ಸ್ಟೆಮ್ ಸೆಲ್ ಚಿಕಿತ್ಸೆಗೆ ಆರೋಗ್ಯ ಸಚಿವಾಲಯದ ಸಲಹೆ: ಸ್ವಲೀನತೆ ಚಿಕಿತ್ಸೆಗೆ ಅನುಮೋದಿತ ಕ್ಲಿನಿಕಲ್ ಪ್ರಯೋಗ ಮಾತ್ರ
ನವದೆಹಲಿ, 17 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಸ್ಟೆಮ್‌ ಸೆಲ್ ಚಿಕಿತ್ಸೆಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ಹೊರಡಿಸಿದೆ. ಸಚಿವಾಲಯ ಅನುಮೋದಿಸಿರುವ ರೋಗಗಳು ಮತ್ತು ನಿರ್ದಿಷ್ಟ ವೈದ್ಯಕೀಯ ಪರಿಸ್ಥ
स्वास्थ्य मंत्रालय का लोगो


ನವದೆಹಲಿ, 17 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಸ್ಟೆಮ್‌ ಸೆಲ್ ಚಿಕಿತ್ಸೆಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ಹೊರಡಿಸಿದೆ. ಸಚಿವಾಲಯ ಅನುಮೋದಿಸಿರುವ ರೋಗಗಳು ಮತ್ತು ನಿರ್ದಿಷ್ಟ ವೈದ್ಯಕೀಯ ಪರಿಸ್ಥಿತಿಗಳಲ್ಲಿ ಮಾತ್ರ ಸ್ಟೆಮ್‌ ಸೆಲ್ ಚಿಕಿತ್ಸೆಯನ್ನು ನಿಯಮಿತ ಹಾಗೂ ಪ್ರಮಾಣಿತ ಚಿಕಿತ್ಸೆಯಾಗಿ ಬಳಸಬಹುದು ಎಂದು ಸ್ಪಷ್ಟಪಡಿಸಿದೆ.

ಸೆ.16ರಂದು ಹೊರಡಿಸಲಾದ ಸಲಹೆಯಲ್ಲಿ, ಸ್ವಲೀನತಾ ಸ್ಪೆಕ್ಟ್ರಂ ಅಸ್ವಸ್ಥತೆ (ಎಎಸ್‌ಡಿ) ಚಿಕಿತ್ಸೆಗೆ ಯಾವುದೇ ರೀತಿಯ ಸ್ಟೆಮ್‌ ಸೆಲ್ ಚಿಕಿತ್ಸೆಯನ್ನು ಸದ್ಯಕ್ಕೆ ವಿಧಿವತ್ತಾಗಿ ಅನುಮೋದಿಸಲಾದ ಕ್ಲಿನಿಕಲ್ ಪ್ರಯೋಗಗಳ ಅಡಿಯಲ್ಲಿ ಮಾತ್ರ ನೀಡಬಹುದು ಎಂದು ತಿಳಿಸಲಾಗಿದೆ. ಇದಕ್ಕಾಗಿ 2017ರ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ-ಜೈವಿಕ ತಂತ್ರಜ್ಞಾನ ಇಲಾಖೆ ರಾಷ್ಟ್ರೀಯ ಸ್ಟೆಮ್‌ ಸೆಲ್ ಸಂಶೋಧನಾ ಮಾರ್ಗಸೂಚಿಗಳು ಹಾಗೂ ಕಾಲಕಾಲಕ್ಕೆ ಹೊರಡಿಸಲಾದ ಇತರ ಸರ್ಕಾರಿ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.

ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳನ್ನು ಸಂಬಂಧಪಟ್ಟ ರಾಜ್ಯ ಮತ್ತು ಜಿಲ್ಲಾ ನಿಯಂತ್ರಣ ಪ್ರಾಧಿಕಾರಗಳು ಹಾಗೂ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ವ್ಯಾಪಕವಾಗಿ ತಲುಪಿಸುವಂತೆ ಆರೋಗ್ಯ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಸ್ಟೆಮ್‌ ಸೆಲ್ ಸಂಶೋಧನೆ, ಚಿಕಿತ್ಸೆ, ಪ್ರಚಾರ ಅಥವಾ ಅದರ ಬಳಕೆಯಲ್ಲಿ ತೊಡಗಿರುವ ಸಂಸ್ಥೆಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಲಾಗಿದೆ.

ಪ್ರಮಾಣೀಕರಿಸದ ಸ್ಟೆಮ್‌ ಸೆಲ್ ಚಿಕಿತ್ಸೆಯನ್ನು, ಅದರಲ್ಲೂ ಸ್ವಲೀನತೆಗಾಗಿ ನೀಡುವ ಸ್ಟೆಮ್‌ ಸೆಲ್ ಚಿಕಿತ್ಸೆಯನ್ನು ನಿಯಮಿತ, ಪ್ರಮಾಣಿತ ಅಥವಾ ವಾಣಿಜ್ಯ ವೈದ್ಯಕೀಯ ಸೇವೆಯಾಗಿ ಒದಗಿಸಲು ಸಾಧ್ಯವಿಲ್ಲ ಎಂದು ಸಲಹೆಯಲ್ಲಿ ಸ್ಪಷ್ಟಪಡಿಸಲಾಗಿದೆ.

2026ರ ಜನವರಿ 30ರಂದು ‘ಯಶ್ ಚಾರಿಟಬಲ್ ಟ್ರಸ್ಟ್ ಮತ್ತು ಇತರರು ವಿರುದ್ಧ ಭಾರತ ಸರ್ಕಾರ’ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಈ ಸಲಹೆ ಹೊರಡಿಸಲಾಗಿದೆ. ನಿಯಮಗಳನ್ನು ಪಾಲಿಸದಿದ್ದಲ್ಲಿ ವೃತ್ತಿಪರ ದುರಾಚಾರ ಸೇರಿದಂತೆ ಕಾನೂನು ಹಾಗೂ ನಿಯಂತ್ರಣಾತ್ಮಕ ಕ್ರಮ ಕೈಗೊಳ್ಳಬಹುದು ಎಂದು ನ್ಯಾಯಾಲಯ ತಿಳಿಸಿತ್ತು.

ನಿಯಮ ಉಲ್ಲಂಘನೆಯಾದರೆ ಸಂಬಂಧಪಟ್ಟ ವೈದ್ಯರ ವಿರುದ್ಧ ವೃತ್ತಿಪರ ದುರಾಚಾರದ ಕ್ರಮ ಕೈಗೊಳ್ಳಬಹುದು ಎಂದು ಸಚಿವಾಲಯ ತಿಳಿಸಿದೆ. ಅಲ್ಲದೆ, 2010ರ ಕ್ಲಿನಿಕಲ್ ಎಸ್ಟಾಬ್ಲಿಷ್‌ಮೆಂಟ್ಸ್ ಕಾಯ್ದೆಯಡಿ ಸಂಸ್ಥೆಯ ನೋಂದಣಿ ರದ್ದುಪಡಿಸುವುದು, ದಂಡ ವಿಧಿಸುವುದು ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಲು ಅವಕಾಶವಿದೆ ಎಂದು ಹೇಳಿದೆ.

ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದಲೂ ಸ್ಪಷ್ಟನೆ

ರಾಷ್ಟ್ರೀಯ ವೈದ್ಯಕೀಯ ಆಯೋಗವು ಸೆ.5ರಂದು ಹೊರಡಿಸಿದ ಸಲಹೆಯಲ್ಲೂ ಇದೇ ವಿಚಾರವನ್ನು ಪುನರುಚ್ಚರಿಸಿದೆ. ಅನುಮೋದಿಸಲಾದ ರೋಗಗಳು ಮತ್ತು ವೈದ್ಯಕೀಯ ಸೂಚನೆಗಳಿಗೆ ಮಾತ್ರ ಸ್ಟೆಮ್‌ ಸೆಲ್ ಚಿಕಿತ್ಸೆಯನ್ನು ಪ್ರಮಾಣಿತ ವೈದ್ಯಕೀಯ ಸೇವೆಯಾಗಿ ನೀಡಬಹುದು ಎಂದು ಆಯೋಗ ತಿಳಿಸಿದೆ.

ಅನುಮೋದಿತ ವ್ಯಾಪ್ತಿಯ ಹೊರಗೆ ಸ್ಟೆಮ್‌ ಸೆಲ್ ಚಿಕಿತ್ಸೆಯನ್ನು ಅನುಮತಿಯಿಲ್ಲದೆ ಬಳಸುವುದು, ಶಿಫಾರಸು ಮಾಡುವುದು, ಪ್ರಚಾರ ಮಾಡುವುದು ಅಥವಾ ಜಾಹೀರಾತು ನೀಡುವುದನ್ನು ವೃತ್ತಿಪರ ದುರಾಚಾರವೆಂದು ಪರಿಗಣಿಸಬಹುದು ಎಂದು ಆಯೋಗ ಎಚ್ಚರಿಸಿದೆ.

ನಿಯಮ ಉಲ್ಲಂಘನೆಗೆ ಸಂಬಂಧಿಸಿದ ದೂರುಗಳನ್ನು ಪರಿಶೀಲಿಸುವಂತೆ ರಾಜ್ಯ ವೈದ್ಯಕೀಯ ಮಂಡಳಿಗಳಿಗೆ ಸೂಚಿಸಲಾಗಿದ್ದು, ಸೂಕ್ತ ಪ್ರಕ್ರಿಯೆ ಬಳಿಕ ಉಲ್ಲಂಘನೆ ಸಾಬೀತಾದರೆ ಸಂಬಂಧಪಟ್ಟ ವೈದ್ಯರ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande