
ಬೆಂಗಳೂರು, 11 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಜನರ ಆಕ್ರೋಶಕ್ಕೆ ಮಣಿದು ಲಾಲ್‌ಬಾಗ್ ಉದ್ಯಾನವನದ ಭೂಮಿ ಬಳಕೆ ವಿಚಾರದಿಂದ ಸರ್ಕಾರ ಹಿಂದೆ ಸರಿದಿರುವುದನ್ನು ಸ್ವಾಗತಿಸಿರುವ ಪ್ರತಿಪಕ್ಷ ನಾಯಕ ಆರ್. ಅಶೋಕ, ಸಾವಿರಾರು ಕೋಟಿ ರೂಪಾಯಿ ವೆಚ್ಚದ ಸುರಂಗ ರಸ್ತೆ ಯೋಜನೆಯನ್ನೂ ಸಂಪೂರ್ಣವಾಗಿ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.
ಎಕ್ಸ್‌ನಲ್ಲಿ ಹೇಳಿಕೆ ನೀಡಿರುವ ಅವರು, ಬೆಂಗಳೂರಿನ ಶ್ವಾಸಕೋಶದಂತಿರುವ ಐತಿಹಾಸಿಕ ಲಾಲ್‌ಬಾಗ್ ಉದ್ಯಾನವನದ ಭೂಮಿಯನ್ನು ಬಳಸಿಕೊಳ್ಳುವ ಸರ್ಕಾರದ ನಿರ್ಧಾರ ಪರಿಸರ ಪ್ರೇಮಿಗಳು ಹಾಗೂ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಸರ್ಕಾರ ಹಿಂದೆ ಸರಿದಿರುವುದು ಪರಿಸರ ಕಾಳಜಿಯಿಂದಲ್ಲ, ಅನಿವಾರ್ಯತೆಯಿಂದ ಎಂದು ಟೀಕಿಸಿದ್ದಾರೆ.
ಬೆಂಗಳೂರಿಗೆ ವೈಜ್ಞಾನಿಕ ಸಂಚಾರ ಪರಿಹಾರಗಳ ಅಗತ್ಯವಿದ್ದು, ಸುರಂಗ ರಸ್ತೆ ಯೋಜನೆಗಳ ಬದಲು ಮೆಟ್ರೊ ಹಾಗೂ ಉಪನಗರ ರೈಲು ಯೋಜನೆಗಳಿಗೆ ಆದ್ಯತೆ ನೀಡಬೇಕು. ಹಲವು ವರ್ಷಗಳಿಂದ ವಿಳಂಬವಾಗಿರುವ ಉಪನಗರ ರೈಲು ಯೋಜನೆಗೆ ವೇಗ ನೀಡಬೇಕು ಹಾಗೂ ಮೆಟ್ರೊ ಕಾಮಗಾರಿಗಳನ್ನು ತ್ವರಿತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಗರದ ಹೊಸ ಬಡಾವಣೆಗಳಿಗೆ ಬಿಎಂಟಿಸಿ ಬಸ್ ಸಂಪರ್ಕ ಕಲ್ಪಿಸುವ ಮೂಲಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಬೇಕು. ಮೆಟ್ರೊ ಸಂಪರ್ಕಿತ ಪೂರಕ ಬಸ್ ಸೇವೆಗಳನ್ನು ವಿಸ್ತರಿಸಿ, ಆರಂಭಿಕ ಹಾಗೂ ಕೊನೆಯ ಹಂತದ ಸಂಚಾರದ ಸಮಸ್ಯೆ ಪರಿಹರಿಸಿದರೆ ದ್ವಿಚಕ್ರ ವಾಹನಗಳ ದಟ್ಟಣೆ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.
ಸಾಮಾನ್ಯ ಜನರಿಗೆ ಸುಸಜ್ಜಿತ, ಸುಗಮ ಹಾಗೂ ಕೈಗೆಟುಕುವ ಸಾರ್ವಜನಿಕ ಸಾರಿಗೆ ಒದಗಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಬೇಕು. ರಿಯಲ್ ಎಸ್ಟೇಟ್ ಹಾಗೂ ಕಮಿಷನ್‌ಗಾಗಿ ಸಾವಿರಾರು ಕೋಟಿ ರೂಪಾಯಿ ಸುರಂಗ ರಸ್ತೆ ಯೋಜನೆಗೆ ವ್ಯಯಿಸುವುದು ಬೇಜವಾಬ್ದಾರಿ ಮತ್ತು ಅಕ್ಷಮ್ಯ ನಡೆ ಎಂದು ಅಶೋಕ ಆರೋಪಿಸಿದ್ದಾರೆ.
ಮೊದಲು ನಗರದ ರಸ್ತೆ ಗುಂಡಿಗಳನ್ನು ಮುಚ್ಚಿ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಬೇಕು. ಬಳಿಕವೇ ಕೋಟ್ಯಂತರ ರೂಪಾಯಿ ವೆಚ್ಚದ ಸುರಂಗ ರಸ್ತೆ ಯೋಜನೆ ಕುರಿತು ಯೋಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಬೆಂಗಳೂರಿನ ಪರಿಸರ ಹಾಗೂ ಸಾರ್ವಜನಿಕರ ತೆರಿಗೆ ಹಣವನ್ನು ದುರ್ಬಳಕೆ ಮಾಡಲು ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.