
ರಜೌರಿ, 18 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಜಮ್ಮು-ಕಾಶ್ಮೀರದ ರಾಜೌರಿ ಪೊಲೀಸರು ನಾಲ್ಕು ದಿನಗಳ ಹಿಂದೆ ಬಂಧಿಸಿದ್ದ ಮೂವರು ಭಯೋತ್ಪಾದಕ ಬೆಂಬಲಿಗರು ನಿಷೇಧಿತ ಲಷ್ಕರ್-ಎ-ತಯ್ಬಾ ಸಂಘಟನೆಗೆ ಸಂಪರ್ಕ ಹೊಂದಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಶುಕ್ರವಾರ ತಿಳಿಸಿದ್ದಾರೆ.
ಬಂಧಿತರು ಭಯೋತ್ಪಾದಕರಿಗೆ ಆಶ್ರಯ ನೀಡುವುದಲ್ಲದೆ, ಅವರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯಲು ನೆರವಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಸ್ಥಳಗಳ ಮೇಲೆ ನಡೆಸಿದ ದಾಳಿ ವೇಳೆ ಒಂದು ಪಿಸ್ತೂಲ್, ಮ್ಯಾಗಜಿನ್, ಗುಂಡುಗಳು ಹಾಗೂ ಎರಡು ಚೀನೀ ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ರಾಜೌರಿಯ ಕೋಟ್ಚರ್ವಾಲ್ ಗ್ರಾಮದ ನಿವಾಸಿಗಳಾದ ಮೊಹಮ್ಮದ್ ಆಜಂ, ಜಾಕಿರ್ ಹುಸೇನ್ ಮತ್ತು ಮೊಹಮ್ಮದ್ ಮುಷ್ತಾಕ್ ಅವರನ್ನು ಸೆ.14ರಂದು ಲಷ್ಕರ್-ಎ-ತಯ್ಬಾಗೆ ಸಂಬಂಧಿಸಿದ ಭಯೋತ್ಪಾದಕ ಸಂಘಟನೆಯ ವ್ಯವಸ್ಥಾಪನಾ ನೆರವು ಜಾಲವನ್ನು ಪತ್ತೆಹಚ್ಚಿದ ಬಳಿಕ ಬಂಧಿಸಲಾಗಿತ್ತು.
ಮೂವರು ಹಲವು ವರ್ಷಗಳಿಂದ ಸಕ್ರಿಯರಾಗಿದ್ದು, ರಾಜೌರಿ-ರಿಯಾಸಿ ಪ್ರದೇಶದಿಂದ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯವರೆಗೆ ಹಲವು ಭಯೋತ್ಪಾದಕ ಗುಂಪುಗಳ ಸಂಚಾರಕ್ಕೆ ನೆರವು ನೀಡುತ್ತಿದ್ದರು ಎಂಬ ಆರೋಪವಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
2023ರಲ್ಲಿ ರಿಯಾಸಿ ಜಿಲ್ಲೆಯ ಚಸಾನಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತರಾದ ಭಯೋತ್ಪಾದಕರಿಗೆ ನೆರವು, ಆಶ್ರಯ ಹಾಗೂ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿರುವಲ್ಲಿಯೂ ಆರೋಪಿಗಳ ಪಾತ್ರವಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದ್ದಾರೆ.
ಬಂಧನದ ಬಳಿಕ ಆರೋಪಿಗಳ ಮಾಹಿತಿ ಮೇರೆಗೆ ಅವರ ಗ್ರಾಮದ ಸಮೀಪದ ಅರಣ್ಯ ಪ್ರದೇಶದಿಂದ ಶಕ್ತಿಶಾಲಿ ಸುಧಾರಿತ ಸ್ಫೋಟಕ ಸಾಧನವೊಂದನ್ನು ವಶಪಡಿಸಿಕೊಳ್ಳಲಾಗಿತ್ತು. ಗುರುವಾರ ಆರೋಪಿಗಳ ಮಾಹಿತಿ ಮೇರೆಗೆ ಅವರ ಸ್ಥಳದಿಂದ ಪಿಸ್ತೂಲ್, ಮ್ಯಾಗಜಿನ್, ಗುಂಡುಗಳು ಹಾಗೂ ಎರಡು ಚೀನೀ ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಯೋತ್ಪಾದಕರ ಸಂಚಾರಕ್ಕೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುವುದರ ಜತೆಗೆ, ರಾಜೌರಿ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಹಲವು ಪ್ರಮುಖ ದಾಳಿಗಳಿಗೆ ಸಂಬಂಧಿಸಿದ ಭಯೋತ್ಪಾದಕರಿಗೆ ನೆಲಮಟ್ಟದ ನೆರವು ನೀಡಿರುವ ಬಗ್ಗೆಯೂ ಆರೋಪಿಗಳ ಮೇಲೆ ಶಂಕೆಯಿದೆ ಎಂದು ಪೊಲೀಸ್ ವಕ್ತಾರರು ಹೇಳಿದ್ದಾರೆ.
ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಆರೋಪಿಗಳು ಸುರಕ್ಷಿತವಾಗಿ ಇರಿಸಿಕೊಳ್ಳಲು ಹಾಗೂ ಭವಿಷ್ಯದಲ್ಲಿ ಸಂಭವನೀಯ ದಾಳಿಗಳಿಗೆ ಬಳಸಲು ಅವರಿಗೆ ನೀಡಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಅವರು ತಿಳಿಸಿದ್ದಾರೆ.
ಭಯೋತ್ಪಾದಕ ಜಾಲದ ಸಂಪೂರ್ಣ ವಿವರ ಪತ್ತೆಹಚ್ಚುವುದು, ಹೆಚ್ಚುವರಿ ಸಹಚರರನ್ನು ಗುರುತಿಸುವುದು ಹಾಗೂ ಆರೋಪಿಗಳ ಪಾತ್ರದ ಸಂಪೂರ್ಣ ವ್ಯಾಪ್ತಿಯನ್ನು ತಿಳಿಯಲು ತನಿಖೆ ಮುಂದುವರಿದಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.