
ನವದೆಹಲಿ, 16 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಯುಪಿಐ ವಹಿವಾಟುಗಳಿಗೆ ಎಂಡಿಆರ್ ಶುಲ್ಕಕ್ಕೆ ಸಂಬಂಧಿಸಿದ ಹೊಸ ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ ಗ್ರಾಹಕರಲ್ಲಿ ಉಂಟಾಗಿರುವ ಗೊಂದಲಕ್ಕೆ ಕೇಂದ್ರ ಹಣಕಾಸು ಸಚಿವಾಲಯ ಹಾಗೂ ಎನ್ಪಿಸಿಐ ಸ್ಪಷ್ಟನೆ ನೀಡಿವೆ.
ಅಕ್ಟೋಬರ್ 15ರಿಂದ ಹೊಸ ಎಂಡಿಆರ್ ನಿಯಮಗಳು ಜಾರಿಗೆ ಬರಲಿದ್ದು, ಸಾಮಾನ್ಯ ಗ್ರಾಹಕರು ನಡೆಸುವ ಬಹುತೇಕ ದೈನಂದಿನ ಯುಪಿಐ ವಹಿವಾಟುಗಳು ಉಚಿತವಾಗಿಯೇ ಮುಂದುವರಿಯಲಿವೆ.
ಕೇಂದ್ರ ಹಣಕಾಸು ಸಚಿವಾಲಯ ಹಾಗೂ ಎನ್ಪಿಸಿಐ ಸ್ಪಷ್ಟಪಡಿಸಿರುವಂತೆ, ವ್ಯಕ್ತಿಯಿಂದ ವ್ಯಕ್ತಿಗೆ (P2P) ಮಾಡುವ ಯುಪಿಐ ಪಾವತಿಗಳಿಗೆ ಯಾವುದೇ ಎಂಡಿಆರ್ ಶುಲ್ಕ ಇರುವುದಿಲ್ಲ. ಸ್ನೇಹಿತರು, ಕುಟುಂಬಸ್ಥರು ಅಥವಾ ಇತರ ವ್ಯಕ್ತಿಗಳ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವಾಗ ಮೊತ್ತದ ಆಧಾರದ ಮೇಲೆ ಎಂಡಿಆರ್ ವಿಧಿಸಲಾಗುವುದಿಲ್ಲ.
ಅದೇ ರೀತಿ, ವ್ಯಾಪಾರಿಗಳಿಗೆ ಮಾಡುವ ₹2,000 ವರೆಗಿನ ಪಾವತಿಗಳಿಗೂ ಶೂನ್ಯ ಎಂಡಿಆರ್ ನಿಯಮ ಅನ್ವಯವಾಗಲಿದೆ. ದಿನಸಿ ಅಂಗಡಿ, ಸೂಪರ್ಮಾರ್ಕೆಟ್ ಸೇರಿದಂತೆ ಸಾಮಾನ್ಯ ವ್ಯಾಪಾರಿಗಳಿಗೆ ₹2,000 ವರೆಗಿನ ಯುಪಿಐ ಪಾವತಿಗಳು ಉಚಿತವಾಗಿರಲಿವೆ.
ತಿಂಗಳಿಗೆ ₹1 ಲಕ್ಷದವರೆಗೆ ವಹಿವಾಟು ನಡೆಸುವ ಬೀದಿಬದಿ ವ್ಯಾಪಾರಿಗಳು ಹಾಗೂ ಸಣ್ಣ ವರ್ತಕರ ಯುಪಿಐ ಕ್ಯೂಆರ್ ಕೋಡ್ಗಳಿಗೆ ಮಾಡುವ ಪಾವತಿಗಳಿಗೂ ಎಂಡಿಆರ್ ಮಿತಿಯಿಂದ ವಿನಾಯಿತಿ ನೀಡಲಾಗಿದೆ. ಸಾಮಾನ್ಯ ಗ್ರಾಹಕರಿಗೆ ತಿಂಗಳಿಗೆ ನಿರ್ದಿಷ್ಟ ಸಂಖ್ಯೆಯ ಉಚಿತ ವಹಿವಾಟುಗಳ ಮಿತಿ ಇರುವುದಿಲ್ಲ ಎಂದು ತಿಳಿಸಲಾಗಿದೆ.
ಗೂಗಲ್ ಪೇ, ಫೋನ್ಪೇ, ಪೇಟಿಎಂನಂತಹ ಯುಪಿಐ ಆ್ಯಪ್ಗಳು ಗ್ರಾಹಕರಿಂದ ಹೆಚ್ಚುವರಿ ಪ್ಲಾಟ್ಫಾರ್ಮ್ ಶುಲ್ಕ ಅಥವಾ ಸೇವಾ ಶುಲ್ಕ ವಿಧಿಸುವಂತಿಲ್ಲ. ದೊಡ್ಡ ವ್ಯಾಪಾರಿಗಳಿಗೆ ಅನ್ವಯಿಸುವ ಎಂಡಿಆರ್ ಶುಲ್ಕವನ್ನು ಗ್ರಾಹಕರಿಂದ ಪ್ರತ್ಯೇಕವಾಗಿ ವಸೂಲಿ ಮಾಡದಂತೆ ಬ್ಯಾಂಕ್ಗಳಿಗೆ ಸೂಚಿಸಲಾಗಿದೆ.
₹2,000 ಮೇಲ್ಪಟ್ಟ ಪಾವತಿಗೆ ಎಂಡಿಆರ್₹2,000ಕ್ಕಿಂತ ಹೆಚ್ಚಿನ ಮೊತ್ತವನ್ನು ವ್ಯಾಪಾರಿಗಳಿಗೆ ಯುಪಿಐ ಮೂಲಕ ಪಾವತಿಸಿದಾಗ ಎಂಡಿಆರ್ ಅನ್ವಯವಾಗಲಿದೆ.
ಸಾಮಾನ್ಯ ವಾಣಿಜ್ಯ ವಹಿವಾಟುಗಳಿಗೆ ಶೇ.0.4ರಷ್ಟು ಎಂಡಿಆರ್ ಅಥವಾ ಗರಿಷ್ಠ ₹300 ಶುಲ್ಕದ ಮಿತಿ ಇರಲಿದೆ. ಉದಾಹರಣೆಗೆ ₹10,000 ಪಾವತಿಗೆ ₹40 ಹಾಗೂ ₹75,000 ಪಾವತಿಗೆ ₹300 ಎಂಡಿಆರ್ ಅನ್ವಯವಾಗುತ್ತದೆ. ₹75,000ಕ್ಕಿಂತ ಹೆಚ್ಚಿನ ವಹಿವಾಟಿಗೂ ಗರಿಷ್ಠ ₹300 ಮಿತಿ ಇರಲಿದೆ.
ರೈಲ್ವೆ, ಟೆಲಿಕಾಂ, ವಿಮೆ, ಇಂಧನ ಸೇರಿದಂತೆ ಅಗತ್ಯ ಸೇವೆಗಳ ವಲಯದಲ್ಲಿ ₹2,000ಕ್ಕಿಂತ ಹೆಚ್ಚಿನ ಯುಪಿಐ ಪಾವತಿಗೂ ಎಂಡಿಆರ್ ಗರಿಷ್ಠ ₹5ಕ್ಕೆ ಸೀಮಿತವಾಗಿರಲಿದೆ. ವಿದ್ಯುತ್, ಗ್ಯಾಸ್, ನೀರಿನ ಬಿಲ್ ಹಾಗೂ ಪೆಟ್ರೋಲ್ ಪಾವತಿಗಳಿಗೂ ಈ ಮಿತಿ ಅನ್ವಯವಾಗಲಿದೆ.
ಷೇರುಗಳು, ಇಟಿಎಫ್ ಹಾಗೂ ಮ್ಯೂಚುವಲ್ ಫಂಡ್ಗಳಿಗೆ ಸಂಬಂಧಿಸಿದ ಪಾವತಿಗಳಿಗೆ ಶೇ.0.02 ಅಥವಾ ಗರಿಷ್ಠ ₹300 ಎಂಡಿಆರ್ ನಿಗದಿಯಾಗಲಿದೆ. ಈ ಶುಲ್ಕದ ಹೊರೆ ಗ್ರಾಹಕರ ಬದಲಿಗೆ ಸಂಬಂಧಿತ ಹಣಕಾಸು ಸಂಸ್ಥೆಗಳು ಅಥವಾ ಮಧ್ಯವರ್ತಿಗಳ ಮೇಲಿರಲಿದೆ ಎಂದು ತಿಳಿಸಲಾಗಿದೆ.
ಕ್ರೆಡಿಟ್ ಕಾರ್ಡ್ ಬಳಕೆಗೆ ಪ್ರತ್ಯೇಕ ನಿಯಮಯುಪಿಐಗೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡಿ ಪಾವತಿ ಮಾಡುವ ಸಂದರ್ಭಗಳಲ್ಲಿ ಈ ಎಂಡಿಆರ್ ನಿಯಮಗಳು ಅನ್ವಯಿಸುವುದಿಲ್ಲ. ಅಂತಹ ವಹಿವಾಟುಗಳಿಗೆ ಕ್ರೆಡಿಟ್ ಕಾರ್ಡ್ಗೆ ಸಂಬಂಧಿಸಿದ ನಿಯಮಗಳು ಅನ್ವಯವಾಗಲಿವೆ.
ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಪಾವತಿಗಳಿಗೆ ಈಗಾಗಲೇ ಪ್ರತ್ಯೇಕ ಎಂಡಿಆರ್ ವ್ಯವಸ್ಥೆ ಜಾರಿಯಲ್ಲಿದ್ದು, ಯುಪಿಐ ಎಂಡಿಆರ್ಗೆ ಹೋಲಿಸಿದರೆ ಕಾರ್ಡ್ ವಹಿವಾಟುಗಳ ಶುಲ್ಕ ಪ್ರಮಾಣ ಭಿನ್ನವಾಗಿದೆ.
ಒಟ್ಟಾರೆ, ಹೊಸ ಎಂಡಿಆರ್ ಮಾರ್ಗಸೂಚಿಗಳು ಜಾರಿಗೆ ಬಂದರೂ ವ್ಯಕ್ತಿಯಿಂದ ವ್ಯಕ್ತಿಗೆ ಹಣ ವರ್ಗಾವಣೆ ಹಾಗೂ ₹2,000 ವರೆಗಿನ ಸಾಮಾನ್ಯ ಮರ್ಚೆಂಟ್ ಪಾವತಿಗಳು ಸೇರಿದಂತೆ ಬಹುತೇಕ ದೈನಂದಿನ ಯುಪಿಐ ವಹಿವಾಟುಗಳು ಗ್ರಾಹಕರಿಗೆ ಉಚಿತವಾಗಿಯೇ ಮುಂದುವರಿಯಲಿವೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R