
ಕೋಲಾರ, 12 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಬೆಲ್ರೈಸ್ ಕಂಪನಿಯಲ್ಲಿ ದುಡಿಯುತ್ತಿರುವ ೧೪ ಮಂದಿ ಕಾರ್ಮಿಕರನ್ನು ಅಕ್ರಮವಾಗಿ ವರ್ಗಾವಣೆ ಹಾಗೂ ವಜಾ ಮಾಡಲಾಗಿದೆ. ಜಿಲ್ಲಾಡಳಿತವು ಆಡಳಿತ ಮಂಡಳಿಯೊ0ದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಒತ್ತಾಯಿಸಿದರು.
ಕೋಲಾರದಲ್ಲಿ ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂಪನಿಯಲ್ಲಿ ಸುಮಾರು ೧೫೦ ಖಾಯಂ ಹಾಗೂ ೧,೦೫೦ ಗುತ್ತಿಗೆ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಕಾರ್ಮಿಕರು ಸಂಘ ರಚಿಸಲು ಕಾರ್ಮಿಕ ಇಲಾಖೆಗೆ ಅರ್ಜಿ ಸಲ್ಲಿಸಿದ್ದು, ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಈ ಹಂತದಲ್ಲಿ ಆಡಳಿತ ಮಂಡಳಿಯು ಕಾರ್ಮಿಕರಿಗೆ ಕಿರುಕುಳ, ಬೆದರಿಕೆ ಹಾಗೂ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿದರು.
ಸಿಐಟಿಯು ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ ಮಾತನಾಡಿ, ‘ಯೂನಿಯನ್ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಏಳು ಮಂದಿಯನ್ನು ಪುಣೆ, ಔರಂಗಾಬಾದ್, ರಾಜಸ್ಥಾನ ಸೇರಿದಂತೆ ವಿವಿಧ ಘಟಕಗಳಿಗೆ ವರ್ಗಾಯಿಸಲಾಗಿದೆ. ಕೆಲವರಿಗೆ ವಜಾ ನೋಟಿಸ್ ನೀಡಲಾಗಿದೆ. ಈ ಕ್ರಮಗಳನ್ನು ಹಿಂಪಡೆಯುವAತೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ ಎಂದರು.
ಕಾರ್ಖಾನೆಯಲ್ಲಿ ಸುರಕ್ಷತಾ ಪರಿಕರಗಳ ಕೊರತೆಯಿಂದ ಅಪಘಾತಗಳು ಸಂಭವಿಸುತ್ತಿದ್ದು, ಕಾರ್ಮಿಕರು ಕೈ ಮತ್ತು ಬೆರಳುಗಳನ್ನು ಕಳೆದುಕೊಂಡಿದ್ದಾರೆ. ಸಂತ್ರಸ್ತರಿಗೆ ಪರಿಹಾರ ಹಾಗೂ ಹಗುರ ಕೆಲಸ ನೀಡಿಲ್ಲ. ಹೆಚ್ಚುವರಿ ಕೆಲಸಕ್ಕೆ ವೇತನ ನೀಡದೆ, ವಾರದ ರಜೆ ನಿರಾಕರಿಸಲಾಗುತ್ತಿದೆ. ಶೌಚಾಲಯ, ಕುಡಿಯುವ ನೀರು, ವೈದ್ಯಕೀಯ ಹಾಗೂ ಅಂಬುಲೆನ್ಸ್ ಸೌಲಭ್ಯಗಳ ಕೊರತೆಯಿದೆ ಎಂದು ದೂರಿದರು.
ಕಾರ್ಮಿಕ ಕಾನೂನು ಉಲ್ಲಂಘನೆಗಳ ಕುರಿತು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ. ಸಮಸ್ಯೆ ಬಗೆಹರಿಸದಿದ್ದರೆ ಕಂಪನಿ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು, ಪೊಲೀಸರಿಂದ ಅನುಮತಿ ಕೋರಲಾಗಿದೆ ಎಂದು ತಿಳಿಸಿದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎಂ.ಭೀಮರಾಜ್, ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಮಂಜುನಾಥ್, ಉಪಾಧ್ಯಕ್ಷ ದೇವಪ್ಪ, ಖಜಾಂಚಿ ದೂಲಕೇಶ್ವರ್ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್