಂಬದ ಸದಸ್ಯರು ಯೋಜನೆಯ ಹಣ ಪಡೆಯುತ್ತಿರುವ ಪ್ರಕರಣಗಳು ಗಮನಕ್ಕೆ ಬಂದಿವೆ. ಇಂತಹ ಪ್ರಕರಣಗಳಿಂದ ಸರ್ಕಾರದ ಹಣ ಅನರ್ಹವಾಗಿ ಬಳಕೆಯಾಗುವ ಸಾಧ್ಯತೆ ಇರುವುದರಿಂದ ಫಲಾನುಭವಿಗಳ ನೈಜ ಸ್ಥಿತಿಗತಿಯನ್ನು ಪರಿಶೀಲಿಸಬೇಕು. ಅರ್ಹತೆ ಹೊಂದಿರುವ ಫಲಾನುಭವಿಗಳಿಗೆ ಮಾತ್ರ ಯೋಜನೆಯ ಸೌಲಭ್ಯ ಮುಂದುವರಿಸುವಂತೆ ಕ್ರಮವಹಿಸಬೇಕು ಎಂದು ಹೇಳಿದರು.

ಅದೇ ರೀತಿ, ಬೇರೆ ರಾಜ್ಯದವರು ಸೇರಿದಂತೆ ವಿವಿಧ ಕಾರಣಗಳಿಂದ ಯೋಜನೆಗೆ ಅನರ್ಹರಾಗಿರುವವರು ಸೌಲಭ್ಯ ಪಡೆಯುತ್ತಿರುವ ಪ್ರಕರಣಗಳ ಬಗ್ಗೆಯೂ ಸಮಗ್ರವಾಗಿ ಪರಿಶೀಲನೆ ನಡೆಸಬೇಕು. ಸರ್ಕಾರದ ಹಣ ದುರ್ಬಳಕೆಯಾಗದಂತೆ ಅಧಿಕಾರಿಗಳು ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿ ಶಾಂತ ಹಾಗೂ ಸೌಹಾರ್ದಯುತ ರೀತಿಯಲ್ಲಿ ಮಾಹಿತಿ ಸಂಗ್ರಹಿಸಬೇಕು. ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಫಲಾನುಭವಿಗಳ ನೈಜ ಸ್ಥಿತಿಗತಿಯನ್ನು ಖಚಿತಪಡಿಸಿಕೊಳ್ಳಬೇಕು. ಈ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ಯಾವುದೇ ರೀತಿಯ ತೊಂದರೆ ಅಥವಾ ಅನ್ಯಾಯವಾಗದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಫಲಾನುಭವಿಗಳ ಮಾಹಿತಿಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಲ್ಲಿ ನಿಯಮಾನುಸಾರ ಪರಿಶೀಲಿಸಿ, ಅರ್ಹತೆ ಹೊಂದಿರುವವರಿಗೆ ಮಾತ್ರ ಯೋಜನೆಯ ಸೌಲಭ್ಯ ದೊರೆಯುವಂತೆ ಕ್ರಮ ವಹಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾದಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ ತಿಳಿಸಿದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯಡಿ ಅರ್ಹ ಮಹಿಳೆಯರಿಗೆ ಸರ್ಕಾರದಿಂದ ದೊರೆಯುತ್ತಿರುವ ಆರ್ಥಿಕ ನೆರವು ಕುಟುಂಬದ ಜೀವನಮಟ್ಟ ಸುಧಾರಣೆಗೆ ಸಹಕಾರಿಯಾಗಿದೆ. ಯೋಜನೆಯ ಉದ್ದೇಶಕ್ಕೆ ಧಕ್ಕೆಯಾಗದಂತೆ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ಸಕಾಲದಲ್ಲಿ ಸೌಲಭ್ಯ ದೊರೆಯುವಂತೆ ಕ್ರಮವಹಿಸಬೇಕು ಎಂದರು.

ಯೋಜನೆಯಡಿ ಅನರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರೆಯುತ್ತಿರುವುದು ಕಂಡುಬಂದಲ್ಲಿ ಅಂತಹ ಪ್ರಕರಣಗಳನ್ನು ನಿಯಮಾನುಸಾರ ಮರುಪರಿಶೀಲಿಸಿ ಸರಿಪಡಿಸಬೇಕು. ಈ ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಫಲಾನುಭವಿಗೆ ಅನ್ಯಾಯವಾಗದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಮರುಪರಿಶೀಲನಾ ಅರ್ಜಿಗಳ ಪರಿಶೀಲನೆ ಸಂದರ್ಭದಲ್ಲಿ ಫಲಾನುಭವಿಗಳ ದಾಖಲೆಗಳು ಹಾಗೂ ಅರ್ಹತಾ ಮಾನದಂಡಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು. ಸಾರ್ವಜನಿಕರಿಗೆ ಅಗತ್ಯ ಮಾಹಿತಿಯನ್ನು ನೀಡಿ, ಅವರ ಅರ್ಜಿಗಳನ್ನು ಪಾರದರ್ಶಕವಾಗಿ ವಿಲೇವಾರಿ ಮಾಡುವ ಮೂಲಕ ಯೋಜನೆಯ ಸದುಪಯೋಗವನ್ನು ಖಚಿತಪಡಿಸಬೇಕು ಎಂದು ತಿಳಿಸಿದರು.

ಗೃಹಲಕ್ಷ್ಮೀ ಯೋಜನೆಯ ಸೌಲಭ್ಯವು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ನೆರವಾಗುತ್ತಿರುವ ಹಿನ್ನೆಲೆಯಲ್ಲಿ ಅರ್ಹ ಪ್ರತಿಯೊಬ್ಬ ಫಲಾನುಭವಿಗೂ ಯೋಜನೆಯ ಪ್ರಯೋಜನ ತಲುಪಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಜಿಲ್ಲಾಧಿಕಾರಿ ಎಂದು ಸಿ.ಎನ್. ಶ್ರೀಧರ್ ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರಾಧಾ ಮಣ್ಣೂರು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾದಿಕಾರದ ಉಪಾಧ್ಯಕ್ಷ ಪಿ.ಬಿ. ಅಳಗವಾಡಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಅಶೋಕ್ ಮಂದಾಲಿ, ದೇವಪ್ಪ ಮುರನಾಳ, ನಾಗರಾಜ ಮಡಿವಾಳರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande