ಜಿಲ್ಲೆಯಾದ್ಯಂತ ಯುವ ಮತದಾರರ ನೋಂದಣಿಗೆ ವಿಶೇಷ ಅಭಿಯಾನ
ಜಿಲ್ಲೆಯಾದ್ಯಂತ ಯುವ ಮತದಾರರ ನೋಂದಣಿಗೆ ವಿಶೇಷ ಅಭಿಯಾನ
ಕೋಲಾರ ಜಿಲ್ಲಾಧಿಕಾರಿ ಎಂ.ಆರ್. ರವಿ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಯ ಬಗ್ಗೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಿದರು.


ಕೋಲಾರ, 18 ಸೆಪ್ಟೆಂಬರ್ (ಹಿ.ಸ)

ಆ್ಯಂಕರ್ : ಜಿಲ್ಲೆಯ ಎಲ್ಲಾ ಯುವ ಹಾಗೂ ಅರ್ಹ ಮತದಾರರು ತಮ್ಮ ಹಕ್ಕಿನಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಸೆಪ್ಟೆಂಬರ್ ೧೯ ಹಾಗೂ ೨೦ರಂದು ಜಿಲ್ಲೆಯಾದ್ಯಂತ ಎಲ್ಲಾ ೧೫೭೮ ಮತಗಟ್ಟೆಗಳಲ್ಲಿ ವಿಶೇಷ ನೋಂದಣಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ಎರಡು ದಿನಗಳ ಕಾಲ ಎಲ್ಲಾ ಬೂತ್ಗಳಲ್ಲಿ ಬಿ.ಎಲ್.ಓ ಗಳು ಉಪಸ್ಥಿತರಿರಲಿದ್ದು, ಸಾರ್ವಜನಿಕರು ಹಾಗೂ ಯುವ ಮತದಾರರು ಇದರ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಮತ್ತು ಮನ್ನಣೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಬಿ.ಎಲ್.ಎಗಳು ಶೇಕಡಾ ೧೦೦ರಷ್ಟು ನೋಂದಣಿಗೆ ಸಹಕರಿಸಬೇಕು, ಎಂದು ಕೋಲಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಂ. ಆರ್. ರವಿಕುಮಾರ್ ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಈ ವಿಷಯವನ್ನು ಅವರು ಪ್ರಕಟಿಸಿದರು. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಅಕ್ಟೋಬರ್ ೦೧, ೨೦೨೬ರ ಅರ್ಹತಾ ದಿನಾಂಕಕ್ಕೆ ಅನುಗುಣವಾಗಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ - ೨೦೨೬ ನಡೆಯುತ್ತಿದೆ. ಆಗಸ್ಟ್ ೨೪ರಂದು ಎಲ್ಲಾ ೬ ವಿಧಾನಸಭಾ ಕ್ಷೇತ್ರಗಳಲ್ಲಿ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ಹೊಸದಾಗಿ ಹೆಸರು ಸೇರಿಸಲು (ನಮೂನೆ-೬), ತೆಗೆದುಹಾಕಲು (ನಮೂನೆ-೭) ಹಾಗೂ ತಿದ್ದುಪಡಿ ಮತ್ತು ವಿಳಾಸ ಬದಲಾವಣೆಗೆ (ನಮೂನೆ-೮) ಸೆಪ್ಟೆಂಬರ್ ೨೩ರವರೆಗೆ ಅವಕಾಶವಿದೆ ಹಾಗೂ ಆನ್ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅವರು ವಿವರಿಸಿದರು.

ಸಭೆಯಲ್ಲಿ ಮಂಡಿಸಲಾದ ಅಂಕಿ-ಅAಶಗಳ ಪ್ರಕಾರ, ಆಗಸ್ಟ್ ೨೪ರ ಕರಡು ಪಟ್ಟಿಯಂತೆ ಜಿಲ್ಲೆಯ ೬ ವಿಧಾನಸಭಾ ಕ್ಷೇತ್ರಗಳ ೧,೫೭೮ ಮತಗಟ್ಟೆಗಳಲ್ಲಿ ಒಟ್ಟು ೧೧,೨೪,೨೩೧ ಮತದಾರರಿದ್ದಾರೆ (೫,೫೮,೬೮೦ ಪುರುಷರು, ೫,೬೫,೪೬೧ ಮಹಿಳೆಯರು ಹಾಗೂ ೯೦ ಇತರೆ). ಕ್ಷೇತ್ರವಾರು ವಿವರಣೆ ನೋಡುವುದಾದರೆ, ಶ್ರೀನಿವಾಸಪುರದಲ್ಲಿ ೨೮೮ ಮತಗಟ್ಟೆಗಳಿದ್ದು ೧,೯೭,೦೪೪ ಮತದಾರರಿದ್ದಾರೆ. ಮುಳಬಾಗಿಲಿನಲ್ಲಿ ೨೭೪ ಮತಗಟ್ಟೆಗಳಿದ್ದು ೧,೯೬,೩೮೦ ಮತದಾರರು, ಕೆ.ಜಿ.ಎಫ್ನಲ್ಲಿ ೨೨೪ ಮತಗಟ್ಟೆಗಳಿದ್ದು ೧,೬೩,೩೨೬ ಮತದಾರರು, ಬಂಗಾರಪೇಟೆಯಲ್ಲಿ ೨೫೯ ಮತಗಟ್ಟೆಗಳಿದ್ದು ೧,೮೦,೮೮೫ ಮತದಾರರು, ಕೋಲಾರದಲ್ಲಿ ೨೮೪ ಮತಗಟ್ಟೆಗಳಿದ್ದು ೨,೦೮,೪೬೬ ಮತದಾರರು ಹಾಗೂ ಮಾಲೂರಿನಲ್ಲಿ ೨೪೯ ಮತಗಟ್ಟೆಗಳಿದ್ದು ೧,೭೮,೧೩೦ ಮತದಾರರಿದ್ದಾರೆ. ಒಟ್ಟಾರೆ ಜಿಲ್ಲೆಯ ಲಿಂಗ ಅನುಪಾತ ೧೦೧೨ ಆಗಿದೆ. ಆಗಸ್ಟ್ ೨೪ರಿಂದ ಸೆಪ್ಟೆಂಬರ್ ೧೭ರವರೆಗೆ ಜಿಲ್ಲೆಯಲ್ಲಿ ಒಟ್ಟು ೬,೯೨೬ ಅರ್ಜಿಗಳು ಸ್ವೀಕೃತವಾಗಿವೆ (೩,೧೩೮ ನಮೂನೆ-೬, ೧ ನಮೂನೆ-೬ಎ, ೪೬೩ ನಮೂನೆ-೭ ಹಾಗೂ ೩,೩೨೪ ನಮೂನೆ-೮ ಅರ್ಜಿಗಳು). ವಿಧಾನಸಭಾ ಕ್ಷೇತ್ರವಾರು ಸ್ವೀಕೃತವಾದ ಒಟ್ಟು ಅರ್ಜಿಗಳ ಪೈಕಿ, ಶ್ರೀನಿವಾಸಪುರದಲ್ಲಿ ೧,೩೫೦, ಮುಳಬಾಗಿಲಿನಲ್ಲಿ ೧,೦೪೯, ಕೆ.ಜಿ.ಎಫ್ನಲ್ಲಿ ೮೩೭, ಬಂಗಾರಪೇಟೆಯಲ್ಲಿ ೧,೧೫೫, ಕೋಲಾರದಲ್ಲಿ ೧,೦೯೧ ಹಾಗೂ ಮಾಲೂರಿನಲ್ಲಿ ೧,೪೪೪ ಅರ್ಜಿಗಳು ಸಲ್ಲಿಕೆಯಾಗಿವೆ.

ಇದೇ ವೇಳೆ, ಹಿಂದಿನ ದತ್ತಸಂಚಯದೊAದಿಗೆ ಹೊಂದಾಣಿಕೆಯಾಗದ (೧,೦೫,೫೦೧ ವ್ಯತ್ಯಾಸಗಳು) ಹಾಗೂ ಮ್ಯಾಪಿಂಗ್ ಇಲ್ಲದ (೩೬,೬೯೬) ಒಟ್ಟು ೧,೪೨,೧೯೭ ಮತದಾರರಿಗೆ ಬಿ.ಎಲ್.ಓ ಗಳ ಮೂಲಕ ವಿಚಾರಣಾ ನೋಟಿಸ್ ಜಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. ಈ ಪೈಕಿ ಈಗಾಗಲೇ ೧,೪೦,೧೧೩ ನೋಟಿಸ್ಗಳನ್ನು ವಿತರಿಸಲಾಗಿದ್ದು, ವಿಚಾರಣೆ ನಡೆಸಲು ಚುನಾವಣಾ ಆಯೋಗದಿಂದ ಜಿಲ್ಲೆಗೆ ಒಟ್ಟು ೧೩೩ ಹೆಚ್ಚುವರಿ ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು (ಶ್ರೀನಿವಾಸಪುರ-೨೩, ಮುಳಬಾಗಿಲು-೨೦, ಕೆ.ಜಿ.ಎಫ್-೨೦, ಬಂಗಾರಪೇಟೆ-೨೦, ಕೋಲಾರ-೩೦, ಮಾಲೂರು-೨೦) ನೇಮಿಸಲಾಗಿದೆ. ಇಲ್ಲಿಯವರೆಗೆ ೫೬,೦೬೩ (ಶೇ. ೪೦.೦೧ರಷ್ಟು) ವಿಚಾರಣೆಗಳು ಪೂರ್ಣಗೊಂಡಿದ್ದು, ೮೪,೦೫೦ ವಿಚಾರಣೆಗಳು ಬಾಕಿಯಿವೆ. ಕ್ಷೇತ್ರವಾರು ವಿಚಾರಣಾ ಪ್ರಗತಿಯನ್ನು ಗಮನಿಸಿದರೆ ಮಾಲೂರು ಅತಿ ಹೆಚ್ಚು ಶೇ. ೬೮.೨೧ರಷ್ಟು ಸಾಧನೆ ಮಾಡಿದ್ದರೆ, ಶ್ರೀನಿವಾಸಪುರ ಶೇ. ೪೪.೪೦, ಬಂಗಾರಪೇಟೆ ಶೇ. ೩೮.೧೦, ಮುಳಬಾಗಿಲು ಶೇ. ೩೪.೦೩, ಕೋಲಾರ ಶೇ. ೩೨.೭೩ ಹಾಗೂ ಕೆ.ಜಿ.ಎಫ್ ಶೇ. ೨೮.೩೫ರಷ್ಟು ವಿಚಾರಣೆ ಪೂರ್ಣಗೊಳಿಸಿವೆ.

ವಿಚಾರಣಾ ನೋಟಿಸ್ ಸ್ವೀಕರಿಸಿರುವ, ವಿಶೇಷವಾಗಿ ೨೦೦೨ರ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಮತದಾರರು ವಿಚಾರಣೆ ವೇಳೆ ಸೂಕ್ತ ದಾಖಲೆ ಸಲ್ಲಿಸುವುದು ಕಡ್ಡಾಯವಾಗಿದೆ. ಅವರು ಕೇಂದ್ರ ಅಥವಾ ರಾಜ್ಯ ಸರ್ಕಾರದ ಗುರುತಿನ ಚೀಟಿ/ಪಿಂಚಣಿ ಆದೇಶ, ೦೧.೦೭.೧೯೮೭ಕ್ಕೂ ಮುನ್ನ ನೀಡಲಾದ ದಸ್ತಾವೇಜು, ಸಕ್ಷಮ ಪ್ರಾಧಿಕಾರದ ಜನನ ಪ್ರಮಾಣಪತ್ರ, ಪಾಸ್ಪೋರ್ಟ್, ಶೈಕ್ಷಣಿಕ ಪ್ರಮಾಣಪತ್ರ, ಖಾಯಂ ನಿವಾಸ ಪ್ರಮಾಣಪತ್ರ, ಅರಣ್ಯ ಹಕ್ಕು ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ರಾಷ್ಟ್ರೀಯ ಪೌರತ್ವ ರಿಜಿಸ್ಟರ್, ಕುಟುಂಬ ರಿಜಿಸ್ಟರ್ ಅಥವಾ ಜಮೀನು ಹಂಚಿಕೆ ಪ್ರಮಾಣಪತ್ರಗಳಲ್ಲಿ ಯಾವುದಾದರೂ ಒಂದನ್ನು ಒದಗಿಸಬೇಕು. ಗೌರವಾನ್ವಿತ ಸುಪ್ರೀಂ ಕೋರ್ಟ್ ಆದೇಶ ಹಾಗೂ ಚುನಾವಣಾ ಆಯೋಗದ ಸೂಚನೆಯನ್ವಯ ಆಧಾರ್ ಕಾರ್ಡ್ ಅನ್ನು ಕೇವಲ ಗುರುತಿನ ದೃಢೀಕರಣ ದಾಖಲೆಯಾಗಿ ಪರಿಗಣಿಸಲಾಗುವುದೇ ವಿನಃ ನಾಗರಿಕತೆಯ (ಪೌರತ್ವದ) ಪ್ರಮಾಣವಾಗಿ ಪರಿಗಣಿಸಲು ಅವಕಾಶವಿಲ್ಲ ಎಂದು ಸಭೆಯಲ್ಲಿ ಕಟ್ಟುನಿಟ್ಟಾಗಿ ಸ್ಪಷ್ಟಪಡಿಸಲಾಯಿತು ಹಾಗೂ ದೋಷರಹಿತ ಮತದಾರರ ಪಟ್ಟಿ ಸಿದ್ಧಪಡಿಸಲು ಎಲ್ಲಾ ಪಕ್ಷಗಳ ಸಹಕಾರ ಕೋರಲಾಯಿತು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಸ್ ಎಂ ಮಂಗಳ, ಚುನಾವಣೆ ಶಿರಸ್ತೇದಾರ್, ಪ್ರಮುಖ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande