
ವಿಜಯಪುರ, 18 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ರೈತರ ಬಹುದಿನಗಳ ನಿರೀಕ್ಷೆಯಾಗಿರುವ ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ಮೂಲಕ ಕೃಷಿ ಚಟುವಟಿಕೆಗಳಿಗೆ ಅಗತ್ಯ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಆದ್ಯತೆ ನೀಡಲಾಗುತ್ತಿದೆ ಎಂದು ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಹೇಳಿದರು.
ವಿಜಯಪುರ ಜಿಲ್ಲೆಯ ನಾಗಠಾಣ ಮತಕ್ಷೇತ್ರದ ವ್ಯಾಪ್ತಿಯ ನಂದರಗಿ ಹಾಗೂ ಲೋಣಿ ಶಿರನಾಳ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕ ವಿಠ್ಠಲ ಕಟಕದೊಂಡ, ಹೂರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ ಮೂರನೇ ಹಂತದ ಕಾಮಗಾರಿಯ ಪ್ರಗತಿಯನ್ನು ಕೃಷ್ಣಾ ಭಾಗ್ಯ ಜಲನಿಗಮದ ಅಧಿಕಾರಿಗಳು ಹಾಗೂ ಸ್ಥಳೀಯ ರೈತರೊಂದಿಗೆ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಯೋಜನೆಯ ವಿವಿಧ ಕಾಮಗಾರಿಗಳ ಪ್ರಸ್ತುತ ಸ್ಥಿತಿ, ಪೂರ್ಣಗೊಂಡಿರುವ ಕಾಮಗಾರಿಗಳು, ಪ್ರಗತಿಯಲ್ಲಿರುವ ಕಾಮಗಾರಿಗಳು ಹಾಗೂ ಮುಂದಿನ ಹಂತದಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಕಾಮಗಾರಿಯ ಅನುಷ್ಠಾನದಲ್ಲಿ ಎದುರಾಗುತ್ತಿರುವ ಸಮಸ್ಯೆಗಳು ಹಾಗೂ ಅವುಗಳ ಪರಿಹಾರದ ಕುರಿತು ಅಧಿಕಾರಿಗಳು ಮತ್ತು ಸ್ಥಳೀಯ ರೈತರೊಂದಿಗೆ ಸಮಗ್ರವಾಗಿ ಚರ್ಚಿಸಿದರು.
ಕಾಮಗಾರಿಯ ವೇಗದ ಜೊತೆಗೆ ಗುಣಮಟ್ಟಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು. ಯಾವುದೇ ಕಾರಣಕ್ಕೂ ಕಾಮಗಾರಿಯ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬಾರದು. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡು, ಕಾಮಗಾರಿಯ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಶಾಸಕ ವಿಠ್ಠಲ ಕಟಕದೊಂಡ ಸೂಚನೆ ನೀಡಿದರು.
ನೀರಾವರಿ ಯೋಜನೆಗಳು ರೈತರ ಜೀವನದಲ್ಲಿ ಮಹತ್ವದ ಬದಲಾವಣೆಯನ್ನು ತರಬಲ್ಲವು. ಯೋಜನೆಯ ಮೂಲಕ ಈ ಭಾಗದ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ದೊರೆತಲ್ಲಿ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಬಲ ಸಿಗಲಿದ್ದು, ಬೆಳೆ ಉತ್ಪಾದನೆ ಹೆಚ್ಚಿಸುವುದರ ಜೊತೆಗೆ ರೈತರ ಆರ್ಥಿಕ ಸ್ಥಿತಿಗೂ ಅನುಕೂಲವಾಗಲಿದೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.
ಸ್ಥಳೀಯ ರೈತರು ಹಲವು ವರ್ಷಗಳಿಂದ ಹೂರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ ಪೂರ್ಣ ಅನುಷ್ಠಾನಕ್ಕಾಗಿ ನಿರೀಕ್ಷಿಸುತ್ತಿದ್ದಾರೆ. ರೈತರ ಈ ನಿರೀಕ್ಷೆ ಹಾಗೂ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಯೋಜನೆಯ ಕಾಮಗಾರಿಯ ಪ್ರಗತಿಯನ್ನು ನಿರಂತರವಾಗಿ ಗಮನಿಸಲಾಗುವುದು. ಕಾಮಗಾರಿ ಅನುಷ್ಠಾನದಲ್ಲಿ ಅಗತ್ಯವಿರುವ ಸಹಕಾರ ಹಾಗೂ ಮಾರ್ಗದರ್ಶನವನ್ನು ನೀಡಲಾಗುವುದು ಎಂದು ಶಾಸಕ ಕಟಕದೊಂಡ ಭರವಸೆ ನೀಡಿದರು.
ಈ ವೇಳೆ ಕೃಷ್ಣಾ ಭಾಗ್ಯ ಜಲನಿಗಮದ ಅಧಿಕಾರಿಗಳು, ಸ್ಥಳೀಯ ರೈತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ರೈತರ ಹಿತವೇ ಆದ್ಯತೆ; ನೀರಾವರಿ ಅಭಿವೃದ್ಧಿಯೇ ಸಂಕಲ್ಪ ಎಂಬ ನಿಲುವಿನೊಂದಿಗೆ ಮತಕ್ಷೇತ್ರದಲ್ಲಿ ನೀರಾವರಿ ಕಾಮಗಾರಿಗಳಿಗೆ ವೇಗ ನೀಡಲಾಗುತ್ತಿದೆ ಎಂದು ಶಾಸಕ ವಿಠ್ಠಲ ಕಟಕದೊಂಡ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande