
ಉಜ್ಜಯಿನಿ, 18 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಧರ್ಮ ಎಂದರೆ ಧರ್ಮಮತವಲ್ಲ, ಅದು ಜೀವನದ ಶಿಸ್ತು. ಯಾವುದೇ ಆಸೆ ಈಡೇರಿಸಿಕೊಳ್ಳಲು, ಭಯ, ಲೋಭ ಅಥವಾ ಪ್ರಾಣ ಉಳಿಸಿಕೊಳ್ಳುವ ಕಾರಣಕ್ಕೂ ಧರ್ಮವನ್ನು ತ್ಯಜಿಸಬಾರದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹೇಳಿದರು.
ಮಧ್ಯಪ್ರದೇಶದ ಉಜ್ಜಯಿನಿಯ ದೇವಾಸ್ ರಸ್ತೆಯ ಗೀತಾ ಭವನದಲ್ಲಿ ಶುಕ್ರವಾರ ನಡೆದ ಮೂರು ದಿನಗಳ ಯುವ ಧರ್ಮ ಸಂಸತ್–2026ರ ಎರಡನೇ ಉದ್ಘಾಟನಾ ಅಧಿವೇಶನದಲ್ಲಿ ಅವರು ಮಾತನಾಡಿದರು. ದೀಪ ಬೆಳಗಿಸಿ ಹಾಗೂ ವಂದೇ ಮಾತರಂನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಯುವಕರಿಗೆ ಧರ್ಮದ ನೈಜ ಅರ್ಥ ಮತ್ತು ಜೀವನದಲ್ಲಿ ಅದರ ಮಹತ್ವದ ಕುರಿತು ಮಾರ್ಗದರ್ಶನ ನೀಡಿದರು.
ಧರ್ಮ ಮತ್ತು ರಿಲಿಜನ್ ನಡುವಿನ ವ್ಯತ್ಯಾಸವನ್ನು ವಿವರಿಸಿದ ಭಾಗವತ್, ರಿಲಿಜನ್‌ಗೆ ಧರ್ಮ ಎಂಬುದು ನಿಖರವಾದ ಸಮಾನಾರ್ಥಕ ಪದವಲ್ಲ. ಧರ್ಮ ಯಾರನ್ನೂ ಬಂಧಿಸುವುದಿಲ್ಲ, ಬದಲಾಗಿ ಮುಕ್ತಿಯತ್ತ ಕೊಂಡೊಯ್ಯುತ್ತದೆ ಎಂದರು. ಧರ್ಮಕ್ಕೆ ಸಂಬಂಧಿಸಿದ ಆಚರಣೆಗಳು ಅದರ ಒಂದು ಭಾಗವಾಗಿದ್ದು, ಅವೇ ಸಂಪೂರ್ಣ ಧರ್ಮವಲ್ಲ ಎಂದು ಹೇಳಿದರು.
ಸುಖ-ದುಃಖಗಳು ಬಂದು ಹೋಗುತ್ತವೆ, ಆದರೆ ಧರ್ಮ ಶಾಶ್ವತವಾಗಿರುತ್ತದೆ. ಧರ್ಮವು ವೃದ್ಧಾಪ್ಯದಲ್ಲಿ ಮಾತ್ರ ಅನುಸರಿಸುವ ವಿಷಯವಲ್ಲ. ಜೀವನದ ಆರಂಭದಿಂದ ಅಂತ್ಯದವರೆಗೂ ಧರ್ಮಕ್ಕೆ ಮಹತ್ವವಿದೆ ಎಂದು ಅವರು ಹೇಳಿದರು.
ಯುವಕರಿಗೆ ಧರ್ಮ ಸರಿಯಾದ ದಿಕ್ಕು ತೋರಿಸುತ್ತದೆ. ಜೀವನದಲ್ಲಿ ಧರ್ಮದ ಮೂಲಕ ಕಾಮ, ಅರ್ಥ ಮತ್ತು ಮೋಕ್ಷದ ಪ್ರಾಪ್ತಿಗೆ ದಾರಿ ದೊರೆಯುತ್ತದೆ. ಯಾರಿಗೂ ನೋವು ನೀಡದಿರುವುದೇ ಅತ್ಯಂತ ದೊಡ್ಡ ಧರ್ಮವಾಗಿದ್ದು, ನೋವು ನೀಡುವುದು ಮಹಾಪಾಪ ಎಂದು ಭಾಗವತ್ ಹೇಳಿದರು.
ಸೆ.17ರಿಂದ 19ರವರೆಗೆ ಉಜ್ಜಯಿನಿಯಲ್ಲಿ ಯುವ ಧರ್ಮ ಸಂಸತ್–2026 ಆಯೋಜಿಸಲಾಗಿದೆ. ದೇಶದ ವಿವಿಧ ಭಾಗಗಳಿಂದ ಸುಮಾರು 1,700 ಯುವ ವಿದ್ಯಾರ್ಥಿಗಳು ಹಾಗೂ 300ಕ್ಕೂ ಹೆಚ್ಚು ವಿದ್ವಾಂಸರು, ಶಿಕ್ಷಕರು, ಸಂಶೋಧಕರು ಮತ್ತು ಧರ್ಮಾಚಾರ್ಯರು ಭಾಗವಹಿಸುತ್ತಿದ್ದಾರೆ. ಕಥೆ ಬರಹಗಾರ ಹಾಗೂ ಗೀತರಚನೆಕಾರ ಮನೋಜ್ ಮುಂತಶಿರ್ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಸೆ.19ರಂದು ನಡೆಯುವ ಸಮಾರೋಪ ಅಧಿವೇಶನದಲ್ಲಿ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಭಾಗವಹಿಸಲಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.