
ಬಾಗಲಕೋಟೆ, 18 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಸಾವಿರಾರು ಕೀರ್ತನೆಗಳ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ ಪ್ರಸನ್ನವೆಂಕಟ ದಾಸರ ಆರಾಧನಾ ಮಹೋತ್ಸವಕ್ಕೆ ಬಾಗಲಕೋಟೆ ನಗರ ಸಜ್ಜಾಗಿದೆ. ನಗರದ ನವನಗರ 3ನೇ ಸೆಕ್ಟರ್ನಲ್ಲಿರುವ ಪ್ರಸನ್ನವೆಂಕಟ ದಾಸರ ಸ್ಮಾರಕ ಭವನದಲ್ಲಿ ಸೆ.20ರಿಂದ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಪ್ರಸನ್ನವೆಂಕಟ ದಾಸರ ಸಾಹಿತ್ಯ, ಜೀವನ ಹಾಗೂ ಹರಿದಾಸ ಪರಂಪರೆಯ ಕುರಿತು ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಆರಾಧನಾ ಮಹೋತ್ಸವ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ದಾಸರ ಅಪೂರ್ವ ಕೃತಿಗಳ ಕುರಿತು ಸಂಶೋಧನಾತ್ಮಕ ಪ್ರಬಂಧ ಮಂಡನೆ, ವಿವಿಧ ಗೋಷ್ಠಿಗಳು, ಕೃತಿಗಳ ಬಿಡುಗಡೆ, ಸಂಗೀತ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಸನ್ನವೆಂಕಟ ದಾಸರ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷರು ಡಾ ಸುಭಾಷ್ ಕಾಖಂಡಕಿ ತಿಳಿಸಿದ್ದಾರೆ.
ಆರಾಧನಾ ಮಹೋತ್ಸವದ ವಿವಿಧ ಗೋಷ್ಠಿಗಳಲ್ಲಿ ಪ್ರಸನ್ನವೆಂಕಟ ದಾಸರ ಅಮೂಲ್ಯ ಕೃತಿಗಳ ಕುರಿತು ಸಂಶೋಧನಾತ್ಮಕ ಪ್ರಬಂಧಗಳನ್ನು ಮಂಡಿಸಲಾಗುವುದು. ಹರಿದಾಸ ಸಾಹಿತ್ಯದ ಇತಿಹಾಸ, ದಾಸರ ಕೀರ್ತನೆಗಳ ವೈಶಿಷ್ಟ್ಯ, ತಾತ್ವಿಕ ವಿಚಾರಧಾರೆ ಹಾಗೂ ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಕುರಿತು ಚರ್ಚೆಗಳು ನಡೆಯಲಿವೆ.
ಕಾರ್ಯಕ್ರಮದಲ್ಲಿ ಅಶೋಭ್ಯ ತೀರ್ಥ ಮಠದ ರಘುವಿಜಯ ತೀರ್ಥರು, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ, ಅಮೆರಿಕದ ಯೋಗ ಸಂಸ್ಕೃತಮ್ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ವಿ.ಕೆ. ಶಾಸ್ತ್ರಿಗಳು, ಡಾ.ಅರಳುಮಲ್ಲಿಗೆ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹರಿದಾಸ ಸಾಹಿತ್ಯ ಕ್ಷೇತ್ರದ ವಿದ್ವಾಂಸರು, ಸಂಶೋಧಕರು ಹಾಗೂ ಸಂಗೀತ ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರಸನ್ನವೆಂಕಟ ದಾಸರ ಸಾಹಿತ್ಯಕ್ಕೆ ಸಂಬಂಧಿಸಿದ ಹಲವು ಮಹತ್ವದ ಕೃತಿಗಳ ಬಿಡುಗಡೆ ನಡೆಯಲಿದೆ. ಸಂಪುಟ-9 ಸೇರಿದಂತೆ ಪ್ರಸನ್ನವೆಂಕಟ ದಾಸರ ಕೃತಿಗಳ ಅನುವಾದ, ಭಾಷಾಂತರ ಹಾಗೂ ಸಂಶೋಧನಾ ಕೃತಿಗಳು ಲೋಕಾರ್ಪಣೆಯಾಗಲಿವೆ. ಸಂಜೆ ವೇಳೆ ವಿಶೇಷ ಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸಂಶೋಧನಾ ಕೇಂದ್ರ ಲೋಕಾರ್ಪಣೆ
ಪ್ರಸನ್ನವೆಂಕಟ ದಾಸರ ಸ್ಮಾರಕ ಭವನದ ಮೊದಲ ಮಹಡಿಯಲ್ಲಿ ನಿರ್ಮಿಸಲಾಗಿರುವ ಹರಿದಾಸ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವನ್ನು ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಗುವುದು.
ಇದು ನಾಡಿನ ಪ್ರಥಮ ಹರಿದಾಸ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವಾಗಲಿದೆ ಎಂದು ಟ್ರಸ್ಟ್ ತಿಳಿಸಿದೆ.
ಕೇಂದ್ರದಲ್ಲಿ ಸುಮಾರು 20 ಸಾವಿರ ಕೃತಿಗಳನ್ನು ಸಂಗ್ರಹಿಸಬಹುದಾದ ದಾಸ ಸಾಹಿತ್ಯ ಗ್ರಂಥಾಲಯ, ಡಿಜಿಟಲ್ ಹಸ್ತಪ್ರತಿ ಸಂಗ್ರಹಾಲಯ, ಸಂಶೋಧಕರ ಕೊಠಡಿ, ವಿವಿಧ ಹರಿದಾಸರ ಜೀವನ ಮತ್ತು ಸಾಹಿತ್ಯದ ಕುರಿತು ಮಾಹಿತಿ ನೀಡುವ ಹರಿದಾಸರ ಹೆರಿಟೇಜ್ ಸೆಂಟರ್, ವಿಶಾಲ ಸಂಕೀರ್ತನೆ ಭವನ ಹಾಗೂ ಧ್ಯಾನ ಮಂದಿರ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ದಾಸ ಸಾಹಿತ್ಯ ಮತ್ತು ವೇದವಿಜ್ಞಾನದಲ್ಲಿ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನೆ ನಡೆಸಲು ಅಮೆರಿಕದ ಯೋಗ ಸಂಸ್ಕೃತಮ್ ವಿಶ್ವವಿದ್ಯಾಲಯ, ಫ್ಲೋರಿಡಾ, ತಾತ್ವಿಕವಾಗಿ ಅನುಮೋದನೆ ಸೂಚಿಸಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಈಗಾಗಲೇ ನಾಲ್ವರು ಸಂಶೋಧಕರು ಕೇಂದ್ರದ ಮೂಲಕ ಸಂಶೋಧನಾ ಕಾರ್ಯದಲ್ಲಿ ತೊಡಗಿದ್ದಾರೆ.
700 ಕೃತಿಗಳ ಸಂಶೋಧನೆ, ಸಂಪಾದನೆ
ಪ್ರಸನ್ನವೆಂಕಟ ದಾಸರ ಸಾಹಿತ್ಯದ ಕುರಿತು ನಡೆದಿರುವ ಸಂಶೋಧನೆಯಿಂದ ಅವರ ಕೃತಿಗಳ ಸಂಖ್ಯೆ ಗಣನೀಯವಾಗಿ ಬೆಳಕಿಗೆ ಬಂದಿದೆ. 1950ರ ದಶಕದಲ್ಲಿ ಪ್ರಸನ್ನವೆಂಕಟ ದಾಸರ ಸಾಹಿತ್ಯದ ಕುರಿತು ಸಂಶೋಧನೆ ನಡೆಸಿದ ಡಾ.ಎ.ಟಿ. ಪಾಟೀಲರು ತಮ್ಮ ಕೃತಿಯಲ್ಲಿ ಪ್ರಸನ್ನವೆಂಕಟ ದಾಸರ 239 ಕೃತಿಗಳನ್ನು ಪ್ರಕಟಿಸಿದ್ದರು.
ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿದ ಸಮಗ್ರ ದಾಸ ಸಂಪುಟದಲ್ಲಿ ಪ್ರಸನ್ನವೆಂಕಟ ದಾಸರ ಇನ್ನೂ 211 ಹೊಸ ಕೀರ್ತನೆಗಳನ್ನು ಸೇರಿಸಲಾಯಿತು. ಇದಾದ ಬಳಿಕ ಕಳೆದ 15 ವರ್ಷಗಳಲ್ಲಿ ವಿವಿಧ ಸಂಶೋಧಕರ ಸಹಕಾರದೊಂದಿಗೆ ಪ್ರಸನ್ನವೆಂಕಟ ದಾಸರ ಟ್ರಸ್ಟ್ ಮತ್ತಷ್ಟು 248 ಕೃತಿಗಳನ್ನು ಸಂಶೋಧಿಸಿ, ಸಂಪಾದಿಸಿ ದಾಖಲಿಸಿದೆ.
ಹೀಗೆ ನಡೆದ ನಿರಂತರ ಸಂಶೋಧನೆ ಹಾಗೂ ಸಂಪಾದನಾ ಕಾರ್ಯದಿಂದ ಪ್ರಸನ್ನವೆಂಕಟ ದಾಸರ ಒಟ್ಟು ಕೃತಿಗಳ ಸಂಖ್ಯೆ ಸುಮಾರು 700ಕ್ಕೆ ತಲುಪಿರುವುದು ದಾಸ ಸಾಹಿತ್ಯ ಕ್ಷೇತ್ರದ ಮಹತ್ವದ ಬೆಳವಣಿಗೆಯಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಡಾ.ಧೂಳಖೇಡ ನಾರಾಯಣಾಚಾರ್ಯ, ಡಾ.ಎ.ಬಿ. ಶ್ಯಾಮಾಚಾರ್ಯ, ಮಾಧವಾಚಾರ್ಯ ನಾಗಸಂಪಗಿ, ಭೀಮಸೇನಾಚಾರ್ಯ, ಎನ್.ಜಿ. ವಿಜಯಲಕ್ಷ್ಮೀ, ಅನಂತ ಕುಲಕರ್ಣಿ ಸೇರಿದಂತೆ ಹಲವು ವಿದ್ವಾಂಸರು ಹಾಗೂ ಸಂಶೋಧಕರು ಭಾಗವಹಿಸಲಿದ್ದಾರೆ. ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ವಿ.ಎನ್. ಖಂಡಕಿ, ಡಾ.ಎನ್.ಜಿ. ವಿಜಯಲಕ್ಷ್ಮೀ, ಶ್ರೀಕಾಂತ ಕುಲಕರ್ಣಿ, ಪ್ರಸನ್ನ ಕೊರ್ತಿ, ವಿಜಯ ದೇಶಪಾಂಡೆ ಸೇರಿದಂತೆ ಗಣ್ಯರು ಉಪಸ್ಥಿತರಿರುವರು.
ಪ್ರಸನ್ನವೆಂಕಟ ದಾಸರ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು, ದಾಸ ಸಾಹಿತ್ಯದ ಕುರಿತು ನಿರಂತರ ಅಧ್ಯಯನ ಮತ್ತು ಸಂಶೋಧನೆಗೆ ಉತ್ತೇಜನ ನೀಡುವುದು ಹಾಗೂ ಅಪರೂಪದ ಕೃತಿಗಳು ಮತ್ತು ಹಸ್ತಪ್ರತಿಗಳನ್ನು ಸಂರಕ್ಷಿಸುವ ಉದ್ದೇಶದಿಂದ ನಿರ್ಮಿಸಲಾಗಿರುವ ಈ ಕೇಂದ್ರವು ಬಾಗಲಕೋಟೆಯ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯಾಗಲಿದೆ ಎಂದು ಟ್ರಸ್ಟ್ನ ಪದಾಧಿಕಾರಿಗಳು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande