ವಿರೋಧದ ರಾಜಕೀಯ ಮೀರಿ ಭಾರತದ ಪ್ರಗತಿಯನ್ನು ಕಾಂಗ್ರೆಸ್ ಸ್ವಾಗತಿಸಲಿ: ಬಿಜೆಪಿ
ನವದೆಹಲಿ, 10 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಭಾರತದಲ್ಲಿ ಸೆಪ್ಟೆಂಬರ್ 12 ಮತ್ತು 13ರಂದು ನಡೆಯಲಿರುವ ಬ್ರಿಕ್ಸ್ ಶೃಂಗಸಭೆ ಹಿನ್ನೆಲೆಯಲ್ಲಿ ರಾಜಕೀಯ ವಾಕ್ಸಮರ ತೀವ್ರಗೊಂಡಿದೆ. ಬ್ರಿಕ್ಸ್‌ನಿಂದ ಭಾರತಕ್ಕೆ ದೊರೆತಿರುವ ಸ್ಪಷ್ಟ ಪ್ರಯೋಜನಗಳ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಪ್ರಶ್ನಿಸಿ
Ashish Usha Agrawal file photo


ನವದೆಹಲಿ, 10 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಭಾರತದಲ್ಲಿ ಸೆಪ್ಟೆಂಬರ್ 12 ಮತ್ತು 13ರಂದು ನಡೆಯಲಿರುವ ಬ್ರಿಕ್ಸ್ ಶೃಂಗಸಭೆ ಹಿನ್ನೆಲೆಯಲ್ಲಿ ರಾಜಕೀಯ ವಾಕ್ಸಮರ ತೀವ್ರಗೊಂಡಿದೆ. ಬ್ರಿಕ್ಸ್‌ನಿಂದ ಭಾರತಕ್ಕೆ ದೊರೆತಿರುವ ಸ್ಪಷ್ಟ ಪ್ರಯೋಜನಗಳ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಪ್ರಶ್ನಿಸಿರುವ ಬೆನ್ನಲ್ಲೇ ಬಿಜೆಪಿ ತಿರುಗೇಟು ನೀಡಿದೆ.

ವಿರೋಧದ ರಾಜಕೀಯದಿಂದ ಕಾಂಗ್ರೆಸ್ ಹಾಗೂ ಅದರ ನಾಯಕರು ಹೊರಬಂದು ಭಾರತದ ಪ್ರಗತಿಯನ್ನು ಸ್ವಾಗತಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಮಾಧ್ಯಮ ಸಹ ಸಂಯೋಜಕ ಆಶಿಷ್ ಊಷಾ ಅಗರವಾಲ್ ಹೇಳಿದ್ದಾರೆ.

ಚಿದಂಬರಂ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸಿರುವ ಅಗರವಾಲ್, ಭಾರತವು ಬ್ರಿಕ್ಸ್‌ನಂತಹ ಮಹತ್ವದ ಜಾಗತಿಕ ವೇದಿಕೆಯ ಆತಿಥ್ಯ ವಹಿಸುತ್ತಿದೆ. ವಿಶ್ವವೇ ಭಾರತದ ಹೆಚ್ಚುತ್ತಿರುವ ಶಕ್ತಿ ಮತ್ತು ಪಾತ್ರವನ್ನು ಒಪ್ಪಿಕೊಳ್ಳುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಸಾಧನೆಗಳನ್ನು ಗುರುತಿಸುವ ಬದಲು ಪ್ರಶ್ನೆಗಳನ್ನೇ ಎತ್ತುತ್ತಿದೆ ಎಂದು ಟೀಕಿಸಿದ್ದಾರೆ.

ಹೇಳಿಕೆ ನೀಡುವ ಮುನ್ನ ಅಂಕಿ-ಅಂಶಗಳನ್ನು ಪರಿಶೀಲಿಸುವಂತೆ ಚಿದಂಬರಂ ಅವರಿಗೆ ಸಲಹೆ ನೀಡಿರುವ ಅಗರವಾಲ್, ಬ್ರಿಕ್ಸ್‌ನಲ್ಲಿ ಭಾರತದ ವ್ಯಾಪಾರ ಮತ್ತು ಪ್ರಭಾವ ನಿರಂತರವಾಗಿ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ. ಭಾರತ ಇದೀಗ ವಿಶ್ವದ ಮುಂಚೂಣಿ ರಾಷ್ಟ್ರಗಳ ಸಾಲಿನಲ್ಲಿ ಮಾತ್ರವಲ್ಲದೆ, ನಾಯಕತ್ವದ ಸಾಲಿನಲ್ಲಿಯೂ ನಿಂತಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಜಿ20, 5ಜಿ ಹಾಗೂ ಡಿಜಿಟಲ್ ಕ್ರಾಂತಿಯನ್ನು ಉಲ್ಲೇಖಿಸಿದ ಅಗರವಾಲ್, ಭಾರತ ಮುನ್ನಡೆಯುತ್ತಿದ್ದಾಗ ಪ್ರಶ್ನೆಗಳನ್ನು ಎತ್ತುವುದು ಮತ್ತು ಜಗತ್ತು ಭಾರತವನ್ನು ಗೌರವಿಸಿದಾಗಲೂ ಅನುಮಾನ ವ್ಯಕ್ತಪಡಿಸುವುದು ಕಾಂಗ್ರೆಸ್‌ನ ಹಳೆಯ ಅಭ್ಯಾಸವಾಗಿದೆ ಎಂದು ಆರೋಪಿಸಿದ್ದಾರೆ.

ಇತ್ತೀಚಿನ ಎರಡು-ಮೂರು ಬ್ರಿಕ್ಸ್ ಶೃಂಗಸಭೆಗಳಿಂದ ಭಾರತಕ್ಕೆ ಯಾವುದೇ ಗಮನಾರ್ಹವಾದ ಸ್ಪಷ್ಟ ಲಾಭ ಅಥವಾ ಫಲಿತಾಂಶ ಕಂಡುಬಂದಿಲ್ಲ ಎಂದು ಪಿ. ಚಿದಂಬರಂ ಹೇಳಿದ್ದರು. ಬ್ರಿಕ್ಸ್ ಜತೆಗೆ ಜಿ20, ಶಾಂಘೈ ಸಹಕಾರ ಸಂಘಟನೆ ಹಾಗೂ ಕ್ವಾಡ್‌ನಂತಹ ಬಹುಪಕ್ಷೀಯ ವೇದಿಕೆಗಳಲ್ಲಿ ಭಾರತದ ಭಾಗವಹಿಸುವಿಕೆಯಿಂದ ದೊರೆತ ಪ್ರಯೋಜನಗಳ ಬಗ್ಗೆಯೂ ಅವರು ಪ್ರಶ್ನೆ ಎತ್ತಿದ್ದರು.

ಇದರ ನಡುವೆ, ಭಾರತದ ಬ್ರಿಕ್ಸ್ ಅಧ್ಯಕ್ಷತೆಯ ಅವಧಿಯಲ್ಲಿ ವ್ಯಾಪಾರ ಮತ್ತು ಆರ್ಥಿಕ ಸಹಕಾರಕ್ಕೆ ಸಂಬಂಧಿಸಿದಂತೆ ಹಲವು ಉಪಕ್ರಮಗಳು ನಡೆದಿವೆ ಎಂದು ಬಿಜೆಪಿ ತಿಳಿಸಿದೆ. ಆಗಸ್ಟ್‌ನಲ್ಲಿ ಜೈಪುರದಲ್ಲಿ ನಡೆದ ಬ್ರಿಕ್ಸ್ ವ್ಯಾಪಾರ ಸಚಿವರ ಸಭೆಯಲ್ಲಿ ‘ಬ್ರಿಕ್ಸ್ ಆರ್ಥಿಕ ಸಹಭಾಗಿತ್ವ 2030’ ಕಾರ್ಯತಂತ್ರವನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಪ್ರಗತಿ ಸಾಧಿಸಲಾಗಿತ್ತು. ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ವ್ಯಾಪಾರ ಹಣಕಾಸು ಹೆಚ್ಚಿಸುವುದು ಸೇರಿದಂತೆ ಹಲವು ವಿಷಯಗಳಲ್ಲಿ ಒಮ್ಮತ ಮೂಡಿತ್ತು ಎಂದು ಅಗರವಾಲ್ ಹೇಳಿದ್ದಾರೆ.

ಮೋದಿ ಸರ್ಕಾರವನ್ನು ವಿರೋಧಿಸುವ ಭರದಲ್ಲಿ ದೇಶದ ಸಾಧನೆಗಳನ್ನೂ ವಿರೋಧಿಸಬಾರದು. ವಿರೋಧದ ರಾಜಕೀಯದಿಂದ ಹೊರಬಂದು ಭಾರತದ ಪ್ರಗತಿಯನ್ನು ಸ್ವಾಗತಿಸುವ ಮನೋಭಾವವನ್ನು ಕಾಂಗ್ರೆಸ್ ಬೆಳೆಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande