
ನವದೆಹಲಿ, 10 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಸಿಂಗಾಪುರ ವಂಚನೆ ಪ್ರಕರಣದಲ್ಲಿ 2013ರಿಂದ ತಲೆಮರೆಸಿಕೊಂಡಿದ್ದ ಆರೋಪಿ ಹರ್ನೇಕ್ ಸಿಂಗ್‌ನನ್ನು ಅಮೆರಿಕದಿಂದ ಭಾರತಕ್ಕೆ ಗಡಿಪಾರು ಮಾಡಿಸಿಕೊಂಡು ಬಂದಿರುವ ಸಿಬಿಐ, ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ.
ಆರೋಪಿಯ ವಿರುದ್ಧ ಈಗಾಗಲೇ ರೆಡ್ ಕಾರ್ನರ್ ನೋಟಿಸ್ ಹಾಗೂ ಲುಕ್‌ಔಟ್ ಸುತ್ತೋಲೆ ಹೊರಡಿಸಲಾಗಿತ್ತು. ಬಂಧಿತ ಹರ್ನೇಕ್ ಸಿಂಗ್‌ನನ್ನು ಶೀಘ್ರದಲ್ಲೇ ಹರಿಯಾಣದ ಪಂಚಕುಲದಲ್ಲಿರುವ ವಿಶೇಷ ನ್ಯಾಯಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಸಿಬಿಐ ತಿಳಿಸಿದೆ.
ಈ ಪ್ರಕರಣದಲ್ಲಿ 2016ರಲ್ಲಿ ಸಂಚು, ವಂಚನೆ, ನಕಲಿ ದಾಖಲೆ ಸೃಷ್ಟಿ, ನಕಲಿ ದಾಖಲೆಗಳ ಬಳಕೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ಕಲಂಗಳಡಿ ಎಫ್‌ಐಆರ್ ದಾಖಲಿಸಲಾಗಿತ್ತು.
ತನಿಖೆ ವೇಳೆ, 2013ರಲ್ಲಿ ಭಾರತದಿಂದ ಕಾರ್ಯಾಚರಿಸುತ್ತಿದ್ದ ವಂಚಕರು ಕೃತಕ ದೂರವಾಣಿ ಕರೆಗಳ ಮೂಲಕ ಸಿಂಗಾಪುರದಲ್ಲಿ ವಾಸಿಸುತ್ತಿದ್ದ ಹಾಗೂ ಕೆಲಸ ಮಾಡುತ್ತಿದ್ದ ಭಾರತೀಯರನ್ನು ಸಂಪರ್ಕಿಸುತ್ತಿದ್ದರು ಎಂಬುದು ಬೆಳಕಿಗೆ ಬಂದಿತ್ತು. ಕರೆ ಮಾಡಿದವರು ತಮ್ಮನ್ನು ಸಿಂಗಾಪುರದ ವಲಸೆ ಅಧಿಕಾರಿಗಳೆಂದು ಪರಿಚಯಿಸಿಕೊಂಡು, ವಿಮಾನ ನಿಲ್ದಾಣಕ್ಕೆ ಆಗಮಿಸುವ ವೇಳೆ ಅರ್ಜಿಯಲ್ಲಿ ತಪ್ಪು ಮಾಹಿತಿ ನೀಡಿರುವುದರಿಂದ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ದೇಶದಿಂದ ಗಡಿಪಾರು ಮಾಡಬಹುದು ಎಂದು ಬೆದರಿಸುತ್ತಿದ್ದರು.
ಬಳಿಕ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ದಂಡ ಅಥವಾ ಇತ್ಯರ್ಥ ಶುಲ್ಕದ ಹೆಸರಿನಲ್ಲಿ ವೆಸ್ಟರ್ನ್ ಯೂನಿಯನ್ ಹಣ ವರ್ಗಾವಣೆ ಮೂಲಕ ಭಾರತಕ್ಕೆ ಹಣ ಕಳುಹಿಸುವಂತೆ ಸಂತ್ರಸ್ತರನ್ನು ಒತ್ತಾಯಿಸಲಾಗುತ್ತಿತ್ತು. ವಂಚನೆಯಿಂದ ಸಂಗ್ರಹಿಸಿದ ಹಣವನ್ನು ಹರ್ನೇಕ್ ಸಿಂಗ್ ತನ್ನ ಸಹ ಆರೋಪಿಗಳಾದ ಆದಿತ್ಯ ಭಾರದ್ವಾಜ್ ಮತ್ತು ದೀಪಕ್ ಜೈನ್ ಅವರೊಂದಿಗೆ ಸೇರಿ ನಡೆಸುತ್ತಿದ್ದ ಹಣ ವರ್ಗಾವಣೆ ಕೇಂದ್ರದ ಮೂಲಕ ಸ್ವೀಕರಿಸುತ್ತಿದ್ದ ಎಂಬುದು ತನಿಖೆಯಿಂದ ದೃಢಪಟ್ಟಿದೆ ಎಂದು ಸಿಬಿಐ ತಿಳಿಸಿದೆ.
ಅಪರಾಧ ಎಸಗಿದ ಬಳಿಕ ಹರ್ನೇಕ್ ಸಿಂಗ್ 2013ರ ಮೇ ತಿಂಗಳಲ್ಲೇ ಭಾರತ ತೊರೆದು ಪರಾರಿಯಾಗಿದ್ದ. ನಂತರ ಅಕ್ರಮವಾಗಿ ಅಮೆರಿಕ ಪ್ರವೇಶಿಸಿ ಒಂದು ದಶಕಕ್ಕೂ ಹೆಚ್ಚು ಕಾಲ ಬಂಧನದಿಂದ ತಪ್ಪಿಸಿಕೊಂಡು ಬಂದಿದ್ದ ಎಂದು ಸಿಬಿಐ ಹೇಳಿದೆ.
ಹರ್ನೇಕ್ ಸಿಂಗ್ ತಲೆಮರೆಸಿಕೊಂಡಿದ್ದ ಅವಧಿಯಲ್ಲೇ ಪಂಚಕುಲದ ವಿಶೇಷ ನ್ಯಾಯಾಲಯದಲ್ಲಿ ಸಹ ಆರೋಪಿಗಳಾದ ಆದಿತ್ಯ ಭಾರದ್ವಾಜ್ ಮತ್ತು ದೀಪಕ್ ಜೈನ್ ವಿರುದ್ಧದ ವಿಚಾರಣೆ ಪೂರ್ಣಗೊಂಡಿತ್ತು. ಇಬ್ಬರನ್ನೂ 2025ರ ಮೇ 26ರಂದು ನ್ಯಾಯಾಲಯ ದೋಷಿಗಳೆಂದು ಘೋಷಿಸಿತ್ತು.
ಅಮೆರಿಕದ ನ್ಯಾಯಾಂಗ ಇಲಾಖೆಯ ಮೂಲಕ ಹರ್ನೇಕ್ ಸಿಂಗ್‌ಗೆ ಸಮನ್ಸ್ ಹಾಗೂ ಜಾಮೀನು ಪಡೆಯಬಹುದಾದ ವಾರಂಟ್‌ಗಳನ್ನು ಜಾರಿಗೊಳಿಸಲಾಗಿದ್ದರೂ, ಆತ ವಿಚಾರಣೆಗೆ ನ್ಯಾಯಾಲಯದ ಮುಂದೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪಂಚಕುಲದಲ್ಲಿರುವ ವಿಶೇಷ ಸಿಬಿಐ ನ್ಯಾಯಾಲಯವು 2024ರ ಏಪ್ರಿಲ್ 22ರಂದು ಆತನ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿತ್ತು.
ಬಳಿಕ ಸಿಬಿಐ ಇಂಟರ್‌ಪೋಲ್ ಮಾರ್ಗದ ಮೂಲಕ ಹರ್ನೇಕ್ ಸಿಂಗ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸುವಂತೆ ಕ್ರಮ ಕೈಗೊಂಡಿತ್ತು. ಅಲ್ಲದೆ, ಆತನ ವಿರುದ್ಧ ಲುಕ್‌ಔಟ್ ಸುತ್ತೋಲೆಯನ್ನೂ ಜಾರಿಗೊಳಿಸಲಾಗಿತ್ತು. ಅಮೆರಿಕದಿಂದ ಭಾರತಕ್ಕೆ ಗಡಿಪಾರು ಮಾಡಿಸಿಕೊಂಡು ಬಂದ ಬಳಿಕ ದೆಹಲಿ ವಿಮಾನ ನಿಲ್ದಾಣದಲ್ಲಿ ಆತನನ್ನು ಬಂಧಿಸಲಾಗಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.