
ಮಂಗಳೂರು, 18 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಕರಾವಳಿ ಕರ್ನಾಟಕದ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಸಮಗ್ರ ಕರಾವಳಿ-ಮಲೆನಾಡು ಪ್ರವಾಸೋದ್ಯಮ ನೀತಿ-2026 ರೂಪಿಸಲಾಗುತ್ತಿದೆ ಎಂದು ಅಬಕಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ತಿಳಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ‘ಪ್ರಜಾ ಸೌಧ’ದಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕ ಸಚಿವ ಸಂಪುಟ ಸಭೆ ನಡೆಯುತ್ತಿರುವುದು ಕೇವಲ ಸ್ಥಳ ಬದಲಾವಣೆಯಲ್ಲ. ಇದು ರಾಜ್ಯದ ಆರ್ಥಿಕ ಅಭಿವೃದ್ಧಿಯ ದಿಕ್ಕನ್ನು ಸೂಚಿಸುವ ಪ್ರಮುಖ ಹೆಜ್ಜೆಯಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಗಳೂರನ್ನು ಇನ್ನಷ್ಟು ಅಭಿವೃದ್ಧಿಪಡಿಸಿ, ಸಮೃದ್ಧಗೊಳಿಸುವ ಮೂಲಕ ಕರ್ನಾಟಕವನ್ನು ಮುನ್ನಡೆಸುವ ಪ್ರಮುಖ ನಗರವನ್ನಾಗಿ ರೂಪಿಸುವ ಗುರಿ ಸರ್ಕಾರಕ್ಕಿದೆ. ‘ಎಲ್‌ಇಎಪಿ ಸಿಟೀಸ್ ಇಂಡೆಕ್ಸ್-2026’ರಲ್ಲಿ ಮಂಗಳೂರು ಅಗ್ರಸ್ಥಾನ ಪಡೆದಿದ್ದು, ಭಾರತದ ಭರವಸೆಯ ಮೆಟ್ರೋ ಅಲ್ಲದ ನಗರವಾಗಿ ಹೊರಹೊಮ್ಮಿದೆ. ಈ ಹಿನ್ನೆಲೆಯಲ್ಲಿ ಮಂಗಳೂರನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ‘ಬೆಂಗಳೂರು ಮೀರಿದ ಅಭಿವೃದ್ಧಿ’ ಪರಿಕಲ್ಪನೆಗೆ ಸಚಿವ ಸಂಪುಟ ಸಭೆ ಮುನ್ನುಡಿಯಾಗಿದೆ ಎಂದು ಹೇಳಿದರು.
ರಾಜ್ಯದ ಸಮಗ್ರ ಅಭಿವೃದ್ಧಿಗೆ ಒಂದಕ್ಕಿಂತ ಹೆಚ್ಚು ಅಭಿವೃದ್ಧಿ ಕೇಂದ್ರಗಳ ಅಗತ್ಯವಿದೆ. ವಾಯು, ರಸ್ತೆ, ರೈಲು ಹಾಗೂ ಸಮುದ್ರ ಸಂಪರ್ಕ, ಬಂದರು, ವಿಶ್ವವಿದ್ಯಾಲಯ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಭದ್ರ ಬುನಾದಿಯನ್ನು ಹೊಂದಿರುವ ಮಂಗಳೂರು ರಾಜ್ಯದ ಮತ್ತೊಂದು ಪ್ರಮುಖ ಅಭಿವೃದ್ಧಿ ಕೇಂದ್ರವಾಗುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದರು.
ಕರಾವಳಿ ಪ್ರದೇಶವು ತನ್ನ ಅರ್ಹತೆಗೆ ತಕ್ಕ ಸ್ಥಾನಮಾನ ಪಡೆಯುವ ನಿಟ್ಟಿನಲ್ಲಿ ಸಚಿವ ಸಂಪುಟ ಸಭೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಿದೆ. ಮಂಗಳೂರಿನಂತಹ ನಗರಗಳ ಬೆಳವಣಿಗೆಗೆ ಉತ್ತೇಜನ ನೀಡುವ ಮೂಲಕ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡುತ್ತಿದೆ ಎಂದರು.
ವಿಮಾನ ನಿಲ್ದಾಣ ವಿಸ್ತರಣೆ, ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವುದು ಹಾಗೂ ಕರ್ನಾಟಕದ ಮಧ್ಯಭಾಗದೊಂದಿಗೆ ಸಂಪರ್ಕ ಹೆಚ್ಚಿಸಲು ಕೊಂಕಣ ರೈಲ್ವೆ ವ್ಯವಸ್ಥೆಯನ್ನು ಸುಧಾರಿಸುವುದು ಸೇರಿದಂತೆ ಕರಾವಳಿಯ ವಿವಿಧ ಬೇಡಿಕೆಗಳ ಬಗ್ಗೆ ಕೇಂದ್ರ ಮಟ್ಟದಲ್ಲಿ ಬಿಜೆಪಿ ಸಂಸದರು ಚರ್ಚಿಸದಿರುವುದು ದುರದೃಷ್ಟಕರ ಎಂದು ಸಚಿವರು ಟೀಕಿಸಿದರು.
ಸಂಪುಟ ಸಭೆಗೂ ಮುನ್ನ ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಸಚಿವರು, ರಾಜ್ಯದಲ್ಲಿ ಉತ್ತಮ ಮಳೆ, ಉತ್ತಮ ಬೆಳೆ ಹಾಗೂ ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿದರು.
“ಕರಾವಳಿ ಕೆಲವರಿಗೆ ಜನರನ್ನು ವಿಭಜಿಸುವ ವೇದಿಕೆಯಾಗಿರಬಹುದು; ನಮಗೆ ಅದು ಅಭಿವೃದ್ಧಿಯ ಎಂಜಿನ್” ಎಂದು ಸಚಿವ ಕೆ.ಎಂ. ಶಿವಲಿಂಗೇಗೌಡ ಹೇಳಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.