ಬರ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದರೆ ನಿರ್ದಾಕ್ಷಿಣ್ಯ ಕ್ರಮ ; ಜಿಲ್ಲಾಧಿಕಾರಿ ಎಚ್ಚರಿಕೆ
ಬರ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದರೆ ನಿರ್ದಾಕ್ಷಿಣ್ಯ ಕ್ರಮ ; ಜಿಲ್ಲಾಧಿಕಾರಿ ಎಚ್ಚರಿಕೆ
ಕೋಲಾರ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಬರ ನಿರ್ವಹಣೆಯ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದರು.


ಕೋಲಾರ, 10 ಸೆಪ್ಟೆಂಬರ್ (ಹಿ.ಸ)

ಆ್ಯಂಕರ್ : ಜಿಲ್ಲೆಯಲ್ಲಿ ಎದುರಾಗಿರುವ ತೀವ್ರ ಬರಗಾಲದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ನಿರ್ಲಕ್ಷ್ಯ ತೋರುವ ಅಥವಾ ವಿಳಂಬ ಧೋರಣೆ ಅನುಸರಿಸುವ ಅಧಿಕಾರಿಗಳನ್ನು ನಿರ್ದಾಕ್ಷಿಣ್ಯವಾಗಿ ಅಮಾನತು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

ಕೋಲಾರದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಒದಗಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಅನುದಾನ ಲಭ್ಯವಿದ್ದರೂ, ಟಾಸ್ಕ್ ಫೋರ್ಸ್ ಅನುಮೋದನೆ ನೆಪದಲ್ಲಿ ತಿಂಗಳುಗಟ್ಟಲೆ ಕಾಮಗಾರಿ ವಿಳಂಬ ಮಾಡುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಜೂನ್ನಿಂದ ಸೆಪ್ಟೆಂಬರ್ವರೆಗೆ ಶೇ.೪೯ರಷ್ಟು ಮಳೆ ಕೊರತೆಯಾಗಿದ್ದು, ೩೯ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಹಾಗೂ ತೀವ್ರ ಮೇವಿನ ಕೊರತೆ ಎದುರಾಗಿದೆ. ಇದನ್ನು ಸರಿದೂಗಿಸಲು ೪೫ ಸಾವಿರ ಮೇವಿನ ಮಿನಿ ಕಿಟ್ಗಳಿಗೆ ಬೇಡಿಕೆ ಇಡಲಾಗಿದ್ದು, ಸರ್ಕಾರ ಬಿಡುಗಡೆ ಮಾಡಿರುವ ೨೫ ಕೋಟಿ ರೂ. ಅನುದಾನದಡಿ ಜಿಲ್ಲೆಗೆ ೧೨,೬೦೦ ಕಿಟ್ಗಳು ಮಂಜೂರಾಗಿವೆ. ಈ ಕಿಟ್ಗಳನ್ನು ತಕ್ಷಣವೇ ವಿತರಿಸಬೇಕು ಹಾಗೂ ಹಸಿರು ಮೇವು ಬೆಳೆಯಲು ೪೫-೬೦ ದಿನ ಬೇಕಾಗಿರುವುದರಿಂದ, ತುರ್ತಾಗಿ ನೆರೆಯ ಜಿಲ್ಲೆಗಳಾದ ತುಮಕೂರು, ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ ಹಾಗೂ ಆಂಧ್ರಪ್ರದೇಶದಿAದ ಟನ್ಗೆ ೩೦೦ ರಿಂದ ೪೦೦ ರೂ. ದರದಲ್ಲಿ ಒಣ ಮೇವು ಖರೀದಿಸಿ, ಸಾರಿಗೆ ವೆಚ್ಚ ಭರಿಸಿ ತರಿಸಿಕೊಳ್ಳಲು ಪಶುಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಕುಡಿಯುವ ನೀರಿನ ಕಾಮಗಾರಿಗಳಿಗಾಗಿ ಸರ್ಕಾರವು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ೧ ಕೋಟಿ ರೂ. ಬಿಡುಗಡೆ ಮಾಡಿದ್ದು, ಈಗಾಗಲೇ ೧೬೩ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ ೩.೭೦ ಕೋಟಿ ರೂ. ವೆಚ್ಚವಾಗಿದ್ದು, ೨೩ ಲಕ್ಷ ರೂ. ಉಳಿತಾಯವಾಗಿದೆ. ಉಳಿತಾಯದ ಹಣವನ್ನು ಟಾಸ್ಕ್ ಫೋರ್ಸ್ ಅನುಮೋದನೆ ಪಡೆದೇ ಬಳಸಬೇಕು. ಶಾಸಕರ ನೇತೃತ್ವದ ಟಾಸ್ಕ್ ಫೋರ್ಸ್ ಸಮಿತಿಗಳಿಂದ ಕ್ರಿಯಾಯೋಜನೆಗೆ ಅನುಮೋದನೆ ಪಡೆಯಲು ಕೋಲಾರ, ಬಂಗಾರಪೇಟೆ ಸೇರಿದಂತೆ ಕೆಲವು ಕಡೆ ಒಂದು ತಿಂಗಳಿಗೂ ಹೆಚ್ಚು ಕಾಲ ವಿಳಂಬವಾಗಿರುವುದನ್ನು ತರಾಟೆಗೆ ತೆಗೆದುಕೊಂಡ ಡಿಸಿ, ಕೇವಲ ಕಡತ ಹಿಡಿದುಕೊಂಡು ಕೂರದೆ ಖುದ್ದಾಗಿ ಶಾಸಕರ ಬಳಿ ತೆರಳಿ ಸಹಿ ಪಡೆದು ಕಾಮಗಾರಿ ಆರಂಭಿಸಲು ತಹಶೀಲ್ದಾರ್ ಹಾಗೂ ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿಗಳಿಗೆ ಒಂದು ವಾರದ ಗಡುವು ನೀಡಿದರು. ಅಲ್ಲದೆ, ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ಲಭ್ಯವಿರುವ ಅನುದಾನದಲ್ಲಿ ಶೇ.೫೦ ರಷ್ಟು ಹಣವನ್ನು ಕಡ್ಡಾಯವಾಗಿ ಕುಡಿಯುವ ನೀರಿಗಾಗಿ ಮಾತ್ರ ಮೀಸಲಿಡಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಅಧಿಕಾರಿಗಳು ವಾಸ್ತವಿಕ ನೆಲೆಗಟ್ಟಿನಲ್ಲಿ ಕೆಲಸ ಮಾಡಬೇಕು. ಅಂತರ್ಜಲ ಕುಸಿದು ನೀರಿಲ್ಲದ ಬೋರ್ವೆಲ್ಗಳಿಗೆ ಪೈಪ್ಲೈನ್ ಅಳವಡಿಸಿ ಸುಳ್ಳು ಬಿಲ್ ಮಾಡುವಂತಹ ಕಳಪೆ ಹಾಗೂ ಅನಗತ್ಯ ಕಾಮಗಾರಿಗಳನ್ನು ಕೈಗೊಳ್ಳಬಾರದು ಎಂದು ಎಂಜಿನಿಯರ್ಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಎಲ್ಲಿ ನೈಜವಾಗಿ ನೀರಿನ ಅವಶ್ಯಕತೆ ಇದೆಯೋ ಅಲ್ಲಿ ಮಾತ್ರ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಸಾರ್ವಜನಿಕರಿಂದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ದೂರುಗಳು ಬಂದರೆ ಅಥವಾ ಕಾಮಗಾರಿ ಅನುಷ್ಠಾನದಲ್ಲಿ ನಿರ್ಲಕ್ಷ್ಯ ಕಂಡುಬ0ದರೆ ತಹಶೀಲ್ದಾರ್, ಇಒ ಹಾಗೂ ಪಿಆರ್ಇಡಿ ಎಂಜಿನಿಯರ್ಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿ ಅಮಾನತು ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಸಭೆಯಲ್ಲಿ ಸ್ಪಷ್ಟಪಡಿಸಿದರು.

ಸಭೆಯಲ್ಲಿ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್ ಪಿ ಬಾಗೇವಾಡಿ, ಅಪರ ಜಿಲ್ಲಾಧಿಕಾರಿ ಎಸ್. ಎಂ. ಮಂಗಳ, ಎಲ್ಲಾ ತಾಲ್ಲೂಕು ತಹಸೀಲ್ದಾರ್ಗಳು, ಜಂಟಿ ಕೃಷಿ ನಿರ್ದೇಶಕಿ ಮಂಜುಳ, ತೋಟಗಾರಿಕೆ ಉಪನಿರ್ದೇಶಕ ಕುಮಾರಸ್ವಾಮಿ, ಪಶುಪಾಲನ ಇಲಾಖೆಯ ಡಾ. ರಮೇಶ್, ಕೋಲಾರ ಪೌರಯುಕ್ತ ವೆಂಕಟೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶ್ರೀನಿವಾಸ್, ಯೋಜನಾ ನಿರ್ದೇಶಕರು ಅಂಬಿಕಾ ಪಾಲ್ಗೊಂಡಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande