
ನವದೆಹಲಿ, 16 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಶಿಕ್ಷಣದ ಉದ್ದೇಶ ಕೇವಲ ವೃತ್ತಿ ನಿರ್ಮಾಣವಲ್ಲ. ಶಿಕ್ಷಣದ ನೈಜ ಉದ್ದೇಶ ಮನುಷ್ಯ ನಿರ್ಮಾಣವಾಗಿದ್ದು, ಮನುಷ್ಯ ನಿರ್ಮಾಣದಿಂದಲೇ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹೇಳಿದರು.
ಐಐಎಲ್‌ಎಂ ವಿಶ್ವವಿದ್ಯಾಲಯ ಹಾಗೂ ಬೆನ್ಯಾನ್ ಟ್ರೀ ಶಾಲೆಯ ಸಹಯೋಗದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ 10ನೇ ತರಗತಿಯಿಂದ ಸ್ನಾತಕೋತ್ತರ ಪದವಿ ಹಂತದವರೆಗಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಭಾರತದಲ್ಲಿ ಅನೇಕ ಸಂತರು ನಿಯಮಿತ ಶಿಕ್ಷಣ ಪಡೆಯದಿದ್ದರೂ ಸಮಾಜಕ್ಕೆ ನಾಯಕತ್ವ ನೀಡಿದ್ದಾರೆ. ಅವರಲ್ಲಿದ್ದ ಮಾನವೀಯತೆಯ ಮಟ್ಟ ಅತ್ಯಂತ ಉನ್ನತವಾಗಿತ್ತು. ಹೀಗಾಗಿ ಆಧುನಿಕ ಶಿಕ್ಷಣದ ಜತೆಗೆ ಮಾನವೀಯ ಗುಣಗಳನ್ನು ಬೆಳೆಸುವ ಶಿಕ್ಷಣಕ್ಕೂ ಒತ್ತು ನೀಡುವ ಅಗತ್ಯವಿದೆ ಎಂದು ಹೇಳಿದರು.
ಇತ್ತೀಚೆಗೆ ಬಿಡುಗಡೆಯಾದ ‘ಹನುಮಾನ್ ಅಂಶ್’ ಚಲನಚಿತ್ರವನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಅವರು, ಅದರಲ್ಲಿ ನೀಬ್ ಕರೋರಿ ಬಾಬಾ ಅವರ ಉಲ್ಲೇಖವಿದೆ. ಆಧ್ಯಾತ್ಮಿಕ ಗುರುವನ್ನು ಭೇಟಿಯಾಗಲು ಸ್ಟೀವ್ ಜಾಬ್ಸ್ ಕೂಡ ಬಂದಿದ್ದರು. ಸ್ವಾಮಿ ವಿವೇಕಾನಂದರ ಗುರು ರಾಮಕೃಷ್ಣ ಪರಮಹಂಸ ಅವರಿಗೂ ಶಾಲಾ ಶಿಕ್ಷಣ ದೊರೆತಿರಲಿಲ್ಲ ಎಂದು ತಿಳಿಸಿದರು.
ಹೊಸ ಪೀಳಿಗೆ ಕುರಿತು ತಮ್ಮ ವೈಯಕ್ತಿಕ ಅನುಭವ ಹಂಚಿಕೊಂಡ ಭಾಗವತ್, ಹೊಸ ಪೀಳಿಗೆಯವರು ಹಿಂದಿನ ಪೀಳಿಗೆಯವರಿಗಿಂತ ಹೆಚ್ಚು ಪ್ರಾಮಾಣಿಕರಾಗಿದ್ದಾರೆ. ಅವರಲ್ಲಿ ಸಹಜವಾಗಿಯೇ ಹೆಚ್ಚಿನ ಧೈರ್ಯವಿದೆ ಎಂದು ಹೇಳಿದರು.
ವಿದೇಶಗಳಿಗೆ ತೆರಳಿ ಉದ್ಯೋಗ ಹಾಗೂ ಉತ್ತಮ ಅವಕಾಶಗಳನ್ನು ಪಡೆಯುವ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ಅವರು, ವಿದೇಶಗಳಲ್ಲಿ ಎಲ್ಲವೂ ದೊರೆಯಬಹುದು. ಆದರೆ ನಿಮ್ಮ ಗುರುತು ನಿಮ್ಮ ದೇಶದಿಂದ ಬಂದಿದೆ. ದೇಶದಿಂದ ನಮಗೆ ಸಾಕಷ್ಟು ದೊರೆತಿದೆ. ಭಾರತದ ಅನ್ನ-ನೀರಿನಿಂದಲೇ ನಮ್ಮ ದೇಹ ರೂಪುಗೊಂಡಿದೆ. ದೇಹಕ್ಕೆ ಅಗತ್ಯವಿರುವಷ್ಟನ್ನು ಮಾತ್ರ ನಮ್ಮಲ್ಲಿಟ್ಟುಕೊಂಡು ಉಳಿದುದನ್ನು ಸಮಾಜ ಮತ್ತು ದೇಶಕ್ಕೆ ಸಮರ್ಪಿಸಬೇಕು ಎಂದು ಕರೆ ನೀಡಿದರು.
ಭಾರತವು ವಿಶ್ವದ ಸೈನಿಕ ಅಥವಾ ಆರ್ಥಿಕ ಮಹಾಶಕ್ತಿಯಾಗಬೇಕೆಂಬುದು ಗುರಿಯಲ್ಲ. ಬದಲಾಗಿ ವಿಶ್ವಗುರುವಿನ ಸ್ಥಾನದಲ್ಲಿ ಭಾರತವನ್ನು ಪುನಃ ಪ್ರತಿಷ್ಠಾಪಿಸಬೇಕು. ‘ಮಾನವೀಯತೆಯ ಜ್ಞಾನ’ವೇ ಭಾರತದ ಗುರುತಾಗಿದೆ ಎಂದು ಡಾ. ಭಾಗವತ್ ಹೇಳಿದರು.
ಕಾರ್ಯಕ್ರಮದ ಪ್ರಸ್ತಾವನೆಯನ್ನು ಐಐಎಲ್‌ಎಂನ ಅಧ್ಯಕ್ಷ ಅನಿಲ್ ರೈ ಮಂಡಿಸಿದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.