
ನವದೆಹಲಿ, 18 ಸೆಪ್ಟೆಂಬರ್ (ಹಿ.ಸ):
ಆ್ಯಂಕರ್:
ಶಿಶು ಆಹಾರ ತಯಾರಿಸುವ ನೆಸ್ಲೆ ಇಂಡಿಯಾ ಲಿಮಿಟೆಡ್‌ನ ಎರಡು ಘಟಕಗಳ ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಕ್ರಮ ಆರಂಭಿಸಿದೆ.
ನೆಸ್ಲೆ ಇಂಡಿಯಾದ ಪ್ರಮುಖ ಉತ್ಪನ್ನಗಳಾದ ‘ನಾನ್ ಎಕ್ಸೆಲಾ ಪ್ರೊ ಸ್ಟೇಜ್ 1’ ಮತ್ತು ‘ಲ್ಯಾಕ್ಟೋಜೆನ್ ಪ್ರೊ 1’ ಕುರಿತು ನಡೆಸಿದ ಪರಿಶೀಲನೆಯ ಬಳಿಕ ಶುಕ್ರವಾರ ಪ್ರಾಧಿಕಾರ ಕ್ರಮಕ್ಕೆ ಆದೇಶಿಸಿದೆ.
ಆನ್‌ಲೈನ್ ವಾಣಿಜ್ಯ ವೇದಿಕೆಗಳಲ್ಲಿ ಮಾರಾಟವಾಗುತ್ತಿದ್ದ ಉತ್ಪನ್ನಗಳ ಪರಿಶೀಲನೆ ವೇಳೆ, ಐದು ಎಚ್‌ಎಂಒಗಳು, ಹಾಲೊಡಕು ಪ್ರೋಟೀನ್ ಹಾಗೂ ಸುಲಭವಾಗಿ ಜೀರ್ಣವಾಗುವ ಹಾಲೊಡಕು ಪ್ರೋಟೀನ್ ಸೇರಿದಂತೆ ಹಲವು ಅಂಶಗಳ ಕುರಿತು ಉತ್ಪನ್ನದ ಮೇಲೆ ಪ್ರಚಾರಾತ್ಮಕ ಹೇಳಿಕೆಗಳನ್ನು ನೀಡಿರುವುದು ಪತ್ತೆಯಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.
ನಿಯಮಗಳ ಪ್ರಕಾರ ಶಿಶು ಆಹಾರ ಉತ್ಪನ್ನಗಳ ಮಾರಾಟವನ್ನು ಉತ್ತೇಜಿಸುವ ರೀತಿಯ ಹೇಳಿಕೆಗಳು ಹಾಗೂ ಜಾಹೀರಾತುಗಳಿಗೆ ನಿರ್ಬಂಧವಿದೆ. ಇಂತಹ ಹೇಳಿಕೆಗಳು 2020ರ ಶಿಶು ಪೋಷಣಾ ನಿಯಮಗಳು ಹಾಗೂ 1992ರ ಶಿಶು ಹಾಲಿನ ಪರ್ಯಾಯಗಳ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.
ಇದಲ್ಲದೆ, ಕಂಪನಿಯ ಫಾಲೋಅಪ್ ಫಾರ್ಮುಲಾದ ಒಂದು ಮಾದರಿಯ ಪ್ರಯೋಗಾಲಯ ಪರೀಕ್ಷೆಯಲ್ಲಿ ಬಯೋಟಿನ್ ಪ್ರಮಾಣ ನಿಗದಿತ ಮಾನದಂಡಕ್ಕಿಂತ ಕಡಿಮೆ ಇರುವುದು ಪತ್ತೆಯಾಗಿದೆ. ಮರುಪರಿಶೀಲನೆಗೆ ಕಳುಹಿಸಿದ ಬಳಿಕವೂ ಮಾದರಿ ನಿಗದಿತ ಮಾನದಂಡಗಳನ್ನು ಪೂರೈಸಿಲ್ಲ ಎಂದು ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ನೆಸ್ಲೆ ಇಂಡಿಯಾ ವಿರುದ್ಧ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಕ್ರಮ ಆರಂಭಿಸಲಾಗಿದೆ ಎಂದು ಎಫ್‌ಎಸ್‌ಎಸ್‌ಎಐ ತಿಳಿಸಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.